ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಬೈಕರ್‌ಗಳ ಹಾವಳಿಗೆ ಬೀಳದ ‘ಬ್ರೇಕ್‌’!

ತ್ರಿಬಲ್‌ ರೈಡಿಂಗ್‌, ಹೆಲ್ಮೆಟ್‌ ರಹಿತ ಚಾಲನೆ.. ಸಂಚಾರ ನಿಯಮ ಉಲ್ಲಂಘನೆ...
Published 17 ಜನವರಿ 2024, 7:06 IST
Last Updated 17 ಜನವರಿ 2024, 7:06 IST
ಅಕ್ಷರ ಗಾತ್ರ

ದಾವಣಗೆರೆ: ರಸ್ತೆಯ ಎರಡೂ ಬದಿಗಳಲ್ಲಿ ಅಡ್ಡಾದಿಡ್ಡಿ ನಿಲ್ಲುವ ವಾಹನಗಳು, ಕಿವಿಗಡಚಿಕ್ಕುವ, ಕರ್ಕಶವಾದ ಶಬ್ಧದೊಂದಿಗೆ ವೇಗವಾಗಿ ಸಾಗುವ ಬೈಕ್‌ ಸವಾರರು, ಆತಂಕದಲ್ಲೇ ರಸ್ತೆಯ ಬದಿಯಲ್ಲಿ ಹೆಜ್ಜೆ ಹಾಕುವ ವೃದ್ಧರು, ಮಹಿಳೆಯರು, ಚಿಣ್ಣರು.

ಇಲ್ಲಿನ ವಿದ್ಯಾನಗರ ಬಡಾವಣೆ ಸೇರಿದಂತೆ ನಗರದ ವಿವಿಧೆಡೆ ನಿತ್ಯವೂ ಕಂಡುಬರುವ ‘ಸಾಮಾನ್ಯ’ ಚಿತ್ರಣವಿದು.

ವಿದ್ಯಾನಗರ ವ್ಯಾಪ್ತಿಯ ಹಲವು ಮುಖ್ಯ ರಸ್ತೆಗಳು, ಒಳರಸ್ತೆಗಳಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ನಡೆಯುತ್ತಲೇ ಇದ್ದರೂ ಸಂಚಾರ ಠಾಣೆಯ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಹಿಡಿಶಾಪ ಹಾಕುತ್ತಲೇ ದಿನ ದೂಡುತ್ತಿದ್ದಾರೆ.

ನಗರದ ಗುಂಡಿ ಮಹಾದೇವಪ್ಪ ವೃತ್ತದಿಂದ ಕನ್ನಡ ಭವನ ಬಳಿಯ ವೃತ್ತ, ನೂತನ್ ಕಾಲೇಜು ರಸ್ತೆ, ಮೆಡಿಕಲ್‌ ಕಾಲೇಜು ಹಾಸ್ಟೆಲ್‌ ರಸ್ತೆ, ಸಿದ್ದವೀರಪ್ಪ ಬಡಾವಣೆಯ ಮುಖ್ಯರಸ್ತೆ ಸೇರಿದಂತೆ ಹಲವು ಒಳರಸ್ತೆಗಳಲ್ಲಿ ತ್ರಿಬಲ್‌ ರೈಡಿಂಗ್‌, ಹೆಲ್ಮೆಟ್‌ ರಹಿತ ಚಾಲನೆ, ನಂಬರ್‌ಪ್ಲೇಟ್‌ ರಹಿತ ವಾಹನಗಳ ಬಳಕೆ ಅತಿಯಾಗಿದೆ.

‘ಈ ಬಡಾವಣೆಗಳಲ್ಲಿ ಬೈಕ್‌, ಸ್ಕೂಟಿ ಚಲಾಯಿಸುವ ಬಹುತೇಕ ವಿದ್ಯಾರ್ಥಿಗಳು ಹೆಲ್ಮೆಟ್‌ ಧರಿಸುವುದಿಲ್ಲ. ಶೇ 10 ರಷ್ಟು ಬೈಕ್‌ಗಳಿಗೆ ನಂಬರ್‌ ಪ್ಲೇಟ್‌ಗಳೇ ಇರುವುದಿಲ್ಲ. ವಾಹನ ದಟ್ಟಣೆ ಇದ್ದರೂ, ಬೈಕ್‌ ಸವಾರರಲ್ಲಿ ವೇಗದಿಂದ ಸಾಗುವ ಧಾವಂತ. ಇವರನ್ನು ತಡೆದು ದಂಡ ಹಾಕಬೇಕಾದ ಪೊಲೀಸರು ಇಲ್ಲಿ ಕಾಣಿಸುವುದೇ ಇಲ್ಲ’ ಎಂದು ನಗರದ ವಿದ್ಯಾನಗರ ನಿವಾಸಿ, ಹಿರಿಯ ಪತ್ರಕರ್ತ ಬಾ.ಮಾ. ಬಸವರಾಜಯ್ಯ ದೂರುತ್ತಾರೆ.

‘ಐಸ್‌ಕ್ರೀಂ ಅಂಗಡಿ, ತರಕಾರಿ ಮಳಿಗೆ, ಬೇಕರಿ, ಪಾನಿಪೂರಿ ಹೋಟೆಲ್‌ಗಳ ಮುಂಭಾಗದಲ್ಲಿ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಪ್ರಶ್ನಿಸುವವರೇ ಇಲ್ಲದಂತಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಹಗಲಲ್ಲಿ ಮಾತ್ರವಲ್ಲದೆ ಮಧ್ಯರಾತ್ರಿ ಸಮಯದಲ್ಲೂ ಇಡೀ ಬಡಾವಣೆಯಲ್ಲಿ ವಾಸಿಸುವವರ ಶಾಂತಿಗೆ ಭಂಗ ತರುವಂತೆ ವೇಗವಾಗಿ ಬೈಕ್‌ಗಳನ್ನು ಓಡಿಸುತ್ತಾರೆ. ಅವರನ್ನು ತಡೆದು ನಿಲ್ಲಿಸಲೂ ಸಾಧ್ಯವಾಗುವುದಿಲ್ಲ. ರಾತ್ರಿ ವೇಳೆ ರಸ್ತೆಗೆ ಕಾಲಿಡಲೂ ಭಯ ಉಂಟಾಗಿದೆ’ ಎಂದು ವಿದ್ಯಾನಗರದ ನಿವಾಸಿ ಮಾಗನೂರು ಮಂಜಣ್ಣ ಕಳವಳ ವ್ಯಕ್ತಪಡಿಸಿದರು.

‘ವಿದ್ಯಾನಗರ ಬಡಾವಣೆಯಲ್ಲಿ ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ವಿದ್ಯಾರ್ಥಿಗಳು ಬೈಕ್‌, ಸ್ಕೂಟಿಗಳಲ್ಲಿ ತ್ರಿಬಲ್‌ ರೈಡಿಂಗ್‌ ಮಾಡುತ್ತ ಸಾಗುತ್ತಾರೆ. ಇವರಲ್ಲಿ ಬಹುತೇಕರ ತಲೆಯ ಮೇಲೆ ಹೆಲ್ಮೆಟ್ ಕಾಣುವುದಿಲ್ಲ. ಅಪಾಯವನ್ನು ಆಹ್ವಾನಿಸುತ್ತಲೇ ಇವರೆಲ್ಲರೂ ಬೈಕ್‌ ಚಾಲನೆ ಮಾಡುತ್ತಿದ್ದರೂ ಅವರ ಪಾಲಕರು ಅನುಮತಿ ನೀಡಿದ್ದಾದರೂ ಹೇಗೆ ಎಂಬುದೇ ಬಗೆಹರಿಯದ ಪ್ರಶ್ನೆಯಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಪಕ್ಕದಲ್ಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಪೂರ್ವ ವಲಯ ಐಜಿಪಿ ಅವರ ಅಧಿಕೃತ ನಿವಾಸಗಳಿದ್ದರೂ, ಸಂಚಾರ ನಿಯಮಗಳ ಉಲ್ಲಂಘನೆಗೆ ತಡೆ ಬೀಳುತ್ತಿಲ್ಲ’ ಎಂದೂ ಅವರು ಹೇಳಿದರು.

‘ಎಸ್‌.ಪಿ ಹಾಗೂ ಐಜಿಪಿ ಅವರು ಕಚೇರಿಗೆ ಹೋಗುವ, ಬರುವ ಸಮಯದಲ್ಲಿ ಮಾತ್ರವೇ ಪೊಲೀಸರು ಇಲ್ಲಿನ ರಸ್ತೆಗಳು, ಸಿಗ್ನಲ್‌ಗಳ ಬಳಿ ಕಾಣಿಸಿಕೊಳ್ಳುತ್ತಾರೆ. ಆ ಬಳಿಕ ಅವರು ನಾಪತ್ತೆಯಾಗುತ್ತಾರೆ. ನಿಯಮ ಉಲ್ಲಂಘಿಸುವವರನ್ನು ಹಿಡಿದು ದಂಡ ಹಾಕುವುದು ಇರಲಿ, ಎಚ್ಚರಿಸುವ ಕೆಲಸವನ್ನೂ ಮಾಡುತ್ತಿಲ್ಲ’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

ಹೆಲಿಕಾಪ್ಟರ್ ಹೋದಂತೆ ಶಬ್ದ: ‘ಮಧ್ಯಾಹ್ನದ ಮೌನದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆಯೇ ಹೆಲಿಕಾಪ್ಟರ್‌ ಒಂದು ಮನೆಯ ಮೇಲೇ ಹಾರಿಹೋಯಿತೇನೋ ಎಂಬಂತೆ ಶಬ್ಧ ಕೇಳುತ್ತದೆ. ವಾಸ್ತವದಲ್ಲಿ ಅದು ಹೆಲಿಕಾಪ್ಟರ್‌ ಸದ್ದಲ್ಲ. ಬದಲಿಗೆ, ಸೈಲನ್ಸರ್‌ ಇಲ್ಲದ ಬೈಕ್‌ಗಳ ಸದ್ದಾಗಿರುತ್ತದೆ. ಹೀಗೆ ದಿಢೀರ್‌ ಭಾರಿ ಸದ್ದು ದುರ್ಬಲ ಹೃದಯ ಹೊಂದಿರುವ ಕೆಲವು ವೃದ್ಧರನ್ನೂ, ಚಿಣ್ಣರನ್ನೂ ಬೆಚ್ಚಿ ಬೀಳಿಸುತ್ತದೆ. ಇದಕ್ಕೆ ಕಡಿವಾಣ ಬೀಳದಿದ್ದರೆ ನಮ್ಮ ಆರೋಗ್ಯ ಹಾಳಾಗುವ ಅಪಾಯವಿದೆ’ ಎಂದು ಅನೇಕ ಹಿರಿಯ ನಾಗರಿಕರು ಅಳಲು ತೋಡಿಕೊಂಡರು.

ಸಿಗ್ನಲ್‌ ಜಂಪ್‌, ಮೊಬೈಲ್‌ ಬಳಕೆ: ಇನ್ನು ನಗರದಲ್ಲಿರುವ ಬಹುತೇಕ ಟ್ರಾಫಿಕ್‌ ಸಿಗ್ನಲ್‌ಗಳನ್ನು ಜಂಪ್‌ ಮಾಡಿ ಸಾಗುವ ಬೈಕ್‌ ಸವಾರರ ಸಂಖ್ಯೆಯೂ ಕಡಿಮೆ ಇಲ್ಲ. ಮೇಲಾಗಿ,  ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಲೇ ಸಾಗುವ ನೂರಾರು ಜನ ಬೈಕ್‌ ಸವಾರರು ಸಾಗುವ ದೃಶ್ಯವು ನಗರದ ಯಾವುದಾದರೂ ಪ್ರಮುಖ ರಸ್ತೆಯಲ್ಲಿ ಸುಮ್ಮನೆ 10 ನಿಮಿಷ ನಿಂತರೂ ಕಾಣಸಿಗುತ್ತದೆ. ಮೊಬೈಲ್‌ನಲ್ಲಿ ಮಾತನಾಡುತ್ತಲೇ ವಾಹನ ಚಲಾಯಿಸುವ ಮಹಿಳೆಯರ ಸಂಖ್ಯೆಯೂ ಕಡಿಮೆಯೇನಿಲ್ಲ. ‘ಈ ಕಿರಿಕಿರಿ ಪ್ರತಿ ಜನಸಾಮಾನ್ಯರಿಗೆ ತಕ್ಷಣಕ್ಕೆ ಅರಿವಿಗೆ ಬರುತ್ತದೆ. ನಮ್ಮ ಪೊಲೀಸರಿಗೆ ಯಾಕೆ ಈ ದೃಶ್ಯ ಕಾಣುತ್ತಿಲ್ಲವೋ ಭಗವಂತನೇ ಬಲ್ಲ’ ಎಂದೂ ಅನೇಕರು ದೂರುತ್ತಾರೆ.

ಅಲ್ಲೊಂದು ನ್ಯಾಯ ಇಲ್ಲೊಂದು ನ್ಯಾಯ

‘ನಗರದ ಬೇತೂರು ರಸ್ತೆ ಹಾಗೂ ಹೊರವಲಯದ ಬಾಡಾ ಕ್ರಾಸ್‌ ಬಳಿ 8 ರಿಂದ 10 ಜನ ಪೊಲೀಸರು ಕಾರ್ಯ ನಿತ್ಯ ನಿರ್ವಹಿಸುತ್ತಿರುತ್ತಾರೆ. ಗ್ರಾಮೀಣ ಭಾಗದಿಂದ ಬರುವ ಬೈಕ್‌ ಸೇರಿದಂತೆ ಇತರೆ ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲಿಸಿ ದಂಡ ವಿಧಿಸುತ್ತಾರೆ. ಅಲ್ಲಿ ಅಷ್ಟೊಂದು ಕಟ್ಟುನಿಟ್ಟಾಗಿ ರೈತ ವರ್ಗದವರಿಗೆ ದಂಡ ವಿಧಿಸುವ ಪೊಲೀಸರು ನಗರದೊಳಗೆ ಮಾತ್ರ ಯಾಕೆ ಅದೇ ನಿಯಮ ಪಾಲಿಸುತ್ತಿಲ್ಲ’ ಎಂದು ಬಾ.ಮಾ. ಬಸವರಾಜಯ್ಯ ಪ್ರಶ್ನಿಸಿದರು.

‘ನಿಯಮ ಉಲ್ಲಂಘಿಸಿ ಸಾಗುವ ವಿದ್ಯಾರ್ಥಿಗಳ ಬೈಕ್‌ ಹಾಗೂ ಸ್ಕೂಟಿಗಳ ನಂಬರ್‌ ಪತ್ತೆ ಮಾಡಿ ಕಾಲೇಜಿಗೆ ಹೋದರೆ ಅದರ ವಾರಸುದಾರರ ಬಗ್ಗೆ ತಿಳಿಯುತ್ತದೆ. ಆಗ ನಿಯಮ ಉಲ್ಲಂಘಿಸಿದ ವಿದ್ಯಾರ್ಥಿಗಳಿಗೆ ಸುಲಭವಾಗಿ ದಂಡ ವಿಧಿಸಬಹುದು. ಇದು ಇತರೆ ವಿದ್ಯಾರ್ಥಿಗಳಿಗೆ ಪಾಠವೂ ಆಗಲಿದೆ’ ಎನ್ನುತ್ತಾರೆ ಅವರು.

ನಗರದ ವಿದ್ಯಾನಗರ ಸೇರಿ ವಿವಿಧೆಡೆ ಶೀಘ್ರದಲ್ಲೇ ವಿಶೇಷ ಕಾರ್ಯಾಚರಣೆ ನಡೆಸುವಂತೆ ಸಂಚಾರ ಪೊಲೀಸರಿಗೆ ತಿಳಿಸಲಾಗುವುದು. ವಿದ್ಯಾರ್ಥಿಗಳು ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು
-ಉಮಾ ಪ್ರಶಾಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
18 ವರ್ಷದೊಳಗಿನ ಮಕ್ಕಳಿಗೆ ವಾಹನಗಳ ಚಾಲನೆಗೆ ಅವಕಾಶ ನೀಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಪಿಯುಸಿ ಓದುವ ಹಲವು ವಿದ್ಯಾರ್ಥಿಗಳು ಬೈಕ್‌ ಸ್ಕೂಟಿ ಓಡಿಸುತ್ತಿದ್ದು ದಂಡದ ಬಗ್ಗೆ ಅವರಿಗೆ ಅರಿವು ಮೂಡಿಸಬೇಕಿದೆ
-ಮಾಗನೂರು ಮಂಜಣ್ಣ, ವಿದ್ಯಾನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT