ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಮೊದಲ ವಸತಿನಿಲಯ ಸ್ಥಾಪಕ ವಾಲ್ಮೀಕಿ

ನಾಯಕ ವಿದ್ಯಾರ್ಥಿ ನಿಲಯದ ವಿವಿಧ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ವಿ.ಎಸ್‌. ಉಗ್ರಪ್ಪ
Last Updated 16 ಡಿಸೆಂಬರ್ 2018, 13:53 IST
ಅಕ್ಷರ ಗಾತ್ರ

ದಾವಣಗೆರೆ: ಗಂಡನ ಮನೆಯಿಂದ ಆಚೆಗೆ ಹಾಕಿದ್ದರಿಂದ ಅನಾಥಳಾದ ಸೀತೆಯನ್ನು ಸಾಕಿದ ವಾಲ್ಮೀಕಿಯ ಆಶ್ರಮ ಜಗತ್ತಿನ ಮೊದಲ ಅನಾಥಾಲಯ. ಲವ ಕುಶರಿಗೆ ಊಟ ವಸತಿ ಜತೆಗೆ ಜಗತ್ತಿನ ಅತ್ಯುತ್ತಮ ಶಿಕ್ಷಣ ನೀಡಿದ ಇದೇ ಆಶ್ರಮ ಮೊತ್ತ ಮೊದಲ ವಸತಿ ನಿಲಯ ಎಂದು ಬಳ್ಳಾರಿ ಸಂಸದ ವಿ.ಎಸ್‌. ಉಗ್ರಪ್ಪ ಬಣ್ಣಿಸಿದರು.

ಇಲ್ಲಿನ ನಾಯಕ ವಿದ್ಯಾರ್ಥಿ ನಿಲಯದಲ್ಲಿ ನೂತನವಾಗಿ ನಿರ್ಮಿಸಿರುವ ವಾಲ್ಮೀಕಿ ಸಾಂಸ್ಕೃತಿಕ ಸಭಾಭವನದ ಊಟದ ಹಾಲ್‌, ವಸತಿ ಕೊಠಡಿಗಳು, ಅಡುಗೆಮನೆ, ಗ್ರಂಥಾಲಯ, ವಾಚನಾಲಯ, ಕಂಪ್ಯೂಟರ್‌ ತರಬೇತಿ ಕೇಂದ್ರಗಳ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

ರಾಮನ ಬಗ್ಗೆ ಈಗ ತುಂಬಾ ಮಂದಿ ಮಾತನಾಡುತ್ತಾರೆ. ಆದರೆ ರಾಮನನ್ನು ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ ಬಗ್ಗೆ ಮಾತನಾಡುವವರು ಕಡಿಮೆ ಎಂದು ವಿಷಾದಿಸಿದರು.

‘ಜನಕ ರಾಜನು ಸೀತೆಯ ಸಾಕು ತಂದೆ. ನಿಜವಾದ ಹೆತ್ತವರು ಯಾರು ಎಂಬುದು ಗೊತ್ತಿಲ್ಲ. ಆದರೂ ನಾವು ಸೀತೆಯನ್ನು ಗೌರವಿಸುತ್ತೇವೆ. ಯಾಕೆಂದರೆ ನಮಗೆ ಹುಟ್ಟಿಗಿಂತ ಗುಣ, ನಡತೆ ಮುಖ್ಯ. ಇದನ್ನೇ ವಾಲ್ಮೀಕಿ ನಮಗೆ ಕಲಿಸಿದ್ದು’ ಎಂದು ಹೇಳಿದರು.

‘ವಾಲ್ಮೀಕಿ ಕೊಲೆಗಟುಕ ಎಂದು ಕೆಲವರು ಚಿತ್ರಿಸುತ್ತಿದ್ದಾರೆ. ವಾಲ್ಮೀಕಿ ನಾಯಕ ಜನಾಂಗವೇ ಅಲ್ಲ ಎಂದು ನಾರಾಯಾಣಾಚಾರಿಯಂಥವರು ಹೇಳುತ್ತಿದ್ದಾರೆ. ವಾಲ್ಮೀಕಿಯನ್ನು ಕೊಲೆಗಟುಕ ಎಂದು ಸಾಕ್ಷಿ ಸಮೇತ ನಿರೂಪಿಸಿದರೆ ಅಂದಿನಿಂದಲೇ ನಾನು ಅವರ ಮನೆಯ ಆಳಾಗಿ ದುಡಿಯುತ್ತೇನೆ’ ಎಂದು ಸವಾಲು ಹಾಕಿದರು.

ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ‘ವಿದ್ಯಾರ್ಥಿ ನಿಲಯ ದಾವಣಗೆರೆಯ ದೊಡ್ಡ ಕೊಡುಗೆ. ಇಲ್ಲಿ 1907ರಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿ ನಿಲಯ ಆರಂಭಿಸಿದರು. ಆನಂತರ ಮಹಾತ್ಮ ಗಾಂಧೀಜಿ ಬೆಳಗಾವಿ ಬಂದಿದ್ದಾಗ ಪರಿಶಿಷ್ಟ ಜನಾಂಗಕ್ಕೆ ವಿದ್ಯಾರ್ಥಿ ನಿಲಯದ ಅವಶ್ಯಕತೆ ಬಗ್ಗೆ ಸ್ವಾಮೀಜಿ ಮನವರಿಕೆ ಮಾಡಿದ್ದರು. ಹಾಗಾಗಿ ದಾವಣಗೆರೆಯಲ್ಲಿ ಎರಡನೇ ವಿದ್ಯಾರ್ಥಿ ನಿಲಯ ಆರಂಭಗೊಂಡಿತು. ಬಳಿಕ ಹಲವು ಸಮುದಾಯಗಳಿಗೆ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲಾಯಿತು’ ಎಂದು ವಿವರಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ, ‘ಎಲ್ಲ ಸಮುದಾಯಗಳ ವಿದ್ಯಾರ್ಥಿ ನಿಲಯಗಳಿಗೆ ನಿವೇಶನವನ್ನು ಕಲ್ಪಿಸುವ ಮೂಲಕ ಆಗಿನ ನಗರಸಭೆ ಅತ್ಯುತ್ತಮ ಕೆಲಸ ಮಾಡಿದೆ. ಯಾವುದೇ ಸಂಸ್ಥೆ ಮುಂದೆ ಬರಬೇಕಿದ್ದರೆ ಅಲ್ಲಿನ ಆಡಳಿತ ಮಂಡಳಿ ಸರಿ ಇರಬೇಕು. ಇಲ್ಲದೇ ಇದ್ದರೆ ನಗೆಪಾಟಲಿಗೆ ಗುರಿಯಾಗುತ್ತದೆ. ನಾಯಕ ವಿದ್ಯಾರ್ಥಿನಿಲಯ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಅದರ ಆಡಳಿತ ಮಂಡಳಿಯೇ ಕಾರಣ’ ಎಂದು ಶ್ಲಾಘಿಸಿದರು.

ಸ್ತ್ರೀರೋಗ ತಜ್ಞ ಡಾ. ಡಿ.ಆರ್‌. ವಾಲ್ಮೀಕಿ, ನಿವೃತ್ತ ಡಿವೈಎಸ್‌ಪಿ ಪಿ.ಆರ್. ಶಾಹು, ವಾಲ್ಮೀಕಿ ಗುರುಪೀಠದ ಟ್ರಸ್ಟಿ ಎನ್‌.ಆರ್‌. ಲಿಂಗಸ್ವಾಮಿ, ಬಂಡಾಯ ಸಾಹಿತಿ ಎ.ಬಿ. ರಾಮಚಂದ್ರಪ್ಪ, ಪಾಲಿಕೆ ಸದಸ್ಯೆ ಅಶ್ವಿನಿ ಪ್ರಶಾಂತ, ಸರ್ಕಲ್‌ ಇನ್‌ಸ್ಪೆಕ್ಟರ್‌ ಜಿ.ಬಿ. ಉಮೇಶ್‌, ವಾಲ್ಮೀಕಿ ವಾಹಿನಿ ಸಂಪಾದಕ ಸಿರಿಗೆರೆ ತಿಪ್ಪೇಶ್‌, ಕರ್ನಾಟಕ ರಂಗ ಸಮಾಜದ ಮಲ್ಲಿಕಾರ್ಜುನ ಕಡಕೋಳ, ಅಂತರರಾಷ್ಟ್ರೀಯ ಈಜುಪಟು ಎಂ. ರೇವತಿ ಅವರನ್ನು ಗೌರವಿಸಲಾಯಿತು.

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿದ್ಯಾರ್ಥಿ ನಿಲಯದ ಅಧ್ಯಕ್ಷ ಎಚ್‌.ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷ ಟಿ. ದಾಸಕರಿಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಎಚ್‌. ಓಬಳಪ್ಪ, ಬಸವಂತಪ್ಪ, ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಬಿ. ವೀರಣ್ಣ, ಕೆ.ಎಸ್‌. ಮಂಜುನಾಥ, ಎಂ.ಬಿ.ಹಾಲಪ್ಪ, ವಿನಾಯಕ ಪೈಲ್ವಾನ್‌, ಹೂವಿನಮಡು ಚಂದ್ರಪ್ಪ, ವಿಜಯಲಕ್ಷ್ಮೀ, ರಮೇಶ್, ಪ್ರಶಾಂತ್‌ ಅವರೂ ಇದ್ದರು. ಶ್ರೀನಿವಾಸ ದಾಸ್‌ ಕರಿಯಪ್ಪ ಸ್ವಾಗತಿಸಿದರು. ವಿರೂಪಾಕ್ಷ ಕಾರ್ಯಕ್ರಮ ನಿರೂಪಿಸಿದರು.

ವಿ.ವಿಗೆ ವಾಲ್ಮೀಕಿ ಹೆಸರಿಡಲು ಒತ್ತಾಯ

ವಾಲ್ಮೀಕಿ ಮಹರ್ಷಿಯ ಹೆಸರನ್ನು ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಇಡಬೇಕು ಎಂಬ ಒತ್ತಾಯ ಇದೆ. ಒಂದು ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿಯ ಹೆಸರು, ಒಂದಕ್ಕೆ ಕನಕದಾಸರ ಹೆಸರು, ಒಂದಕ್ಕೆ ಅಂಬೇಡ್ಕರ್‌ ಹೆಸರು, ಒಂದಕ್ಕೆ ಬಸವೇಶ್ವರರ ಹೆಸರು ಇಡಬೇಕು ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವಾಗಲೇ ಒತ್ತಾಯಿಸಿದ್ದೆ. ಮುಂದೆಯೂ ಅದಕ್ಕಾಗಿ ಹೋರಾಟ ಮಾಡುವುದಾಗಿ ವಿ.ಎಸ್‌. ಉಗ್ರಪ್ಪ ತಿಳಿಸಿದರು.

ರಾಜಕೀಯ ಮೀಸಲಾತಿಯ ಜತೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಅಗತ್ಯ. ಕಾಂತರಾಜ್‌ ವರದಿ ಪ್ರಕಾರ ಪರಿಶಿಷ್ಟ ಜಾತಿಗೆ ಶೇ 17.1 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿ ದೊರೆಯಬೇಕು. ಜನಸಂಖ್ಯೆಯ ಆಧಾರದಲ್ಲಿ ನೀಡಲಾಗುವ ಈ ಮೀಸಲಾತಿಗಾಗಿಯೂ ಹೋರಾಟ ಮಾಡುವುದಾಗಿ ಭರವಸೆ ನೀಡಿದರು.

ಬಿಡುಗಡೆಯಾಗದ ಅನುದಾನ

ನಗರದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸಲು ಎರಡು ವರ್ಷದ ಹಿಂದೆ ಆಗಿನ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ₹ 5 ಕೋಟಿ ಮಂಜೂರು ಮಾಡಿದ್ದರು. ಆನಂತರ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ ಅನುದಾನ ಬಿಡುಗಡೆಯಾಗದೇ ಸಮುದಾಯ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT