ಮಂಗಳವಾರ, ಜೂನ್ 2, 2020
27 °C

ಹೊರಗಿನಿಂದ ಹಳ್ಳಿಗೆ ಬಂದವರ ಮೇಲೆ ನಿಗಾ: ಸಿಇಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ದೇಶದಾದ್ಯಂತ ‘ಲಾಕ್‌ಡೌನ್‌’ ಘೋಷಿಸಿದ ಬಳಿಕ ಬೆಂಗಳೂರು ಸೇರಿ ಕೆಲವು ಮಹಾನಗರಗಳಿಂದ ಜಿಲ್ಲೆಯ ಹಳ್ಳಿಗಳಿಗೆ ಬಂದ ಜನರನ್ನು ಆಶಾ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಪತ್ತೆ ಮಾಡಿ ಅವರ ಆರೋಗ್ಯದ ಮೇಲೆ ನಿಗಾ ವಹಿಸುತ್ತಿದ್ದಾರೆ.

‘ನಗರ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಜನ ಲಾಕ್‌ಡೌನ್‌ ಮಾಡಿರುವುದರಿಂದ ತಮ್ಮ ಹಳ್ಳಿಗಳಿಗೆ ಮರಳಿದ್ದಾರೆ. ಅಂಥವರಿಂದ ಕೊರೊನಾ ಸೋಂಕು ಹರಡಬಾರದು ಎಂಬ ಉದ್ದೇಶದಿಂದ ವಿಶೇಷವಾಗಿ ಬೆಂಗಳೂರು, ಮಹಾರಾಷ್ಟ್ರ, ಕೇರಳದಿಂದ ಹಳ್ಳಿಗಳಿಗೆ ಬಂದಿರುವ ಜನರನ್ನು ಗುರುತಿಸುವ ಕೆಲಸ ಮಾಡಿದ್ದೇವೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲೂ ಆಶಾ ಕಾರ್ಯಕರ್ತೆಯರು ಪಿಡಿಒ, ಪಂಚಾಯಿತಿ ಸಿಬ್ಬಂದಿ ಅಥವಾ ಸದಸ್ಯರೊಂದಿಗೆ ಮನೆ ಮನೆಗೆ ತೆರಳಿ ನಗರ ಪ್ರದೇಶಗಳಿಂದ ಬಂದವರ ವಿವರಗಳನ್ನು ಕಲೆ ಹಾಕಿದ್ದಾರೆ. ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡರೆ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚನೆ ನೀಡಿದ್ದಾರೆ. ಕೊರೊನಾ ಸೋಂಕಿನ ಲಕ್ಷಣ ಕಂಡುಬಂದರೆ ಕೂಡಲೇ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ’ ಎಂದು ಹೇಳಿದರು.

‘ಬೆಂಗಳೂರು, ಮಹಾರಾಷ್ಟ್ರ, ಕೇರಳದಿಂದ ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಹರಿಹರ ತಾಲ್ಲೂಕುಗಳ ಹಳ್ಳಿಗಳಿಗೆ ಇದುವರೆಗೆ ಬಂದ 1,697 ಜನರನ್ನು ಗುರುತಿಸಲಾಗಿದೆ. ದಾವಣಗೆರೆ ಹಾಗೂ ಜಗಳೂರು ತಾಲ್ಲೂಕಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು