ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಗಿಡಗಳ ನಾಶ | ಮಹಿಳೆ ಕೊಲೆ: ಇಬ್ಬರು ಆರೋಪಿಗಳ ಬಂಧನ

Published 14 ಮೇ 2024, 16:33 IST
Last Updated 14 ಮೇ 2024, 16:33 IST
ಅಕ್ಷರ ಗಾತ್ರ

ದಾವಣಗೆರೆ: ಅಡಿಕೆ ಗಿಡಗಳನ್ನು ಕಡಿದು ಹಾಕಿದ ದ್ವೇಷದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರಕೆರೆ ಗ್ರಾಮದ ನೇತ್ರಾವತಿ (47) ಕೊಲೆಯಾದ ಮಹಿಳೆ. ಅದೇ ಠಾಣಾ ವ್ಯಾಪ್ತಿಯ ನಾಗೊಲೆ(ಅರಕೆರೆ ಗೇಟ್) ಕುಮಾರ ಎಚ್.ಜಿ. ಹಾಗೂ ಅರಕೆರೆ ಗ್ರಾಮದ ಚಿದಾನಂದಪ್ಪ ಬಂಧಿತರು.

ಕಳೆದ ಏ.20ರಂದು ಆರೋಪಿಗಳ ಜಮೀನಿನಲ್ಲಿ ನೇತ್ರಾವತಿ ಅವರು ಅಡಿಕೆ ಗಿಡಗಳನ್ನು ಕಡಿದಿದ್ದರಿಂದ ಕ್ರೋಧಗೊಂಡ ಆರೋಪಿಗಳು, ಜಮೀನಿನಲ್ಲಿಯೇ ನೇತ್ರಾವತಿಯವರನ್ನು ಕೊಲೆ ಮಾಡಿ ಸಮೀಪದ ಭದ್ರಾ ಚಾನಲ್‌ನಲ್ಲಿ ಎಸೆದಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳು ಪತ್ತೆಯಾಗಿದ್ದು ಹೀಗೆ:

ಬಸವಾಪಟ್ಟಣ ಠಾಣೆ ವ್ಯಾಪ್ತಿಯ ಕಣಿವೆ ಬಿಳಚಿ ಗ್ರಾಮದ ಬಳಿ ಮೇ 9ರಂದು ಭದ್ರಾ ನಾಲೆಯಲ್ಲಿ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನೀರುಗಂಟಿಯೊಬ್ಬರು ನೀಡಿದ ದೂರನ್ನು ಆಧರಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಸವಾಪಟ್ಟಣ ಪೊಲೀಸರು ಪರಿಶೀಲಿಸಿದಾಗ ಮೃತ ದೇಹವು ಸಂಪೂರ್ಣ ಕೊಳೆತ ಸ್ಥಿತಿಯಲಿದ್ದು, ಮಹಿಳೆಯ ಶವ ಎಂದು ಮೇಲ್ನೋಟಕ್ಕೆ ಕಂಡುಬಂದಿತು. ಕೊರಳಲ್ಲಿ ಹಗ್ಗ ಸುತ್ತಿದ ರೀತಿಯಲ್ಲಿ ಇದ್ದುದರಿಂದ ಕೊಲೆ ಮಾಡಿ ಚಾನಲ್‌ಗೆ ಹಾಕಿರಬಹುದು ಎಂಬ ಬಗ್ಗೆ ಅನುಮಾನ ಮೂಡಿತು.

ಮೃತ ಶವದ ಗುರುತು ಪತ್ತೆಗಾಗಿ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕಾಣೆಯಾದ ಪ್ರಕರಣಗಳ ಬಗ್ಗೆ ಪರಶೀಲನೆ ನಡೆಸಿದಾಗ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣಕ್ಕೂ ಮಹಿಳೆಯ ಚಹರೆಗೂ ಹೋಲಿಕೆ ಕಂಡು ಬಂದ ಮೇರೆಗೆ ತನಿಖೆ ಕೈಗೊಳ್ಳಲಾಯಿತು. ಶವವು ನೇತ್ರಾವತಿ ಅವರದ್ದೇ ಎಂದು ಕುಟುಂಬದವರು ಖಚಿತಪಡಿಸಿದರು. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ. ಮಂಜುನಾಥ, ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಪ್ರಶಾಂತ್ ಮನ್ನೋಳಿ ಅವರ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಸಿಪಿಐ ಗೋಪಾಲ ನಾಯ್ಕ್ ನೇತೃತ್ವದ ತಂಡ ರಚಿಸಲಾಗಿತ್ತು.

ಬಸವಾಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ಕೆ.ವೀಣಾ, ಸಿಬ್ಬಂದಿ ಇದಾಯತ್, ಎಎಸ್‌ಐ, ರಂಗನಾಥ, ರುದ್ರೇಶ್, ಸತೀಶ್, ವೀರಭದ್ರಪ್ಪ, ಪರಶುರಾಮ, ರವಿ, ಇರ್ಷಾದ್, ಮಂಜುನಾಥ, ಇಬ್ರಾಹಿಂ, ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ, ಶಾಂತರಾಜ ಅವರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ತಂಡವನ್ನು ಎಸ್‌ಪಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT