ಭಾನುವಾರ, ನವೆಂಬರ್ 27, 2022
20 °C
ತೇವಾಂಶ ಹೆಚ್ಚಳ, ಶೀತಬಾಧೆಗೆ ಸಿಲುಕಿದ ಭತ್ತ

ಅಕಾಲಿಕ ಮಳೆ: ಭತ್ತ ಒಣಗಿಸಲು ರೈತರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲೇಬೆನ್ನೂರು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮುಂಚಿತವಾಗಿ ನಾಟಿ ಮಾಡಿದ್ದ ಮಳೆಗಾಲದ ಭತ್ತದ ಬೆಳೆ ಒಕ್ಕಲು ಕಾರ್ಯ ನಡೆಯುತ್ತಿದ್ದು, ಈಗ ಜಡಿ ಮಳೆ ಸುರಿಯುತ್ತಿರುವುದರಿಂದ ರೈತರ ನೆಮ್ಮದಿ ಕೆಡಿಸಿದೆ.

ಭದ್ರಾ ಅಚ್ಚುಕಟ್ಟು ಪ್ರದೇಶದ ದೇವರಬೆಳಕೆರೆ, ಹೊಳೆಸಾಲಿನಲ್ಲಿ ಪ್ರದೇಶ, ನೀರಿನ ವ್ಯವಸ್ಥೆ ಇರುವೆಡೆ ಮುಂಚಿತವಾಗಿ ಕೃಷಿ ಚಟುವಟಿಕೆ ಆರಂಭ ಮಾಡಿದ್ದ ಕಡೆಗಳಲ್ಲಿ ಆರ್‌ಎನ್‌ಆರ್ ಮಾದರಿಯ ಭತ್ತದ ಕಟಾವು ಕಾರ್ಯ ಭರದಿಂದ
ಸಾಗಿದೆ.

ಮೂಡು ಗಾಳಿ ಬೀಸಿದೊಡನೆ ಭತ್ತದ ಬೆಳೆ ಒಣಗಿವೆ. ಮೂರ್ನಾಲ್ಕು ದಿನಗಳಿಂದ ಮೋಡ ಮುಸುಕಿದ ವಾತಾವರಣ, ಜಡಿ ಮಳೆ ಬರುತ್ತಿದ್ದು ಭತ್ತದ ಒಕ್ಕಲಿಗೆ ಅಡ್ಡಿಯಾಗಿದೆ. ಇನ್ನೊಂದೆಡೆ ಶೀತ ಬಾಧೆ ಹೆಚ್ಚಾಗಿ ಕಟಾವು ಯಂತ್ರ ಹೊಲದೊಳಗೆ ಇಳಿಸಲು ಆಗುತ್ತಿಲ್ಲ. ಎತ್ತರದ ಪ್ರದೇಶದಲ್ಲಿ ಬೆಳೆದ ಭತ್ತ ಕಟವಾಗಿದ್ದು ಒಣಗಿಸುವುದು ಕಷ್ಟವಾಗಿದೆ ಎಂದರು ಬೂದಿಹಾಳು ಗ್ರಾಮದ ರೈತರು ಮಾಹಿತಿ ನೀಡಿದರು.

ರಾಶಿ ಮಾಡಿರುವ ಭತ್ತ ಒಣಗಿಸದಿದ್ದರೆ ಕಾವು ಬಂದು ಬಣ್ಣ ಕೆಡುತ್ತದೆ ಎಂದು ರೈತ ತಿಪ್ಪೇಶ್ ತಿಳಿಸಿದರು. ಭತ್ತ ಒಣಗಿಸಲು ಹೆಚ್ಚಿನ ಸಂಖ್ಯೆಯ ಕೃಷಿ ಕಾರ್ಮಿಕರನ್ನು ತೆಗೆದುಕೊಂಡಿದ್ದೇನೆ ಎಂದರು.

ತೇವಾಂಶ ಹೆಚ್ಚು ಇರುವ ಭತ್ತವನ್ನು ವ್ಯಾಪಾರಿಗಳು ಕೊಳ್ಳುವುದಿಲ್ಲ. ಒತ್ತಡ ಹಾಕಿದರೆ ಬಾಯಿಗೆ ಬಂದ ಬೆಲೆಗೆ ಕೇಳುತ್ತಾರೆ. ಪ್ರತಿ ಎಕರೆಗೆ ಭತ್ತ ಬೆಳೆಯಲು ₹ 30,000 ಖರ್ಚು ಬರುತ್ತಿದೆ. ಆದರೆ ಈ ಬಾರಿ ಇಳುವರಿ, ಬೆಲೆ ಎರಡೂ ಕುಸಿದಿದೆ. ಪ್ರತಿ ಕ್ವಿಂಟಲ್‌ಗೆ ₹ 2100 ರಿಂದ ₹ 2300 ತನಕ ಬಿಕರಿಯಾಗುತ್ತಿದೆ.

ಇದೇ ಪರಿಸ್ಥಿತಿ ಮುಂದುವರಿದರೆ ಭತ್ತ ಬೆಳೆಯುವುದರಿಂದ ಲಾಭ ಸಿಗದೇ ಭತ್ತದ ಬೆಳೆ ಹಾಕುವುದು ಬಿಡಬೇಕಾಗುತ್ತದೆ. ಇಲ್ಲವೇ ಬೆಳೆ ಪರಿವರ್ತನೆ ಮಾಡಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಬೇಸರ
ವ್ಯಕ್ತಪಡಿಸಿದರು.

ಇನ್ನೊಂದು ಕಡೆ ಈಗಾಗಲೆ ಕಟಾವು ಮಾಡಿ ಒಣಗಿಸಿರುವ ಭತ್ತದ ವ್ಯಾಪಾರ ಜೋರಾಗಿ ಸಾಗಿದೆ. ತುಮಕೂರು, ಬಂಗಾರಪೇಟೆ ಮೊದಲಾದ ಕಡೆ ಖಾಸಗಿ ವ್ಯಾಪಾರಿಗಳು ರೈತರಿಂದ ಕಡಿಮೆ ಬೆಲೆಗೆ ಭತ್ತ ಕೊಂಡು ರವಾನೆ ಮಾಡುತ್ತಿದ್ದಾರೆ.

‘ಸರ್ಕಾರ ಭತ್ತದ ಕಟಾವು ಆರಂಭವಾಗುತ್ತಿದ್ದಂತೆ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ತೆರೆದು ರೈತರಿಗೆ ಸಹಾಯ ಮಾಡಬೇಕು. ರೈತರಿಂದ ಭತ್ತ ಖಾಲಿಯಾದ ನಂತರ ತೆರೆದರೆ ಪ್ರಯೋಜನವಿಲ್ಲ’ ಭಾನುವಳ್ಳಿ ಕೊಟ್ರೇಶ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು