ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಭೋಜನ ಸವಿಯಲು ನೂಕುನುಗ್ಗಲು

250 ಕೌಂಟರ್‌, 3,000 ಬಾಣಸಿಗರು
Last Updated 26 ಮಾರ್ಚ್ 2023, 7:33 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ಶನಿವಾರ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ಮಹಾಸಂಗಮದಲ್ಲಿ ಪ್ರಧಾನಿ ನರೇಂದ್ರ ಮೋದಿ ನೋಡಲು ಜನಸಾಗರವೇ ಹರಿದುಬಂದಿತ್ತು.

ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಜನರು ತಂಡೋಪ ತಂಡವಾಗಿ ಬಂದರು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕಾರ್ಯಕ್ರಮದ ಮಾರ್ಗದ ಉದ್ದಕ್ಕೂ ದಾರಿಯಲ್ಲಿ ಪೆಂಡಾಲ್ ಹಾಕಿ ಜನರಿಗೆ ಮಜ್ಜಿಗೆ, ಕುಡಿಯುವ ನೀರು, ತಿನ್ನಲು ಹಣ್ಣಿನ ವ್ಯವಸ್ಥೆ ಮಾಡಲಾಗಿತ್ತು.

ಲಕ್ಷಾಂತರ ಜನರು ಭೋಜನ ಸವಿದರು. ಬೆಳಿಗ್ಗೆ ಉಪ್ಪಿಟ್ಟು, ಮಧ್ಯಾಹ್ನ ಗೋಧಿ ಪಾಯಸ, ಪುಲಾವ್, ಮೊಸರನ್ನ, ಮಜ್ಜಿಗೆ ಸವಿದರು. ಕಾರ್ಯಕ್ರಮದ ವೇದಿಕೆ ಸುತ್ತಲಿನ ಜಾಗದಲ್ಲಿ ಮೂಲೆ ಮೂಲೆಯಿಂದ ಜನರು ಊಟ ಸವಿಯಲು ಬಂದರು. ಮಧ್ಯಾಹ್ನ 2.30ರ ನಂತರ ಊಟಕ್ಕೆ ಬರುವವರ ಸಂಖ್ಯೆ ಹೆಚ್ಚಾಯಿತು. ವಿವಿಧ ಜಿಲ್ಲೆಗಳಿಂದ ಬಂದಿದ್ದ ಜನರು ಬಸ್‌ನಿಂದ ಇಳಿಯುತ್ತಿದ್ದಂತೆ ಊಟದ ಕೌಂಟರ್‌ನತ್ತ ಧಾವಿಸಿದರು.

ಬೆಳಿಗ್ಗೆ 6ರಿಂದಲೇ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 9ರವರೆಗೆ ತಿಂಡಿ ಸವಿದ ಜನರು ಬಳಿಕ ಊಟಕ್ಕೆ ಬರುತ್ತಿದ್ದರು. ಬೆಳಿಗ್ಗೆ ಸಾವಿರಾರು ಜನರು ತಿಂಡಿ ಸವಿದರು.

ಊಟಕ್ಕೆ 250 ಕೌಂಟರ್‌: ಊಟಕ್ಕೆ 250 ಕೌಂಟರ್‌ಗಳನ್ನು ತೆರೆಯಲಾಗಿತ್ತು. ಬೆಂಗಳೂರಿನಿಂದ ಎರಡು ತಂಡ ಹಾಗೂ ಚಿತ್ರದುರ್ಗದ ಒಂದು ತಂಡದಲ್ಲಿ ಬಂದಿದ್ದ 3,000 ಬಾಣಸಿಗರು ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಿದರು. ಮಂಡ್ಯದಿಂದ 25 ಹಾಗೂ ಮೈಸೂರಿನಿಂದ ಬಂದಿದ್ದ 100 ಜನ ಸ್ವಯಂ ಸೇವಕರು ಹಾಗೂ ಸ್ಥಳೀಯ 2,000 ಪ್ರಬಂಧಕರು ಊಟದ ವ್ಯವಸ್ಥೆಗೆ ಸಹಕಾರ ನೀಡಿದರು. ಸ್ವಯಂ ಸೇವಕರು ಊಟಕ್ಕೆ ಜನರನ್ನು ಕರೆಯುತ್ತಿದ್ದರು. ನೀರನ್ನು ಮಿತವಾಗಿ ಬಳಸುವಂತೆ, ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡುತ್ತಿದ್ದುದು ಕಂಡುಬಂತು.

ಊಟದ ತಟ್ಟೆ ಎಸೆಯಲು ಮಹಾನಗರ ಪಾಲಿಕೆಯ ಕಸದ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. 150ರಿಂದ 200 ವಾಹನಗಳು ಇದ್ದವು. ವಾಹನಗಳು ಕಸದಿಂದ ಭರ್ತಿಯಾದ ಕೂಡಲೇ ದೊಡ್ಡ ವಾಹನಗಳಿಗೆ ವಿಲೇ ವಾರಿ ಮಾಡುವ ವ್ಯವಸ್ಥೆಯೂ ಇತ್ತು.

ಪಾತ್ರೆ ತೊಳೆಯಲು ಹಾಗೂ ಸ್ವಚ್ಛತೆಗೆ ತುಮಕೂರು, ದಾವಣಗೆರೆ ಸೇರಿದಂತೆ ವಿವಿಧೆಡೆಯ 300 ಜನರು ಇದ್ದರು.

‘ಬೆಳಿಗ್ಗೆಯಿಂದ ರಾತ್ರಿಯವರೆಗೂ ಊಟಕ್ಕೆ ಜನರು ಬರುತ್ತಿದ್ದರು. ರಾತ್ರಿ 7ರವರೆಗೂ ಊಟ ನೀಡಿದೆವು. 6 ಲಕ್ಷದಿಂದ 7 ಲಕ್ಷ ಜನರು ಊಟ ಸವಿದರು. ಒಂದೊಂದು ಬಾಣಸಿಗರ ತಂಡ ಎರಡೂವರೆ ಲಕ್ಷ ಜನರಿಗೆ ಅಡುಗೆ ಸಿದ್ಧಪಡಿಸಿತ್ತು. ಒಟ್ಟು ಮೂರು ಬಾಣಿಸಿಗರ ತಂಡ ಅಡುಗೆ ಸಿದ್ಧಮಾಡಿತ್ತು’ ಎಂದು ಭೋಜನದ ವ್ಯವಸ್ಥೆ ನೋಡಿಕೊಳ್ಳಲು ಮಂಡ್ಯದಿಂದ ಬಂದಿದ್ದ ಬಿಜೆಪಿ ಮುಖಂಡ ಹರ್ಷ ಬಿ. ತಿಳಿಸಿದರು.

ಇವರು ಹೀಗಂದರು..

ಮೋದಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರೈತರ ಖಾತೆಗೆ ₹ 2000 ಹಾಕುತ್ತಿದ್ದಾರೆ. ಕೃಷಿಕರಿಗೆ ನೆರವಾಗುವ ಯೋಜನೆ ತಂದಿದ್ದಾರೆ. ಅವರನ್ನು ನೋಡಲು ನಮ್ಮ ಗ್ರಾಮದಿಂದ 30 ಜನ ಬಂದಿದ್ದೇವೆ.

– ಕೆಂಚೇಗೌಡ, ರೈತ, ಮುಗ್ಗಿರಾಗೀಹಳ್ಳಿ, ಜಗಳೂರು

ಮೋದಿ ಮೇಲಿನ ಅಭಿಯಾನದಿಂದ ಬಂದಿದ್ದೇವೆ. ಯಾವುದೇ ಹಣ ಪಡೆದು ಬಂದಿಲ್ಲ. ಯಾರೂ ನಮಗೆ ಹಣ ಕೊಟ್ಟಿಲ್ಲ.

–ಗುರುಮೂರ್ತಿ, ಹರಪನಹಳ್ಳಿ

ದುಡ್ಡು, ಪಡ್ಡು ಇಲ್ಲ. ನಮ್ಮ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಭಿವೃದ್ಧಿ ಮಾಡಿದ್ದಾರೆ. ಅವರ ಪರವಾಗಿ ಬಂದಿದ್ದೇವೆ. ಪ್ರಧಾನಿ ಮೋದಿಯನ್ನು ನೋಡುವುದಕ್ಕಾಗಿಯೇ ಅಭಿಮಾನದಿಂದ ಬಂದಿದ್ದೇವೆ.

–ಶಾಂತವ್ವ, ಅರಭಾವಿ, ಬೆಳಗಾವಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT