ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವರತ್ನ, ವಿಶ್ವಮಾನವ ಅಂಬೇಡ್ಕರ್‌

ಬಾಬಾ ಸಾಹೇಬರ 66ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಜಿ.ಪಂ. ಸಿಇಒ ಡಾ. ಚನ್ನಪ್ಪ
Last Updated 7 ಡಿಸೆಂಬರ್ 2022, 4:47 IST
ಅಕ್ಷರ ಗಾತ್ರ

ದಾವಣಗೆರೆ: ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ರಚಿಸಿ ಇಷ್ಟೊಂದು ರಾಜ್ಯಗಳನ್ನು, ಇಷ್ಟೊಂದು ಜನರನ್ನು ಒಂದೇ ಕೊಂಡಿಯಲ್ಲಿ ಬೆಸೆದು, ಎಲ್ಲರಿಗೂ ಉತ್ತಮ ಜೀವನ ನಡೆಸಲು ಅವಕಾಶ ಮಾಡಿಕೊಟ್ಟ ವಿಶ್ವರತ್ನ, ವಿಶ್ವಮಾನವ ಡಾ. ಬಿ.ಆರ್‌. ಅಂಬೇಡ್ಕರ್‌ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎ. ಚನ್ನಪ್ಪ ಬಣ್ಣಿಸಿದರು.

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ 66ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಅಂಬೇಡ್ಕರ್‌ ಬಹಳ ದೊಡ್ಡ ಸಾಧನೆ ಮಾಡಿದ್ದಲ್ಲದೇ ಆ ಸಾಧನೆಯ ಬೆಳಕಿನಲ್ಲಿ ಸಮಾಜವನ್ನು ಬೆಳಗಿದವರು. ನಮ್ಮ ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು ಎಂದು ಸಂದೇಶ ಸಾರಿದ ಮಹಾತ್ಮರು. ಕೋಟಿ ಕಂಠಗಳು ಸ್ಮರಿಸುವ ಸಾಧನೆ ಮಾಡಿದವರು ಎಂದು ಹೇಳಿದರು.

ವಿವಿಧ ಜಾತಿ, ಧರ್ಮ, ವೈವಿಧ್ಯತೆಯ ಭೌಗೋಳಿಕ ಪರಿಸ್ಥಿತಿ ಹೊಂದಿದ್ದರೂ ನಮ್ಮ ದೇಶ ಒಗ್ಗಟ್ಟಿನಿಂದಿರುವುದಕ್ಕೆ ಸಂವಿಧಾನ ಮುಖ್ಯ ಕಾರಣ. ಅಂತಹ ಶ್ರೇಷ್ಠ ಸಂವಿಧಾನದ ಮೌಲ್ಯಗಳನ್ನ ಕಾಪಾಡಿಕೊಂಡು ಅಂಬೇಡ್ಕರರ ಚಿಂತನೆಯ ಬೆಳಕಿನಲ್ಲಿ ನಾವು ಸಾಗಬೇಕು ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಪಿಎನ್. ಲೋಕೇಶ್‌ ಮಾತನಾಡಿ, ‘ಸಂಪ್ರದಾಯದ ಹೆಸರಿನಲ್ಲಿ ಅನಿಷ್ಟ ಆಚರಣೆಗಳನ್ನು ಮಾಡುತ್ತಾ ಬಂದಿದ್ದ ಈ ದೇಶದಲ್ಲಿ ಅವೆಲ್ಲವನ್ನು ತೊಲಗಿಸಿ ಎಲ್ಲರೂ ಸಮಾನರು ಎಂದು ಸಾರುವ ಮೂಲ ಕಾನೂನುಗಳನ್ನು ನೀಡಿದವರು ಮಹಾನ್‌ ಮಾನವತಾವಾದಿ ಡಾ.ಬಿ.ಆರ್‌. ಅಂಬೇಡ್ಕರ್‌’ ಎಂದು ಹೇಳಿದರು.

ಸಾಮಾಜಿಕ ರೋಗಕ್ಕೆ ಔಷಧ ನೀಡಿದ, ಚಿಕಿತ್ಸೆ ನೀಡಿದ ಸಾಮಾಜಿಕ ವೈದ್ಯ ಅಂಬೇಡ್ಕರ್. ದೇಶ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ, ಶಿಕ್ಷಣ ಪಡೆದಿದ್ದರೂ ಇಂದಿಗೂ ಸಾಮಾಜಿಕ ರೋಗಗಳು ಬೇರೆ ಬೇರೆ ರೂಪದಲ್ಲಿ ಪ್ರಕಟಗೊಳ್ಳುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಹೆಗ್ಗೆರೆ ರಂಗಪ್ಪ ಮತ್ತು ಐರಣಿ ಚಂದ್ರು ಅಂಬೇಡ್ಕರ್ ಕುರಿತು ಗಾಯನ ಪ್ರಸ್ತುತ ಪಡಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಅಂಬೇಡ್ಕರ್ ಅಭಿಮಾನಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT