ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ: ಸಂಸದ ಜಿ.ಎಂ. ಸಿದ್ದೇಶ್ವರ

Last Updated 18 ಡಿಸೆಂಬರ್ 2019, 13:26 IST
ಅಕ್ಷರ ಗಾತ್ರ

ದಾವಣಗೆರೆ: ಹನಗವಾಡಿ ಇಂಡಸ್ಟ್ರಿಯಲ್‌ ಏರಿಯಾದಲ್ಲಿ ನಿರ್ಮಾಣಗೊಳ್ಳಲಿರುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ 2ಜಿ ಬಯೋ ಎಥೆನಲ್‌ ಪ್ಲಾಂಟ್‌ಗೆ ಮೂರು ತಿಂಗಳ ಒಳಗೆ ಗುದ್ದಲಿಪೂಜೆ ನೆರವೇರಿಸಲಾಗುವುದು. ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಎಥೆನಲ್‌ ಘಟಕದ ಬಗ್ಗೆ ಎಂಆರ್‌ಪಿಎಲ್‌ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಸರ್ಕಾರಿ ಅಧಿಕಾರಿಗಳ ಜತೆಗೆ ಬುಧವಾರ ಸಭೆ ನಡೆಸಿ ಅವರು ಮಾತನಾಡಿದರು. ಭೂಮಿ ನೀಡಿದ 27 ಕುಟುಂಬಗಳಿವೆ. ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ನೀಡಬೇಕು. ಉಳಿದಂತೆ ಅರ್ಹತೆ ಇರುವ ಸ್ಥಳೀಯರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ದೇಶದಲ್ಲಿ 12 ಕಡೆ ಬಯೊ ಎಥೆನಲ್‌ ಘಟಕ ತೆರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈಗ ಪೆಟ್ರೋಲಿಯಂಗೆ ಸಂಬಂಧಿಸಿದಂತೆ ಶೇ 80ರಷ್ಟನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅದನ್ನು 2022ರ ಹೊತ್ತಿಗೆ ಶೇ 70ಕ್ಕೆ ಇಳಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಕರ್ನಾಟಕದಲ್ಲಿ ಏಕೈಕ ಘಟಕ ಇದು ಎಂದು ಎಂಆರ್‌ಪಿಎಲ್‌ ಕಾರ್ಪೊರೇಶನ್‌ ಜನರಲ್‌ ಮ್ಯಾನೇಜರ್‌ ಗಿರೀಶ್‌ ಪಿಪಿಟಿ ಮೂಲಕ ಮಾಹಿತಿ ನೀಡಿದರು.

20 ಗುಂಟೆ ಬಿಡಿ: ‘47.65 ಎಕರೆ ಭೂಮಿ ಒದಗಿಸಿ 2 ವರ್ಷ ಆಯಿತು. ಡಿಗ್ಗಿಂಗ್‌ ಆರಂಭಿಸಿ 1 ವರ್ಷ ಆಯಿತು. ಎಥೆನಲ್‌ ಘಟಕ ಆರಂಭವಾಗಲಿದೆ ಎಂದು ನಾನು ಹೋದಲ್ಲಿ ಬಂದಲ್ಲಿ ಭಾಷಣ ಹೊಡೆಯುತ್ತಿದ್ದೇನೆ. ಆದರೆ ಘಟಕ ಆರಂಭಿಸುವ ಲಕ್ಷಣ ಕಾಣಿಸುತ್ತಿಲ್ಲ’ ಎಂದು ಸಂಸದರು ಬೇಸರ ವ್ಯಕ್ತಪಡಿಸಿದರು.

ಭೂ ವ್ಯಾಜ್ಯ ಇದ್ದಿದ್ದರಿಂದ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದಾಗ, ‘ಎಲ್ಲ ವ್ಯಾಜ್ಯ ಮುಗಿಯಿತು ಎಂದು ಹೇಳಿದ್ರಲ್ಲ’ ಎಂದು ಸಿದ್ದೇಶ್ವರ ಪ್ರಶ್ನಿಸಿದರು. ಎಲ್ಲ ಮುಗಿದಿದೆ. ಆದರೆ ಜಯಣ್ಣ ಎನ್ನುವವರು 20 ಗುಂಟೆ ಭೂಮಿ ಬಿಟ್ಟುಕೊಡಲು ಒಪ್ಪುತ್ತಿಲ್ಲ. ಆ ಭೂಮಿ ಬಿಟ್ಟರೆ ಬದುಕುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ. ಯಾರು ಹೇಳಿದರೂ ಭೂಮಿ ಬಿಡಲು ಒಪ್ಪುತ್ತಿಲ್ಲ’ ಎಂದು ಅಧಿಕಾರಿ ವಿವರ ನೀಡಿದರು. ಅವರ ಭೂಮಿ ಎಲ್ಲಿದೆ ಎಂದು ಮ್ಯಾಪ್‌ನಲ್ಲಿ ನೋಡಿದ ಸಂಸದರು, ‘ಅದು ಒಂದು ಬದಿಯಲ್ಲಿ ಇರುವುದರಿಂದ ಆ 20 ಗುಂಟೆ ಬಿಟ್ಟುಬಿಡಿ. ಆ ಬಡಪಾಯಿಯ ಭೂಮಿ ಬೇಡ. ಅಲ್ಲದೇ ಜಮೀನು ಮಧ್ಯದಲ್ಲಿ ಇರುತ್ತಿದ್ದರೆ ಸಮಸ್ಯೆಯಾಗುತ್ತಿತ್ತು. ಸೈಡಲ್ಲಿ ಇರುವುದರಿಂದ ಏನು ಸಮಸ್ಯೆಯಾಗದು’ ಎಂದು ಜಿ.ಎಂ. ಸಿದ್ದೇಶ್ವರ ಸೂಚಿಸಿದರು.

ನೀರಿಗಾಗಿ ಶಾಂತಿಸಾಗರವನ್ನು ಅವಲಂಬಿಸಬಾರದು. ಅದು ಕುಡಿಯುವುದಕ್ಕಾಗಿಯೇ ಇರುವ ನೀರು. ಅದನ್ನು ನೀವು ಬಳಸಿಕೊಂಡರೆ ಜನರಿಗೆ ನೀರಿಲ್ಲದಂತಾಗುತ್ತದೆ ಎಂದು ಸಂಸದರು ಎಚ್ಚರಿಸಿದರು. ತುಂಗಭದ್ರಾ ನೀರನ್ನು ಬಳಸಿಕೊಳ್ಳಲಾಗುವುದು ಎಂದು ಎಂಆರ್‌ಪಿಎಲ್‌ ಅಧಿಕಾರಿಗಳು ತಿಳಿಸಿದರು.

ಇದರ ಒಟ್ಟು ವೆಚ್ಚದ ಶೇ 20ರಷ್ಟನ್ನು ಕೇಂದ್ರ ಸರ್ಕಾರ ಭರಿಸಲಿದೆ. ಶೇ 20ರಷ್ಟು ರಾಜ್ಯ ಸರ್ಕಾರ ನೀಡಬೇಕು ಎಂದು ಎಂಆರ್‌ಪಿಎಲ್‌ನವರು ಕೋರಿದರು. ರಾಜ್ಯ ಸರ್ಕಾರವು ಭೂಮಿ, ನೀರು, ವಿದ್ಯುತ್‌ ನೀಡಿದೆ. ಮತ್ತೆ ಶೇ 20 ಅನುದಾನವನ್ನೂ ನೀಡಬೇಕು ಎಂದು ಕೇಳುವುದು ಸರಿಯಲ್ಲ. ₹ 1, 200 ಕೋಟಿಯಲ್ಲಿ ಶೇ 20 ಅಂದರೆ ₹ 240 ಕೋಟಿಯಾಗುತ್ತದೆ ಎಂದು ಸಂಸದರು ತಿಳಿಸಿದರು.

ಕೆಐಎಡಿಬಿ ಮೂಲಕ ಭೂಮಿ ಸಿಕ್ಕಿದೆ. ಪರಿಸರ ಮಾಲಿನ್ಯ ಇಲಾಖೆಯಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಆಗಿದೆ. ಅಂತಿಮ ಅನುಮತಿ ಸಿಗಬೇಕು. ನೀರಿಗಾಗಿ ಅರ್ಜಿ ಸಲ್ಲಿಸಲಾಗಿದೆ. ಮುಂದಿನ ಫೆಬ್ರುವರಿ ಅಥವಾ ಮಾರ್ಚ್‌ ಒಳಗೆ ಎಲ್ಲ ಅನುಮತಿಗಳು ದೊರೆಯುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಬರುವುದಿದ್ದರೆ ಅವರನ್ನು ಇಲ್ಲವೇ ಪೆಟ್ರೋಲಿಂ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಕರೆಸಿ ಗುದ್ದಲಿ ಪೂಜೆ ಮಾಡಿಸಲಾಗುವುದು ಎಂದು ಸಿದ್ದೇಶ್ವರ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಡಿಸಿ ನಜ್ಮಾ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಎಂಆರ್‌ಪಿಎಲ್‌ನ ಸ್ವತಂತ್ರ ನಿರ್ದೇಶಕಿ (ಇಂಡಿಪೆಂಡೆಂಟ್‌ ಡೈರೆಕ್ಟರ್‌) ಮಂಜುಳಾ, ಎಂಆರ್‌ಪಿಎಲ್‌ ಜಿಜಿಎಂ ಸುಶೀಲ್‌ಚಂದ್ರ, ಕೆ.ಎಂ. ಮಂಜುನಾಥ, ವೆಂಕಟಕೃಷ್ಣ ಅವರೂ ಇದ್ದರು.

ಏನಿದು ಬಯೋ ಎಥೆನಲ್‌?

ಪೆಟ್ರೋಲ್‌ ಬದಲು ಸಸ್ಯರಾಶಿಯನ್ನು ಬಳಸಿಕೊಂಡು ಇಂಧನ ಉತ್ಪಾದನೆ ಮಾಡುವುದನ್ನು ಬಯೋ ಎಥೆನಲ್‌ ಎಂದು ಕರೆಯಲಾಗುತ್ತದೆ. ಡೀಸೆಲ್‌ ಬದಲಿಗೆ ಸಸ್ಯರಾಶಿಯಿಂದ ಉತ್ಪಾದಿಸುವ ಇಂಧನವನ್ನು ಬಯೋ ಡೀಸೆಲ್‌ ಎಂದು ಕರೆಯಲಾಗುತ್ತದೆ. ನೇರವಾಗಿ ಕಬ್ಬು, ಮೆಕ್ಕೆಜೋಳ, ತರ್ಕಾರಿ ಇನ್ನಿತರ ಸಸ್ಯಗಳನ್ನು ಬಳಸುವುದನ್ನು ಫಸ್ಟ್‌ ಜನರೇಶನ್‌ (1ಜಿ) ಎಂದು ಕರೆಯಲಾಗುತ್ತದೆ. ಕೃಷಿ ಉತ್ಪನ್ನಗಳನ್ನು ಬಿಟ್ಟು ಅದರ ತ್ಯಾಜ್ಯವನ್ನಷ್ಟೇ ಬಳಸಿಕೊಂಡು ಇಂಧನ ಉತ್ಪಾದನೆ ಮಾಡುವುದನ್ನು ಸೆಕೆಂಡ್‌ ಜನರೇಶನ್‌ (2ಜಿ) ಎಂದು ಕರೆಯಲಾಗುತ್ತದೆ. ಹರಿಹರದ ಹನಗವಾಡಿಯಲ್ಲಿ ಮೆಕ್ಕೆಜೋಳದ ದಂಟು, ಬೆಂಡು, ಹತ್ತಿಕಡ್ಡಿ, ಭತ್ತದ ಹುಲ್ಲು, ತೆಂಗಿನ ಸಿಪ್ಪೆ, ಕಬ್ಬಿನ ಸಿಪ್ಪೆ ಮುಂತಾದವುಗಳು ಬಳಕೆಯಾಗಲಿವೆ.

‘ತ್ಯಾಜ್ಯ ಬಗ್ಗೆ ಮಾಹಿತಿ ನೀಡಿ’

ಘಟಕ ಆರಂಭಗೊಂಡ ಬಳಿಕ ಕೊಳಚೆ ನೀರು ಎಲ್ಲಿ ಬಿಡುತ್ತೀರಿ. ಘನತ್ಯಾಜ್ಯ ಏನು ಮಾಡುವಿರಿ ಎಂಬ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರು.

ಕೊಳಚೆ ನೀರು ಇರುವುದಿಲ್ಲ. ಬಿಸಿ ಆರಲು ಕೆಲವು ಕಡೆ ನೀರುಬಳಸುವುದು ಬಿಟ್ಟರೆ, ಹೊರ ಬಿಡುವ ನೀರು ಇರುವುದಿಲ್ಲ. ಪ್ರತಿದಿನ 30 ಟನ್‌ನಷ್ಟು ಬೂದಿ ಉತ್ಪಾದನೆಯಾಗಲಿದ್ದು, ಅದನ್ನು ಇಟ್ಟಿಗೆ ತಯಾರಿಗೆ ಬಳಸಬಹುದು ಎಂದು ಎಂಆರ್‌ಪಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಈ ಬಗ್ಗೆಯೂ ಸ್ಪಷ್ಟವಾಗಿ ಲಿಖಿತವಾಗಿ ದಾಖಲಿಸಿ ನೀಡಬೇಕು. ಮುಂದಿನ ಸಭೆಯಲ್ಲಿ ಅದರ ಬಗ್ಗೆಯೂ ಚರ್ಚೆಯಾಗಲಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ ನೀಡಿದರು.

ಪ್ಲಾಸ್ಟಿಕ್‌ ಕವರ್‌ ಬೊಕ್ಕೆ: ದಾಳಿ ಮಾಡಲು ಸೂಚನೆ

ಸಭೆಗೆ ಬಂದ ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಎಂಆರ್‌ಪಿಎಲ್‌ನ ಸ್ವತಂತ್ರ ನಿರ್ದೇಶಕಿ (ಇಂಡಿಪೆಂಡೆಂಟ್‌ ಡೈರೆಕ್ಟರ್‌) ಮಂಜುಳಾ ಅವರಿಗೆ ಹೂವಿನ ಬೊಕ್ಕೆ ನೀಡಿ ಸ್ವಾಗತಿಸಲಾಯಿತು. ಬೊಕ್ಕೆ ತೆಗೆದುಕೊಂಡ ಜಿಲ್ಲಾಧಿಕಾರಿ, ‘ಈ ಬೊಕ್ಕೆಗೆ ಪ್ಲಾಸ್ಟಿಕ್‌ ಕವರ್ ಬಳಸಲಾಗಿದೆ. ಇದನ್ನು ತಯಾರಿಸಿದ ಅಂಗಡಿಗೆ ಕೂಡಲೇ ದಾಳಿ ಮಾಡಿ. ಹಾಗೇ ಬೊಕ್ಕೆ ತಯಾರಿಸುವ ಇತರ ಅಂಗಡಿಗಳನ್ನೂ ಪರಿಶೀಲಿಸಿ. ಯಾರು ಪ್ಲಾಸ್ಟಿಕ್‌ ಬಳಸುತ್ತಾರೋ ಅವರಿಗೆ ದಂಡ ವಿಧಿಸಿ’ ಎಂದು ಉಪ ವಿಭಾಗಾಧಿಕಾರಿಗೆ ಸೂಚಿಸಿದರು.

ಅಂಕಿ ಅಂಶ

60 ಸಾವಿರ ಲೀಟರ್‌

ದಿನಕ್ಕೆ ಉತ್ಪಾದನೆಯಾಗಲಿರುವ ಎಥೆನಲ್‌

300 ಟನ್‌

ದಿನಕ್ಕೆ ಬೇಕಾದ ಕೃಷಿ ತ್ಯಾಜ್ಯ ವಸ್ತು

1,200 ಕೋಟಿ

ಘಟಕ ಸ್ಥಾಪಿಸಲು ತಗಲುವ ಅಂದಾಜು ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT