ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್ ಏರಿಕೆಯಿಂದ ಬಂದ ಹಣ ಎಲ್ಲಿ ಹೋಗುತ್ತಿದೆ

ಕೇಂದ್ರ ಸರ್ಕಾರಕ್ಕೆ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಪ್ರಶ್ನೆ
Last Updated 13 ಜೂನ್ 2021, 4:01 IST
ಅಕ್ಷರ ಗಾತ್ರ

ದಾವಣಗೆರೆ:ಕೇಂದ್ರದ ಆಡಳಿತ ವೈಫಲ್ಯದಿಂದ ದೇಶದ ಆರ್ಥಿಕ ಸ್ಥಿತಿ ನೆಲಕಚ್ಚಿದ್ದು, ಪೆಟ್ರೋಲ್ ಬೆಲೆ ಹೆಚ್ಚಿಸಿ ಜನರಿಂದ ಉಳಿತಾಯ ಮಾಡುವ ಹಣವನ್ನು ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದುಕೇಂದ್ರದ ಮಾಜಿ ಸಚಿವ ಹಾಗೂ ಜಿಲ್ಲೆಯ ಉಸ್ತುವಾರಿ ಕೆ.ಎಚ್. ಮುನಿಯಪ್ಪ ಪ್ರಶ್ನಿಸಿದರು.

‘ಪೆಟ್ರೋಲ್ ಮೂಲ ಬೆಲೆ ₹ 35ಕ್ಕೆ ದೊರೆಯುತ್ತಿರುವಾಗ ₹ 65 ತೆರಿಗೆ ವಿಧಿಸುತ್ತಿದ್ದು, ಇಡೀ ವಿಶ್ವದಲ್ಲಿಯೇ ಪೆಟ್ರೋಲ್‌ಗೆ ಅತಿ ಹೆಚ್ಚು (ಶೇ 33)ರಷ್ಟು ತೆರಿಗೆ ವಿಧಿಸುತ್ತಿರುವುದು ಖಂಡನೀಯ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

‘ಬಹುದೊಡ್ಡ ಕಂಪನಿಗಳ ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ, ರೈತರ ಸಾಲ ಮನ್ನಾ ಮಾಡುತ್ತಿಲ್ಲ. ಯುಪಿಎ ಸರ್ಕಾರ ರೈತರ ₹72 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿತ್ತು’ ಎಂದು ಸಮರ್ಥಿಸಿಕೊಂಡರು.

‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೋವಿಡ್ ಬಗ್ಗೆ ಮುನ್ನೆಚ್ಚರಿಕೆ ನೀಡಿದರೂ ಪ್ರಧಾನಿ ನರೇಂದ್ರ ಮೋದಿ ಅವರು ಹಗುರವಾಗಿ ತೆಗೆದುಕೊಂಡಿದ್ದರಿಂದ ಇಂದು ಲಕ್ಷಾಂತರ ಜನರು ಆಮ್ಲಜನಕ, ಬೆಡ್ ಸಿಗದೇ ಸಾಯುತ್ತಿದ್ದಾರೆ. ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೆ ಏರುತ್ತಿದ್ದು, ಜನರ ಮೇಲೆ ಹೊರೆ ಬೀಳುತ್ತಿದೆ’ ಎಂದು ಆರೋಪಿಸಿದರು.

‘ಬಡವರು, ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕಾದ ಸರ್ಕಾರ ಅವರ ಕಷ್ಟಕ್ಕೆ ನೆರವಾಗುತ್ತಿಲ್ಲ. ವಚನ ಭ್ರಷ್ಟ ಆಡಳಿತದಿಂದಾಗಿ ಲಕ್ಷಾಂತರ ಕಾರ್ಮಿಕರು ಬೀದಿಪಾಲಾಗಿದ್ದಾರೆ.ರೈತರು ಬೆಳೆಯುವ ಉತ್ಪನ್ನವನ್ನು ರಫ್ತು ಮಾಡುವ ಯೋಗ್ಯತೆ ಇಲ್ಲವಾಗಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ₹ 900 ಆಗಿದ್ದು, ಈ ವಚನಭ್ರಷ್ಟ ಆಡಳಿತದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಆಪಾದಿಸಿದರು.

‘ಕಾಂಗ್ರೆಸ್‌ವತಿಯಿಂದ ಬೆಂಗಳೂರಿನಲ್ಲಿ 10 ಆಂಬುಲೆನ್ಸ್ ಅನ್ನು ರೋಗಿಗಳ ಸೇವೆಗೆ ಮೀಸಲಿರಿಸಿದೆ. 10 ಜಿಲ್ಲೆಗಳಲ್ಲಿ ತಲಾ ಒಂದು ಹಾಗೂ ನನ್ನ ಕ್ಷೇತ್ರದಲ್ಲಿ ತಾಲ್ಲೂಕಿಗೊಂದು ಆಂಬುಲೆನ್ಸ್‌ಗಳನ್ನು ಸೇವೆಗೆ ಸಮರ್ಪಿಸಲಾಗಿದೆ’ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ದಿನೇಶ್‌ ಕೆ.ಶೆಟ್ಟಿ, ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್, ಎಸ್‌ಸಿ ಘಟಕದ ಅಧ್ಯಕ್ಷ ವೀರಭದ್ರಪ್ಪ, ವೈ.ರಾಮಪ್ಪ, ರಂಗಸ್ವಾಮಿ, ಚನ್ನಬಸಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT