ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾ ನಾಲೆಯಿಂದ ಕೆರೆಗಳಿಗೆ ನೀರು; ಟಿ.ವಿ. ಸ್ಟೇಷನ್ ಕೆರೆ ಅರ್ಧದಷ್ಟು ಭರ್ತಿ?

ನೀರಿನ ಸಮಸ್ಯೆ ಮತ್ತಷ್ಟು ತೀವ್ರವಾಗದಂತೆ ಎಚ್ಚರ
Published 1 ಏಪ್ರಿಲ್ 2024, 7:27 IST
Last Updated 1 ಏಪ್ರಿಲ್ 2024, 7:27 IST
ಅಕ್ಷರ ಗಾತ್ರ

ದಾವಣಗೆರೆ: ನಗರಕ್ಕೆ ಕುಡಿಯುವ ನೀರು ಒದಗಿಸುವ ಟಿ.ವಿ. ಸ್ಟೇಷನ್ ಕೆರೆ ಹಾಗೂ ಕುಂದುವಾಡ ಕೆರೆಗಳಿಗೆ ಭದ್ರಾ ನಾಲೆಯಿಂದ ನೀರನ್ನು ಹರಿಸಲಾಗುತ್ತಿದೆ. ಆ ಮೂಲಕ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ತೀವ್ರವಾಗದಂತೆ ಎಚ್ಚರ ವಹಿಸಲಾಗುತ್ತಿದೆ.

ಮಾರ್ಚ್‌ 21ರಿಂದ ಟಿ.ವಿ.ಸ್ಟೇಷನ್‌ ಕೆರೆಗೆ ನೀರು ಹರಿಸಲಾಗುತ್ತಿದೆ. ಕೆರೆಯು 65 ಎಂಸಿಎ‌‌ಫ್‌ಟಿ (ಮಿಲಿಯನ್‌ ಕ್ಯೂಬಿಕ್‌ ಫೀಟ್‌) ನೀರಿನ ಸಾಮರ್ಥ್ಯ ಹೊಂದಿದ್ದು, ಈ ಪೈಕಿ ಈಗಾಗಲೇ 35 ಎಂಸಿಎ‌‌ಫ್‌ಟಿ ಯಷ್ಟು ನೀರು ಸಂಗ್ರಹವಾಗಿದೆ. ಏಪ್ರಿಲ್‌ 1ರ ರಾತ್ರಿವರೆಗೂ ಕೆರೆಗೆ ನೀರು ಹರಿಯಲಿದ್ದು, ಕೆರೆಯು ತನ್ನ ಸಾಮರ್ಥ್ಯದ ಅರ್ಧದಷ್ಟು ನೀರನ್ನು ಹೊಂದುವ ನಿರೀಕ್ಷೆಯನ್ನು ಪಾಲಿಕೆ ಹೊಂದಿದೆ.

‘ಆರಂಭದ ಕೆಲವು ದಿನ ಮಾತ್ರ ನೀರು ನಿಧಾನವಾಗಿ ಹರಿದಿದೆ. ಬಾಕಿ ದಿನಗಳಲ್ಲಿ ರಭಸವಾಗಿಯೇ ಹರಿದಿದೆ. ಟಿ.ವಿ.ಸ್ಟೇಷನ್‌ ಕೆರೆಯಿಂದ 18 ವಾರ್ಡ್‌ಗಳಿಗೆ 8ರಿಂದ 13 ದಿನಗಳಿಗೊಮ್ಮೆ ನೀರು ಪೂರೈಸಲಾಗುವುದು. ಟಿ.ವಿ.ಸ್ಟೇಷನ್‌ ಕೆರೆಯು ಪೂರ್ತಿ ತುಂಬಿದರೆ 3 ತಿಂಗಳು ನೀರು ಪೂರೈಸಬಹುದು. ಇದೀಗ ಸಂಗ್ರಹವಾಗಿರುವ ನೀರನ್ನು 40 ದಿನ ಪೂರೈಸಬಹುದು’ ಎನ್ನುತ್ತಾರೆ ಪಾಲಿಕೆ ಎಂಜಿನಿಯರ್‌ಗಳು.

ಇನ್ನು 4 ಮೀಟರ್‌ಗೂ ಹೆಚ್ಚು ನೀರು ಕುಂದುವಾಡ ಕೆರೆಯಲ್ಲಿ ಸಂಗ್ರಹವಾಗಿದೆ ಎನ್ನಲಾಗಿದೆ.

ನದಿಗೆ ನೀರು:

ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಈಗಾಗಲೇ 2 ಟಿಎಂಸಿ ನೀರು ಹರಿಸಲಾಗಿದ್ದು, ಏಪ್ರಿಲ್‌ 1 ಅಥವಾ 2ರಂದು ಈ ಭಾಗವನ್ನು ತಲುಪುವ ನಿರೀಕ್ಷೆ ಇದೆ. ಆಗ ಟಿ.ವಿ.ಸ್ಟೇಷನ್‌ ಹಾಗೂ ಕುಂದುವಾಡ ಕೆರೆಗಳಿಂದ ನೀರು ಕೊಡುವುದನ್ನು ನಿಲ್ಲಿಸಿ ನದಿ ನೀರನ್ನು ರಾಜನಹಳ್ಳಿ ಜಾಕ್‌ವೆಲ್‌ನಿಂದ ಪಂಪ್‌ ಮಾಡಿ ಬಾತಿ ಶುದ್ಧೀಕರಣ ಘಟಕದ ಮೂಲಕ ನೇರವಾಗಿ ಸರಬರಾಜು ಮಾಡಲಾಗುತ್ತದೆ. ನದಿಯಲ್ಲಿ ನೀರಿನ ಹರಿವು ನಿಂತ ಬಳಿಕ ಕೆರೆಗಳಿಂದ ವಾರ್ಡಗಳಿಗೆ ನೀರು ಪೂರೈಸಲು ಯೋಜಿಸಲಾಗಿದೆ.

ಬರದ ಕಾರಣಕ್ಕೆ ಎಲ್ಲೆಡೆ ನೀರಿನ ಸಮಸ್ಯೆ ಇರುವುದರಿಂದ ಸಾರ್ವಜನಿಕರು ವಾಹನ ತೊಳೆಯುವುದು ಸೇರಿದಂತೆ ಇನ್ನಿತರ ಕಾರಣಗಳಿಗೆ ನೀರನ್ನು ವ್ಯರ್ಥವಾಗಿ ಬಳಸಬಾರದು
ಉದಯಕುಮಾರ್ ಕಾರ್ಯಪಾಲಕ ಎಂಜಿನಿಯರ್‌ ಪಾಲಿಕೆ
ಟ್ಯಾಂಕರ್‌ ಮೂಲಕವೂ ನೀರು ಪೂರೈಕೆ
‘ಸದ್ಯ ಏಪ್ರಿಲ್‌ 20ರ ವರೆಗೂ ಕೆರೆ ಹಾಗೂ ನದಿಯ ನೀರನ್ನು ಪೂರೈಸಲಾಗುವುದು. ಆ ಬಳಿಕ ಟ್ಯಾಂಕರ್ ಮೂಲಕ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ. ನಗರದಲ್ಲಿ 1080 ಬೋರ್‌ವೆಲ್‌ಗಳಿದ್ದು 63 ಬೋರ್‌ವೆಲ್‌ಗಳನ್ನು ರೀಬೋರ್‌ ಮಾಡಲಾಗುತ್ತಿದೆ. ಪ್ರತೀ ವಾರ್ಡ್‌ಗೂ 3 ಟ್ಯಾಂಕರ್‌ಗಳಿಂದ ನೀರು ಪೂರೈಸಲು ಟೆಂಡರ್‌ ಕೂಡ ಕರೆಯಲಾಗಿದೆ’ ಎಂದು ಪಾಲಿಕೆಯ ಕುಡಿಯುವ ನೀರು ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಉದಯಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT