ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆಯ 7 ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ

Last Updated 16 ಜನವರಿ 2021, 2:29 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾಗೆ ಲಸಿಕೆ ಸಿದ್ಧವಾಗಿದ್ದು, ಶನಿವಾರ ಮೊದಲ ಹಂತದ ಲಸಿಕೆ ನೀಡಿಕೆ ಕಾರ್ಯ ಜಿಲ್ಲೆಯಲ್ಲಿ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಲಸಿಕೆ ಕುರಿತು ಪರಿಶೀಲನೆ ನಡೆಸಿ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡುವರು. ಅವರು ಚಾಲನೆ ನೀಡಿದ ನಂತರ ಜಿಲ್ಲೆಗಳಲ್ಲಿ ಲಸಿಕೆ ನೀಡಬೇಕು ಎಂದು ನಿರ್ದೇಶನವಿದ್ದು, ಅದರಂತೆ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಆರೋಗ್ಯ ಇಲಾಖೆಯ 19,070 ಆರೋಗ್ಯ ಕಾರ್ಯಕರ್ತರು ನೋಂದಾಯಿಸಿ
ಕೊಂಡಿದ್ದು, ಇದರಲ್ಲಿ ‘ಡಿ’ ಗ್ರೂಪ್ ನೌಕರರಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ ಲಸಿಕೆ ನೀಡಲಾಗುವುದು’ ಎಂದು
ಹೇಳಿದರು.

‘6,826 ಸರ್ಕಾರಿ ಹಾಗೂ 12,194 ಖಾಸಗಿ ಆರೋಗ್ಯ ಕ್ಷೇತ್ರದ ಕಾರ್ಯಕರ್ತರು ಲಸಿಕೆ ಪಡೆಯಲಿದ್ದಾರೆ. ಜಿಲ್ಲೆಗೆ 13,500 ಡೋಸ್ ಲಸಿಕೆಗಳು ಬಂದಿದ್ದು, ಎಲ್ಲಾ ಲಸಿಕೆಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಲಾಗಿದೆ. ಅಲ್ಲದೇ ಪೊಲೀಸ್ ಭದ್ರತೆ ಒದಗಿಸಲಾಗಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಒಟ್ಟು 36 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಇಂದು 7 ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತದೆ. ಎಲ್ಲಾ ತಾಲ್ಲೂಕು ಆಸ್ಪತ್ರೆ, ಸಿಜಿ ಆಸ್ಪತ್ರೆ, ಜೆಜೆಎಂಸಿ ಹಾಗೂ ಬಿಳಿಚೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲಾಗುವುದು. ಈ ಕೇಂದ್ರಗಳಲ್ಲಿ ಲಸಿಕೆ ತೆಗೆದುಕೊಂಡವರಿಗೆ ಪ್ರತಿಕೂಲ ಪರಿಣಾಮವಾದರೆ ತಕ್ಷಣ ಸ್ಪಂದಿಸಲು ಎಇಎಫ್‍ಐ ಕಿಟ್‍ಗಳು ಹಾಗೂ ನುರಿತ ವೈದ್ಯರು, ಆಂಬುಲೆನ್ಸ್ ಸೇರಿ ಅಗತ್ಯ ಮಾನವ ಸಂಪನ್ಮೂಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ಪ್ರಥಮ ಹಂತದಲ್ಲಿ ಗರ್ಭಿಣಿ ಯರು, ಹಾಲುಣಿಸುವ ತಾಯಂದಿರು, ಇನ್ನಿತರೆ ಅಲರ್ಜಿ, ಕೋಮಾರ್ಬಿಡಿಟಿ ಇರುವವರನ್ನು ಹೊರತುಪಡಿಸಿ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಸ್ಥಳೀಯ ಜನಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮುಂದಿನ ಹಂತದಲ್ಲಿ ಲಸಿಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಾಗ ನಮ್ಮ ಅವಶ್ಯಕತೆಗಿಂತ ಹೆಚ್ಚು ಲಸಿಕಾ ಸ್ಟೋರೇಜ್ ಸಾಮರ್ಥ್ಯ ನಮ್ಮಲ್ಲಿದೆ’ ಎಂದು ಹೇಳಿದರು.

ಎರಡನೇ ಹಂತದಲ್ಲಿ ಫ್ರಂಟ್‍ಲೈನ್ ವರ್ಕರ್ಸ್ ಫಲಾನುಭವಿಗಳ ಪಟ್ಟಿ ಅಪ್‍ಲೋಡ್ ಮಾಡಲಾಗುತ್ತಿದ್ದು, ಇದರಲ್ಲಿ ಮುನ್ಸಿಪಾಲಿಟಿ, ಸ್ಥಳೀಯ ಸಂಸ್ಥೆಗಳು, ನಗರಪಾಲಿಕೆ, ಕಂದಾಯ, ಪೊಲೀಸ್ ಇಲಾಖೆ, ಹೋಂ ಗಾರ್ಡ್ಸ್‌, ಎನ್‍ಸಿಸಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್, ಕಾರ್ಯದರ್ಶಿ, ಪಿಡಿಒಗಳಿಗೆ ನೀಡಲಾಗುವುದು.

ಮೂರನೇ ಹಂತದಲ್ಲಿ ಕೋಮಾರ್ಬಿಡಿಟಿ, ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವುದು. ಸಾಮಾನ್ಯರಿಗೆ ಸರ್ಕಾರದ ನಿರ್ದೇಶನ ಬಂದ ನಂತರ ತೀರ್ಮಾನಿಸಲಾಗುವುದು
ಎಂದರು.

ಡಿಎಚ್‍ಒ ಡಾ. ನಾಗರಾಜ್, ಚಿಗಟೇರಿ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಜಯಪ್ರಕಾಶ್, ಡಿಎಸ್‍ಒ ಡಾ.ರಾಘವನ್, ಆರ್‌ಸಿಎಚ್ಒ ಡಾ.ಮೀನಾಕ್ಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT