ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದವಾಡ ರೈತರ ಒಪ್ಪಿಗೆ ಪಡೆಯದೇ ಧೂಡಾದಿಂದ ದರ ನಿಗದಿ: ಆಕ್ಷೇಪ

ಪ್ರಕಟಣೆ ವಾಪಸ್‌ ಪ‍ಡೆಯದಿದ್ದರೆ ಉಗ್ರ ಹೋರಾಟ: ಎಚ್ಚರಿಕೆ ನೀಡಿದ ರೈತರು
Last Updated 12 ಜನವರಿ 2022, 4:41 IST
ಅಕ್ಷರ ಗಾತ್ರ

ದಾವಣಗೆರೆ: ರೈತರ ಒಪ್ಪಿಗೆ ಪಡೆಯದೆ ದಾವಣಗೆರೆ–ಹರಿರಹ ನಗರಾಭಿವೃದ್ಧಿ ಪ್ರಾಧಿಕಾರವು ದರ ನಿಗದಿ ಮಾಡಿದೆ. ಈ ದರವನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ಹಳೇಕುಂದವಾಡ ಗ್ರಾಮದ ರೈತರು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಧೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

‘ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. 2018-19ರಲ್ಲಿ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದವರು ನಗರಾಭಿವೃದ್ಧಿ ಯೋಜನೆಯಡಿಯಲ್ಲಿ ಹಳೇಕುಂದುವಾಡ ಗ್ರಾಮದ ಸರ್ವೆ ನಂ, 125ರಿಂದ 139/7 ರ ತನಕ ಒಟ್ಟು 59 ಎಕರೆ 19 ಗುಂಟೆ ಜಮೀನಿನಲ್ಲಿ ನಾಗರಿಕರ ವಾಸಕ್ಕೆ ಹೊಸ ಲೇಔಟ್ ನಿರ್ಮಾಣ ಮಾಡುವುದಾಗಿ ಹೇಳಿ ಜಮೀನುಗಳನ್ನು ಒಳ್ಳೆಯ ಬೆಲೆ ಕೊಟ್ಟು ಖರೀದಿ ಮಾಡಿಕೊಳ್ಳುತ್ತೇವೆ ಎಂದು ಒಪ್ಪಿಗೆ ಪತ್ರವನ್ನು ಬರೆಸಿಕೊಂಡಿದ್ದರು. ಕೆಲವು ರೈತರು ಕೋರ್ಟ್‌ಗೆ ಹೋಗಿ ಶಾಶ್ವತ ನಿರ್ಬಂಧಕಾಜ್ಞೆಗೆ ಅರ್ಜಿ ಸಲ್ಲಿಸಿದ್ದಾರೆ’ ಎಂದು ರೈತರು ವಿವರಿಸಿದರು.

‘ಆಗಸ್ಟ್ ತಿಂಗಳ ಮೊದಲನೇ ವಾರದಲ್ಲಿ ನಮ್ಮ ಜಮೀನುಗಳಿಗೆ ಏಕಾಏಕಿ ಬಂದು ಅಳತೆ ಮಾಡಿ ಕಂಬಗಳನ್ನು ಹಾಕಲಾಗಿದೆ. ದರ ನಿರ್ಧರಣಾ ಸಲಹಾ ಸಮಿತಿ ಸಭೆಯನ್ನು ಕರೆದಾಗಸಭೆಯಲ್ಲಿ ಒತ್ತಾಯ ಪೂರ್ವಕವಾಗಿ ಯಾವ ರೈತರ ಜಮೀನುಗಳನ್ನು ಪಡೆದುಕೊಳ್ಳುವುದಿಲ್ಲ. ನಿಮಗೆ ಕೊಡಬೇಕೆನಿಸಿದರೆ ಮಾತ್ರ ಖರೀದಿ ಮಾಡಿಕೋಳ್ಳುತ್ತೇವೆ ಎಂದು ಹೇಳಲಾಗಿತ್ತು. ಅಂದು ಸಭೆಯಲ್ಲಿ ಜಮೀನು ದರ ನಿಗದಿಯಾಗದೇ ಸಭೆ ಅಂತ್ಯ ಗೊಂಡಿತ್ತು. ಆದರೆ ಇದೀಗ ಕುಂದುವಾಡ ರೈತರು ವಸತಿ ಯೋಜನೆಗೆ ಸಮ್ಮತಿ ಸೂಚಿಸಿದ ಬಗ್ಗೆ ಹಾಗೂ ಎಕರೆಗೆ ₹ 1.18 ಕೋಟಿ ಜಮೀನಿನ ಬೆಲೆ ನಿಗದಿಯಾಗಿರುತ್ತದೆ ಎಂದು ಹೇಳಲಾಗಿದೆ. ಯಾವಾಗ ದರ ನಿಗದಿ ಸಭೆ ಮಾಡಿದ್ದಾರೆ ಎಂಬುದು ರೈತರಿಗೆ ಗೊತ್ತಿಲ್ಲ’ ಎಂದು ತಿಳಿಸಿದರು.

‘ದರ ನಿಗದಿ ಎರಡನೇ ಸಭೆಗೆ ಬಹುತೇಕ ರೈತರನ್ನ ಆಹ್ವಾನಿಸದೇ, ನಾಲ್ಕೈದು ಮಂದಿ ರೈತರ ಒಪ್ಪಿಗೆ ಪಡೆದು ಎಲ್ಲ ರೈತರ ಒಪ್ಪಿಗೆ ಪಡೆಯಲಾಗಿದೆ 53 ಎಕರೆ ಲೇ ಔಟ್ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಧೂಡಾ ಅಧ್ಯಕ್ಷರು ಪ್ರಕಟಣೆ ನೀಡಿದ್ದಾರೆ. ಇದು ರೈತರನ್ನು ಒಕ್ಕಲೆಬ್ಬಿಸುವ ಕುತಂತ್ರ ಅಡಗಿದೆ. ನಮ್ಮನ್ನು ಕರೆಸದೆ ತಾವೇ ಜಮೀನು ದರ ನಿಗದಿ ಮಾಡಿರುವುದನ್ನು ನಾವು ಒಪ್ಪುವುದಿಲ್ಲ. ಆದ್ದರಿಂದ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ತಕ್ಷಣವೇ ವಾಪಸ್ಸು ಪಡೆಯಬೇಕು. ಇಲ್ಲದಿದ್ದಲ್ಲಿ ರೈತರ ಜಮೀನುಗಳನ್ನು ಅಕ್ರಮವಾಗಿ ಸ್ವಾಧೀನ ಪಡೆಯಲು ಪ್ರಯತ್ನಿಸುತ್ತಿರುವವರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಕುಂದವಾಡದ ಚಂದ್ರಪ್ಪ ಮಿಟ್ಲಕಟ್ಟೆ, ಎನ್ ಶಿವಪ್ಪ, ಮಹಾಂತೇಶ್, ಸೋಮಣ್ಣ, ಜಯ್ಯಪ್ಪ, ರೇವಣಪ್ಪ, ಸಿದ್ದಲಿಂಗಪ್ಪ, ಮಯೂರ್, ಮಂಜುನಾಥ್ ಸೇರಿ 50ಕ್ಕೂ ಅಧಿಕ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT