ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ–ಮಂಗಳೂರು ರೈಲು: ಸಮಯ ಬದಲಾವಣೆಗೆ ಹೆಚ್ಚಿದ ಕೂಗು

ಮಂಗಳೂರಿಗೆ ಮಧ್ಯಾಹ್ನ ತಲುಪುವ ರೈಲು
Last Updated 4 ಜನವರಿ 2022, 7:29 IST
ಅಕ್ಷರ ಗಾತ್ರ

ದಾವಣಗೆರೆ: ವಿಜಯಪುರ–ಮಂಗಳೂರು ಪ್ರಯಾಣಿಕರ ರೈಲು 2019ರಲ್ಲಿ ಆರಂಭಗೊಂಡಿತ್ತು. ಒಂದು ವರ್ಷ ಓಡಿದ ಬಳಿಕ ಕೊರೊನಾ ಕಾರಣದಿಂದ ರದ್ದಾಗಿತ್ತು. ಇದೀಗ ಡಿ.1ರಿಂದ ಮತ್ತೆ ಓಡಾಟ ಆರಂಭಗೊಂಡಿದೆ. ಆದರೆ ರೈಲು ಬರುವ ಸಮಯ ಹೊಂದಾಣಿಕೆಯಾಗದೇ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತಿದೆ. ರೈಲಿನ ಸಮಯ ಬದಲಾವಣೆ ಮಾಡಲು ಕೂಗು ಎದ್ದಿದೆ.

ಪ್ರತಿದಿನ ಸಂಜೆ 6.30ಕ್ಕೆ ವಿಜಯಪುರದಿಂದ ಹೊರಡುವ ಬಸವನಬಾಗೇವಾಡಿ, ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಹೊಳೆ ಆಲೂರು, ಗದಗ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ಹರಿಹರ ಮಾರ್ಗವಾಗಿ ದಾವಣಗೆರೆಗೆ ರಾತ್ರಿ 1.30ಕ್ಕೆ ತಲುಪುತ್ತದೆ.

ದಾವಣಗೆರೆಯಿಂದ ಕಡೂರು, ಅರಸಿಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ, ಪುತ್ತೂರು, ಬಂಟ್ವಾಳ ಮಾರ್ಗದಲ್ಲಿ ಮಂಗಳೂರು ಜಂಕ್ಷನ್‌ಗೆ ತಲುಪುವ ಹೊತ್ತಿಗೆ ಮಧ್ಯಾಹ್ನ 12.40 ಆಗುತ್ತದೆ. ಈ ರೈಲಿನಲ್ಲಿ 5 ಜನರಲ್ ಸೆಕೆಂಡ್ ಕ್ಲಾಸ್, 6 ಸೆಕೆಂಡ್ ಕ್ಲಾಸ್ ಸ್ಪೀಪರ್, 1 ಎಸಿ 3 ಟೈರ್ ಮತ್ತು 1 ಲಗೇಜ್ ಕಮ್ ಬ್ರೇಕ್ ವ್ಯಾನ್ ಸೇರಿ 14 ಬೋಗಿಗಳಿವೆ.

‘ಮಂಗಳೂರಿಗೆ ಬೆಳಿಗ್ಗೆ ತಲುಪದೇ ಮಧ್ಯಾಹ್ನ ತಲುಪುತ್ತಿರುವುದರಿಂದ ಪ್ರಯಾಣಿಕರಿಗೆ ಉಪಯೋಗ‌ವಾಗುತ್ತಿಲ್ಲ. ಅದಕ್ಕಾಗಿ ವಿಜಯಪುರದಿಂದ ರೈಲು ಮಧ್ಯಾಹ್ನ ಹೊರಡುವಂತೆ ಮಾಡಬೇಕು. ರಾತ್ರಿ 9ಕ್ಕೆ ದಾವಣಗೆರೆಗೆ ಬಂದರೆ, ಮಂಗಳೂರಿಗೆ ಬೆಳಿಗ್ಗೆ 7 ಅಥವಾ 8 ಗಂಟೆಯ ಒಳಗೆ ತಲುಪಿದರೆ ಮಾತ್ರ ಉಪಯೋಗವಾಗುತ್ತದೆ’ ಎನ್ನುತ್ತಾರೆ ದಾವಣಗೆರೆ-ಕರಾವಳಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ನಿರ್ಮಲ್‌ ರಾಜೇಂದ್ರ ಬಂಗೇರ.

‘ಆಸ್ಪತ್ರೆ, ವಿದ್ಯಾಸಂಸ್ಥೆ, ದೇವಸ್ಥಾನಗಳ ಭೇಟಿಗಾಗಿ ಕರಾವಳಿಗೆ ದಾವಣಗೆರೆಯಿಂದ ಹೋಗುವವರ ಸಂಖ್ಯೆ ಜಾಸ್ತಿ ಇದೆ. ಅಲ್ಲದೇ ಕರಾವಳಿಯ 25 ಸಾವಿರಕ್ಕೂ ಅಧಿಕ ಮಂದಿ ದಾವಣಗೆರೆಯಲ್ಲಿ ಇದ್ದಾರೆ. ಅವರೆಲ್ಲ ಮಂಗಳೂರು–ಉಡುಪಿಗೆ ಹೋಗಿ ಬರುತ್ತಿರುತ್ತಾರೆ. ಆಸ್ಪತ್ರೆಗೆ ಹೋಗುವವರು, ವಿದ್ಯಾಸಂಸ್ಥೆಗಳಿಗೆ ಹೋಗುವವರು ಬೆಳಿಗ್ಗೆ ಬೇಗ ಮಂಗಳೂರಿಗೆ ತಲುಪಿದರಷ್ಟೇ ಅದೇ ದಿನ ಕೆಲಸ ಮುಗಿಸಲು ಸಾಧ್ಯ. ಹಾಗಾಗಿ ಬೆಳಿಗ್ಗೆ ಬೇಗ ತಲುಪುವಂತೆ ರೈಲಿನ ವೇಳಾಪಟ್ಟಿಯನ್ನು ಬದಲಾಯಿಸಬೇಕು. ಈಗಿರುವ ಸಮಯದಿಂದ ಕನಿಷ್ಠ 5 ಗಂಟೆ ಮುಂಚಿತವಾಗಿ ರೈಲು ಓಡುವಂತೆ ಮಾಡಬೇಕು’ ಎಂಬುದು ದಾವಣಗೆರೆ–ಕರಾವಳಿ ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ ಅವರ ಅಭಿಪ್ರಾಯ.

ಅಲ್ಲದೇ ಈ ರೈಲನ್ನು ಉಡುಪಿವರೆಗೆ ವಿಸ್ತರಿಸಿದರೆ ಮಣಿಪಾಲ ಆಸ್ಪತ್ರೆಗೆ ಹೋಗುವವರಿಗೆ ಉಪಯೋಗವಾಗಲಿದೆ ಎನ್ನುವುದು ಅವರ ಸಲಹೆ.

ನಿರ್ಮಲ್‌ ರಾಜೇಂದ್ರ ಬಂಗೇರ
ನಿರ್ಮಲ್‌ ರಾಜೇಂದ್ರ ಬಂಗೇರ

‘ನಾವು ನೈರುತ್ಯ ರೈಲ್ವೆ ಅಧೀನ ಕಾರ್ಯದರ್ಶಿ ಜತೆಗೆ ಈ ಬಗ್ಗೆ ಮಾತನಾಡಿದ್ದೇವೆ. ರೈಲ್ವೆ ಕ್ರಾಸಿಂಗ್‌ ಮತ್ತು ಪಿಕ್‌ಅಪ್‌ ಸಮಸ್ಯೆ ಇತ್ಯರ್ಥವಾಗಲು ಕನಿಷ್ಠ ಮೂರು ತಿಂಗಳು ಬೇಕು. ಈ ಸಮಸ್ಯೆಗಳು ಪರಿಹಾರಗೊಂಡ ಕೂಡಲೇ ವೇಳಾಪಟ್ಟಿ ಬದಲಾಯಿಸಲು ಕ್ರಮ ವಹಿಸುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದು ಸಮಿತಿ ಅಧ್ಯಕ್ಷ ನಿರ್ಮಲ್‌ ರಾಜೇಂದ್ರ ಬಂಗೇರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT