ಶುಕ್ರವಾರ, ಜನವರಿ 22, 2021
24 °C
ಧಾರವಾಡದ ಡಾ. ರಾಜೇಂದ್ರ ಪೊದ್ದಾರ ಹೇಳಿಕೆ

ನೀರು ನಿರ್ವಹಣೆ: ಬಳಕೆದಾರರ ಸಂಘಗಳಷ್ಟೇ ಆಶಾಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಭವಿಷ್ಯದಲ್ಲಿ ಸಾಮಾಜಿಕ, ಆರ್ಥಿಕ ಸಂಕಷ್ಟಕ್ಕಿಂತ ನೀರಿನ ಸಂಘರ್ಷ ಜಗತ್ತನ್ನು ತತ್ತರಿಸುವಂತೆ ಮಾಡುವ ಆತಂಕವಿದೆ. ನೀರನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ನಿರ್ದೇಶಕ ಡಾ. ರಾಜೇಂದ್ರ ಪೊದ್ದಾರ ಸಲಹೆ
ನೀಡಿದರು.

ನೀರು ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಮತ್ತು ದಾವಣಗೆರೆ ವಿಶ್ವವಿದ್ಯಾ‌ಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಿಂದ ಭದ್ರಾ ಕಾಡಾ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘಗಳ ಸದಸ್ಯರಿಗಾಗಿ ಗುರುವಾರ ಏರ್ಪಡಿಸಿದ್ದ ಪುನಶ್ಚೇತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಿನಿಂದಲೇ ನೀರು ನಿರ್ವಹಣೆಯ ಬಗ್ಗೆ ಜಾಗೃತಿ ವಹಿಸುವುದು ಮುಖ್ಯ. ನೀರಿಗಾಗಿ ರಾಜ್ಯ, ರಾಷ್ಟ್ರಗಳಷ್ಟೇ ಅಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸಂಘರ್ಷ ನಡೆಯುತ್ತಿದೆ. ಜಲ ಸಂಘರ್ಷದ ಪ್ರಸ್ತುತ ಸಂದರ್ಭದಲ್ಲಿ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಿ ಭವಿಷ್ಯವನ್ನು ಕಾಪಾಡಲು ನೀರು ಬಳಕೆದಾರರ ಸಹಕಾರ ಸಂಘಗಳಷ್ಟೇ ಆಶಾಕಿರಣ ಎಂದರು.

ಪ್ರಸ್ತುತ ಲಭ್ಯವಿರುವ ಒಟ್ಟು ನೀರಿನಲ್ಲಿ ಕೃಷಿ ಕ್ಷೇತ್ರಕ್ಕೆ ಶೇ 80ರಷ್ಟು ಬಳಕೆಯಾಗುತ್ತಿದೆ. ಅದರಲ್ಲಿ ಶೇ 70ರಷ್ಟು ಪ್ರಮಾಣದ ನೀರು ನಿರ್ವಹಣೆಯಿಲ್ಲದೆ ವ್ಯರ್ಥವಾಗುತ್ತಿದೆ. ಅತಿಯಾದ ನೀರು ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದ್ದರೆ, ನೀರಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು
ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ‘ಹವಾಮಾನ ವೈಪರೀತ್ಯದಿಂದ ಇಡೀ ಜಗತ್ತು ತೀವ್ರ ಆತಂಕಕಾರಿ ವಾತಾವರಣವನ್ನು ಎದುರಿಸುತ್ತಿದೆ. ಸಮಸ್ಯೆಯ ಗಂಭೀರತೆ ಅರಿತು, ಪರಿಹಾರ ಮಾರ್ಗ ಕಂಡುಕೊಳ್ಳಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಭದ್ರಾ ನೀರು ಬಳಕೆದಾರರ ಮಹಾಮಂಡಳದ ನಿರ್ದೇಶಕ ತೇಜಸ್ವಿ ಪಟೇಲ್, ‘ಕಾಲುವೆಗೆ ನೀರು ಹರಿಸುವುದಷ್ಟೇ ಅಲ್ಲ, ಅದನ್ನು ವೈಜ್ಞಾನಿಕ ರೀತಿಯಲ್ಲಿ ರೈತರ ಜಮೀನುಗಳಿಗೆ ಪೂರೈಸುವ ವ್ಯವಸ್ಥೆಯೂ ಆಗಬೇಕು. ನೀರಿನ ಲಭ್ಯತೆ, ವಿತರಣಾ ವ್ಯವಸ್ಥೆ ಹಾಗೂ ಬೆಳೆ ವಿಧಾನಗಳ ಲೆಕ್ಕ ಮಾಡಿ, ಯೋಜನಾಪೂರ್ವಕವಾಗಿ ನೀರಿನ ವಿತರಣೆಯಾಗಬೇಕು. ಸೌಲಭ್ಯ, ಸಂಪನ್ಮೂಲಗಳೊಂದಿಗೆ ಇದರ ಸಂಪೂರ್ಣ ಹೊಣೆ ನೀರು ಬಳಕೆದಾರರಿಗೆ ವಹಿಸಿದಾಗ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದರು.

ವಿಶ್ವವಿದ್ಯಾಲಯಗಳು ಕೃಷಿ, ರೈತರ ಸಮಸ್ಯೆ, ಬೆಳೆ ಪದ್ಧತಿ, ನೀರಾವರಿ ವ್ಯವಸ್ಥೆ ಹಾಗೂ ಕೃಷಿ ಮಾರುಕಟ್ಟೆ ಆಧಾರಿತ ಬೋಧನೆಗೆ ಗಮನ ನೀಡಬೇಕು. ಸಮುದಾಯದ ಸಹಭಾಗಿತ್ವದಲ್ಲಿ ಜಾಗೃತಿ ಮೂಡಿಸುವ ಕೆಲಸ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ವಿಜ್ಞಾನ ನಿಕಾಯದ ಡೀನ್ ಪ್ರೊ. ವಿ. ಕುಮಾರ್, ಹಣಕಾಸು ಅಧಿಕಾರಿ ಪ್ರೊ. ಗೋಪಾಲ ಎಂ. ಅಡವಿರಾವ್, ಭದ್ರಾ ಕಾಡಾ ಭೂ ಅಭಿವೃದ್ಧಿ ಅಧಿಕಾರಿ ಕೆ. ನಯನಾ, ವಾಲ್ಮಿ ಸಮಾಲೋಚಕ ಸುರೇಶ ಕುಲಕರ್ಣಿ ಮಾತನಾಡಿದರು. ವಾಲ್ಮಿ ಪ್ರಾಧ್ಯಾಪಕ ಬಸವರಾಜ ಬಂಡಿವಡ್ಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ ಕಣಸೋಗಿ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಮೇಘನಾ ನಾಡಿಗೇರ, ಎಂ. ವಿನಯ್ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು