ವಾಜಪೇಯಿ: ಹೋಲಿಕೆ ಇಲ್ಲದ ನಾಯಕ

7
ದಾವಣಗೆರೆಗೆ ಮೂರು ಬಾರಿ ಭೇಟಿ ನೀಡಿದ್ದರು, ಸ್ಥಳೀಯ ನಾಯಕರು ಸನ್ಮಾನಿಸಿದ್ದರು

ವಾಜಪೇಯಿ: ಹೋಲಿಕೆ ಇಲ್ಲದ ನಾಯಕ

Published:
Updated:
Deccan Herald

ದಾವಣಗೆರೆ: ರಾಜಕೀಯ ಮುತ್ಸದ್ದಿ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮಧ್ಯ ಕರ್ನಾಟಕ ದಾವಣಗೆರೆಗೆ ಮೂರು ಬಾರಿ ಭೇಟಿ ನೀಡಿದ್ದು, ಇಲ್ಲಿಯ ಜನರಲ್ಲಿ, ರಾಜಕೀಯ ಮುಖಂಡರಲ್ಲಿ ಮಧುರ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ.

ಪ್ರಧಾನಿಯಾಗುವುದಕ್ಕಿಂತ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಪಕ್ಷ ಸಂಘಟನೆಗೆ ದೇಶದಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದರು. ಅಂತಹ ಸಂದರ್ಭ 1981. ಅಂದಿನ ಅವಿಭಜಿತ ಜಿಲ್ಲೆ ಚಿತ್ರದುರ್ಗ–ದಾವಣಗೆರೆಯ ಜನರನ್ನು ಉದ್ದೇಶಿಸಿ ಅವರು ಮಾತನಾಡಿದ್ದರು. ಎರಡನೇ ಬಾರಿ ಬಂದಿದ್ದು 1991, ಅವಾಗ ಪಕ್ಷಕ್ಕೆ ನಿಧಿ ಸಮರ್ಪಣೆ ಎಂಬ ಕಾರ್ಯಕ್ರಮವನ್ನು ಬಿಜೆಪಿ ಹಮ್ಮಿಕೊಂಡಿತ್ತು. ₹ 1.20 ಲಕ್ಷ ನಿಧಿ ಸಂಗ್ರಹಿಸಲಾಗಿತ್ತು. ಈ ನಿಧಿ ಅರ್ಪಣೆ ಸಮಾರಂಭಕ್ಕೂ ಅವರು ಬಂದಿದ್ದರು.

‘ಅವರ ಮೂರನೇ ಭೇಟಿ 1996ರಲ್ಲಿ. ಇದು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿನ ಭೇಟಿಯಾಗಿತ್ತು. ಹುಬ್ಬಳ್ಳಿಯಿಂದ ಇಲ್ಲಿಗೆ ಬಂದಿದ್ದರು. ಹೈಸ್ಕೂಲ್‌ ಮೈದಾನದಲ್ಲಿ ಸೇರಿದ್ದ ಸಾವಿರಾರು ಸಾರ್ವಜನಿಕರನ್ನು ಉದ್ದೇಶಿಸಿ ಅಂದು ಅದ್ಭುತವಾಗಿ ಭಾಷಣ ಮಾಡಿದ್ದರು. ಪಕ್ಷ ಸಂಘಟನೆ ಬಗ್ಗೆ ಮಾತನಾಡಿದರು. ದೇಶ ಇಂದು ಸಂಕಷ್ಟ ಪರಿಸ್ಥಿತಿಯಲ್ಲಿದೆ. ಒಳ್ಳೆಯ ಆಡಳಿತ ನಡೆಸಬೇಕು. ಅಭಿವೃದ್ಧಿಯತ್ತ ಕೊಂಡ್ಯೊಯಬೇಕು. ಅಲ್ಲದೇ, ಜಮ್ಮು–ಕಾಶ್ಮೀರದ ಸಮಸ್ಯೆದ ಬಗ್ಗೆಯೂ ಪ್ರಸ್ತಾಪಿಸಿದ್ದರು. ಅವಾಗ ನಾನು ನಗರಸಭೆಯಲ್ಲಿ ವಿರೋಧಪಕ್ಷದ ನಾಯಕನಾಗಿದ್ದೆ. ಅಂದಿನ ಸಮಾರಂಭದಲ್ಲಿ ಅವರನ್ನು ನಾನು ಸನ್ಮಾನಿಸಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್.

‘ಬಿಜೆಪಿ ಬಾಂಬೆಯಲ್ಲಿ ಆರಂಭವಾದ ದಿನಗಳಿಂದಲೂ ಅವರೊಂದಿಗೆ ನಿಕಟವಾದ ಒಡನಾಟ ಹೊಂದಿದ್ದೆ. ಪಕ್ಷದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಾರ್ಯಕಾರಿಣಿಯಲ್ಲೂ ಭಾಗವಹಿಸಿ ಅವರೊಂದಿಗೆ ಚರ್ಚಿಸುತ್ತಿದ್ದೆ’ ಎಂದು ಶಾಸಕ ಹಾಗೂ ಆರ್‌ಎಸ್ಎಸ್‌ ನಾಯಕರೂ ಆದ ಎಸ್.ಎ. ರವೀಂದ್ರನಾಥ್‌ ಸ್ಮರಿಸಿಕೊಳ್ಳುತ್ತಾರೆ.

ಅವರು ಅಜಾತಶತ್ರು. ಅವರ ಭಾಷಣ ಎಂತಹವರನ್ನೂ ಮೋಡಿ ಮಾಡುತ್ತಿತ್ತು. ಅವರ ಮಾತು ಕೇಳಲು ಪ್ರಧಾನ ಮಂತ್ರಿ ಜವಾಹಾರಲಾಲ್‌ ನೆಹರೂ ಕೂಡ ತಮ್ಮ ಸ್ವಂತ ಕಾರಿನಲ್ಲಿ ಬರುತ್ತಿದ್ದರು ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ಹಲವು ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಅವರು ಗುಣಗಾನ ಮಾಡಿದರು.

‘ಬಹಳ ಸಂಪನ್ನರಾಗಿದ್ದರು. ಯಾವಾಗಲೂ ನಗುಮುಖದಿಂದ ಮಾತನಾಡುತ್ತಿದ್ದರು. 2004ರಲ್ಲಿ ಒಮ್ಮೆ ವಿಮಾನ ನಿಲ್ದಾಣದಲ್ಲಿ ಮಾತಿಗೆ ಸಿಕ್ಕಾಗ, ದಕ್ಷಿಣ ಭಾರತದಲ್ಲಿ ಜನ ನಿಮ್ಮನ್ನು ಬೆಂಬಲಿಸಿದರು. ಆದರೆ, ಉತ್ತರ ಭಾರತದಲ್ಲಿ ಏಕೆ ಹಿನ್ನಡೆಯಾಗಿತು ಎಂದು ಅವರನ್ನು ಪ್ರಶ್ನಿಸಿದ್ದೆ. ಅದಕ್ಕೆ ಅವರು, ನಮ್ಮ ಸರ್ಕಾರ ರೂಪಿಸಿದ ಯಾವುದೇ ಯೋಜನೆಗಳಿಗೆ ನನ್ನ ಹೆಸರು ಇಡಲಿಲ್ಲ. ಒಳ್ಳೆಯ ಯೋಜನೆಗಳನ್ನು ಜಾರಿ ಮಾಡಿದರೂ ನಮ್ಮ ಕಾರ್ಯಕರ್ತರು ಜನರಿಗೆ ಅದನ್ನು ತಲುಪಿಸುವಲ್ಲಿ ವಿಫಲರಾದರು. ಹಾಗಾಗಿ ಸೋಲು ಆಯಿತು’ ಎಂದು ತೀವ್ರ ಮನನೊಂದು ಮಾತನಾಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ ಸಂಸದ ಜಿ.ಎಂ. ಸಿದ್ದೇಶ್ವರ.

‘ವಾಜಪೇಯಿ ಅವರಿಗೆ ಹೋಲಿಕೆ ಇಲ್ಲ. ಅವರಿಗೆ ಅವರೇ ಸಾಟಿ. ದೇಶದ ಅತ್ಯುತ್ತಮ ಪ್ರಧಾನಿ ಅವರು. 23 ಪಕ್ಷಗಳನ್ನು ಇಟ್ಟುಕೊಂಡು ದೇಶವನ್ನು ಆಳಿದವರು. ಇದು ಸಾಮಾನ್ಯ ಸಂಗತಿ ಅಲ್ಲ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.

‘ಸಂದರ್ಶನ ಮಾಡಿದ್ದೆ’

‘ವಾಜಪೇಯಿ ಅವರು ಮೊದಲು ದಾವಣಗೆರೆಗೆ ಬಂದಾಗ ಹೈಸ್ಕೂಲ್‌ನಲ್ಲಿ ಓದುತ್ತಿದ್ದೆ. ಅವರ ಆಟೋಗ್ರಾಫ್‌ ಪಡೆದುಕೊಳ್ಳಲು ಪ್ರಯತ್ನಿಸಿದ್ದೆ, ಸಾಧ್ಯವಾಗಲಿಲ್ಲ. ಆದರೆ, 1996ರಲ್ಲಿ ಇನ್ನೊಮ್ಮೆ ದಾವಣಗೆರೆಗೆ ಬಂದಾಗ ಅವರ ಸಂದರ್ಶನ ಮಾಡಿದ್ದೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು ಹಿರಿಯ ಪತ್ರಕರ್ತ ನಜೀರ್.

‘ಅಂದು ಗುರುಸಿದ್ದನಗೌಡ ಅವರು ಬಿಜೆಪಿ ಅಧ್ಯಕ್ಷರಾಗಿದ್ದರು. ಹೈಸ್ಕೂಲ್‌ ಮೈದಾನ ಸಮೀಪದ ಐಬಿಯಲ್ಲಿ ವಾಜಪೇಯಿ ಪಕ್ಕದಲ್ಲೇ ಕುಳಿತು ಯುಎನ್‌ಐ ಸುದ್ದಿಸಂಸ್ಥೆಗಾಗಿ ಅವರನ್ನು ಸಂದರ್ಶಿಸಿದ್ದೆ. ನನ್ನೊಂದಿಗೆ ಪತ್ರಕರ್ತ ನರಸಿಂಹಕುಮಾರ್ ಇದ್ದರು. ಆಗ ಭಾರತ–ಪಾಕಿಸ್ತಾನ ಗಡಿ ತಂಟೆ ಆರಂಭವಾಗಿತ್ತು. ಅದರ ಬಗ್ಗೆ ಅವರ ತಮ್ಮ ವಿಷಯಗಳನ್ನು ಹಂಚಿಕೊಂಡಿದ್ದರು’ ಎಂದು ನೆನಪಿಸಿಕೊಂಡರು ಅವರು.

***

‘ಏಲಕ್ಕಿ ಬಾಳೆಹಣ್ಣು ತರಿಸಿಕೊಂಡಿದ್ದರು’

‘ವಾಜಪೇಯಿ ಅವರು ದಾವಣಗೆರೆಗೆ ಬಂದಾಗ ನಮ್ಮ ತೋಟದ ಏಲಕ್ಕಿ ಬಾಳೆಹಣ್ಣು ನೀಡಿದ್ದೆವು. ಅದು ಅವರಿಗೆ ಬಹಳ ಇಷ್ಟವಾಗಿತ್ತು. ದೆಹಲಿಗೆ ಹೋದಾಗಲೂ ಅದನ್ನು ಪ್ರಸ್ತಾಪಿಸಿದ್ದರು. ಹಾಗಾಗಿ, ನಮ್ಮ ತೋಟದಲ್ಲಿ ಬೆಳೆದ ಏಲಕ್ಕಿ ಬಾಳೆಹಣ್ಣನ್ನು ಎರಡು ಬಾರಿ ತೆಗೆದುಕೊಂಡು ಹೋಗಿ ಅವರಿಗೆ ನೀಡಿದ್ದೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಖುಷಿಯಿಂದ ಹೇಳಿಕೊಂಡರು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !