ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದೆಯೊಳಗೆ ಉತ್ತಮ ಮೌಲ್ಯ ಬಿತ್ತುವ ನಾಟಕ: ವಿರಕ್ತಮಠದ ಬಸವಪ್ರಭು ಸ್ವಾಮೀಜಿ

ಬಸವ ಜಯಂತ್ಯುತ್ಸವ: ಜಮುರಾ ನಾಟಕೋತ್ಸವ
Last Updated 1 ಮೇ 2022, 4:26 IST
ಅಕ್ಷರ ಗಾತ್ರ

ದಾವಣಗೆರೆ: ನಾಟಕಗಳು ಎದೆಯೊಳಗೆ ಉತ್ತಮ ಮೌಲ್ಯಗಳನ್ನು ಬಿತ್ತುವ ಕಾರ್ಯವನ್ನು ಮಾಡುತ್ತವೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಬಸವ ಜಯಂತ್ಯುತ್ಸವದ ಪ್ರಯುಕ್ತ ಶಿವಯೋಗಾಶ್ರಮದಲ್ಲಿ ಶನಿವಾರ ನಡೆದ ಜಮುರಾ ನಾಟಕೋತ್ಸವ ಉದ್ಘಾಟನೆಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವಿದ್ಯಾವಂತರು ಎಲ್ಲ ಕಡೆ ಸಿಗುತ್ತಾರೆ. ಆದರೆ ಒಳ್ಳೆಯ ವ್ಯಕ್ತಿಗಳು, ವಿಚಾರವಂತರು, ಮೌಲ್ಯ, ಆದರ್ಶಗಳನ್ನು ಹೊಂದಿದವರಸಂಖ್ಯೆ ಬಹಳ ಕಡಿಮೆ ಇದೆ. ಅಂಥ ವ್ಯಕ್ತಿಗಳನ್ನು ರೂಪಿಸುವ ಕೆಲಸವನ್ನು ನಾಟಕಗಳು ಮಾಡುತ್ತವೆ. ನಾಟಕಗಳೆಂದರೆ ಗಾಂಧೀಜಿ ಅವರು ಸತ್ಯದ ಹಾದಿಯಲ್ಲಿ ನಡೆಯಲು ಸತ್ಯ ಹರಿಶ್ಚಂದ್ರ ನಾಟಕ ನೋಡಿ ಆದ ಪರಿವರ್ತನೆಯೇ ಕಾರಣ ಎಂಬುದು ಎಲ್ಲರಿಗೂ ಗೊತ್ತು. ನಾಟಕಕ್ಕೆ ಅಂಥ ಶಕ್ತಿ ಇದೆ. ವ್ಯಕ್ತಿಯನ್ನು, ಸಮಾಜವನ್ನು ಪರಿವರ್ತನೆ ಮಾಡಲು ನಾಟಕಗಳು ಅಗತ್ಯ ಎಂದು ವಿಶ್ಲೇಷಿಸಿದರು.

12ನೇ ಶತಮಾನದಲ್ಲಿ ಶಿಕ್ಷಣ ಮೇಲ್ವರ್ಗಕ್ಕಷ್ಟೇ ಸೀಮಿತವಾಗಿತ್ತು. ಬಸವಣ್ಣ ಅವರು ಸರ್ವಸಮಾಜಕ್ಕೆ ಶಿಕ್ಷಣ ನೀಡಲು ಕಾರ್ಯ ಮಾಡಿದರು. ಅದು ಪುರುಷರಿಗೆ ಮಾತ್ರವಲ್ಲ, ಮಹಿಳೆಯರಿಗೂ ಶಿಕ್ಷಣ ನೀಡುವಂತೆ ಮಾಡಿದರು. ಅಂಥ ಬಸವಣ್ಣನ ಜಯಂತಿಯನ್ನು ಯಾರೂ ಆಚರಿಸುತ್ತಿರಲಿಲ್ಲ. 1913ರಲ್ಲಿ ಜಯದೇವ ಸ್ವಾಮೀಜಿ, ಹರ್ಡೇಕರ ಮಂಜಪ್ಪ, ಮೃತ್ಯುಂಜಯ ಸ್ವಾಮೀಜಿ ದಾವಣಗೆರೆಯಲ್ಲಿ ಆರಂಭಿಸಿದರು ಎಂದು ನೆನಪಿಸಿಕೊಂಡರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಧೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ‘ಈ ಮಠವೂ ಸೇರಿದಂತೆ ಕರ್ನಾಟಕದ ಅನೇಕ ಮಠಗಳು ಮೌಢ್ಯದ ವಿರುದ್ಧ ಜನಜಾಗೃತಿ ಮಾಡುತ್ತಿವೆ. ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ದೇಶ, ವಿದೇಶಗಳಲ್ಲಿ ಬಿತ್ತುವ ಕಾರ್ಯ ಮಾಡುತ್ತಿವೆ’ ಎಂದು ಶ್ಲಾಘಿಸಿದರು.

‘ಬಸವ ಜಯಂತಿ ಆಚರಣೆ ಆಗದೇ ಅನುಸರಣೆ ಆಗಬೇಕು. ಬಸವಾದಿ ಶರಣರ ವಚನಗಳನ್ನು ನಾವೂ ರೂಢಿಸಿಕೊಳ್ಳಬೇಕು. ಬೇರೆಯವರಿಗೂ ಹೇಳಿಕೊಡಬೇಕು. ಆಗ ನಾವು ಸರ್ವ ಸಮಾನವಾದ ಸಮಾಜವನ್ನು ನಿರ್ಮಿಸಲು ಸಾಧ್ಯ. ಅನುಭವ ಮಂಟಪದ ಪರಿಕಲ್ಪನೆ ಈಡೇರಲು ಸಾಧ್ಯ. ಡಾ. ಬಿ.ಆರ್‌. ಅಂಬೇಡ್ಕರ್‌ ರಚಿಸಿದ ಸಂವಿಧಾನದಲ್ಲಿಯೂ ಸರ್ವ ಸಮಾನವಾದ ಪರಿಕಲ್ಪನೆ ಇದೆ. ಅದನ್ನು ಅಳವಡಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

‘ಗ್ರಾಮೀಣ ಪ್ರದೇಶದಲ್ಲಿ ಸಹಬಾಳ್ವೆ ಇತ್ತು. ಕೊಡುಕೊಳ್ಳುವಿಕೆ ಇತ್ತು. ಎಲ್ಲರ ಹಬ್ಬಗಳನ್ನು ಎಲ್ಲರೂ ಒಟ್ಟು ಸೇರಿ ಆಚರಿಸಲಾಗುತ್ತಿತ್ತು. ಈಗ ಸಂಕುಚಿತಗೊಂಡಿದ್ದೇವೆ. ಬಾಂಧವ್ಯ ದೂರವಾಗಿದೆ. ಇದರಿಂದ ಹೊರಬರಬೇಕು’ ಎಂದರು.

ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಅಂಬಣ್ಣ, ಜಿಲ್ಲಾ ನಿವೃತ್ತ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್‌, ಮಹಿಳಾ ಸಾಧನಾ ಟ್ರಸ್ಟ್‌ ಅಧ್ಯಕ್ಷೆ ಡಾ. ಪುಷ್ಪಲತಾ ಪವಿತ್ರಾರಾಜ್‌, ಜಯದೇವ ಪ್ರಸಾದನಿಲಯದ ಕಾರ್ಯದರ್ಶಿ ಎಂ. ಜಯಕುಮಾರ್‌ ಇದ್ದರು.

ಎನ್.ಜೆ. ಶಿವಕುಮಾರ್ ಸ್ವಾಗತಿಸಿದರು. ಶರಣಬಸವ ಶರಣು ಸಮರ್ಪಿಸಿದರು. ರುಕ್ಮಬಾಯಿ ವಚನ ಪ್ರಾರ್ಥನೆ ಮಾಡಿದರು. ಯುಗಧರ್ಮ ರಾಮಣ್ಣ ಜನಪದ ಲಾವಣಿ ಪದಗಳನ್ನು ಹಾಡಿದರು. ಬಳಿಕ ‘ಅವಿರಳಜ್ಞಾನಿ ಚೆನ್ನಬಸವಣ್ಣ’ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT