‘ಸ್ವಾತಂತ್ರ್ಯ ಹೋರಾಟದಲ್ಲಿ ಇಲ್ಲಿನ ಮಹಿಳೆಯರೂ ಭಾಗಿ’

ಗುರುವಾರ , ಜೂಲೈ 18, 2019
22 °C

‘ಸ್ವಾತಂತ್ರ್ಯ ಹೋರಾಟದಲ್ಲಿ ಇಲ್ಲಿನ ಮಹಿಳೆಯರೂ ಭಾಗಿ’

Published:
Updated:
Prajavani

ದಾವಣಗೆರೆ: ಸ್ವಾತಂತ್ರ್ಯ ಹೋರಾಟ ಎಂದ ತಕ್ಷಣ ಪುರುಷರ ಹೆಸರುಗಳೇ ಕಾಣಿಸುತ್ತವೆ. ದಾವಣಗೆರೆ, ಚಿತ್ರದುರ್ಗದ ಮಹಿಳೆಯರೂ ಭಾಗವಹಿಸಿದ್ದಾರೆ ಎಂದು ವಿಶ್ರಾಂತ ಪ್ರಾಧ್ಯಾಪಕಿ, ಲೇಖಕಿ ಡಾ. ಯಶೋದಮ್ಮ ಬಿ. ರಾಜಶೇಖರಪ್ಪ ಹೇಳಿದರು.

ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ನಡೆದ ದತ್ತಿ ಉಪನ್ಯಾಸದಲ್ಲಿ ಅವರು ‘ಸ್ವಾತಂತ್ರ್ಯಹೋರಾಟದಲ್ಲಿ ಮಹಿಳೆಯರ ಪಾತ್ರ’ ಬಗ್ಗೆ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟಗಾರ ಬಳ್ಳಾರಿ ಮುರುಗೇಶಪ್ಪ ಮತ್ತು ಅವರ ಪತ್ನಿ ಬಳ್ಳಾರಿ ಸಿದ್ದಮ್ಮ ದಾವಣಗೆರೆಯವರು. ಅವರ ಮೂಲ ಬಳ್ಳಾರಿಯಲ್ಲಿರಬೇಕು. ಅದಕ್ಕೆ ಬಳ್ಳಾರಿ ಸೇರಿಕೊಂಡಿದೆ. ಅವರು ಗಾಂಧೀಜಿಯ ಆಶ್ರಮಕ್ಕೂ ಹೋಗಿ ಬಂದಿದ್ದರು. ಅನಕ್ಷರಸ್ತರಾಗಿದ್ದ ಸಿದ್ದಮ್ಮ ಗಟ್ಟಿಗಿತ್ತಿ. ಒಳ್ಳೆಯ ಸಂಘಟಕಿ. ಉತ್ತಮ ವಾಗ್ಮಿ. ಮಲ್ಲಪ್ಪ ಧನಶೆಟ್ಟಿಗೆ 1930ರಲ್ಲಿ ಗಲ್ಲು ಶಿಕ್ಷೆಯಾದಾಗ, ‘ಒಬ್ಬ ಹೋದರೆ ಸಾವಿರ ಮಂದಿ ಹುಟ್ಟುತ್ತಾರೆ’ ಎಂದು ಹೇಳುವ ಮೂಲಕ ರಾಜ್ಯದಾದ್ಯಂತ ಸಿದ್ದಮ್ಮ ಪ್ರಸಿದ್ಧರಾದರು. 1936ರಲ್ಲಿ ಶಿವಪುರದಲ್ಲಿ ಭಾರತದ ಧ್ವಜ ಹಾರಿಸಲು ಪುರುಷರು ಹೆದರಿಕೊಂಡಿದ್ದಾಗ ಬಳ್ಳಾರಿ ಸಿದ್ಧಮ್ಮ ಮತ್ತು ಯಶೋಧರಾ ದಾಸಪ್ಪ ಬಾವುಟ ಹಾರಿಸಿದರು ಧೈರ್ಯ ಮೆರೆದರು. ಅದಕ್ಕಾಗಿ ಅವರನ್ನು ಬಂಧಿಸಲಾಯಿತು ಎಂದು ವಿವರಿಸಿದರು.

ಅದೇ ಪ್ರಥಮ ಬಾರಿಗೆ ಮಹಿಳೆಯೊಬ್ಬರನ್ನು ಬಂಧಿಸಿರುವುದು ಮೈಸೂರು ರಾಜರಿಗೆ ಮುಜುಗರ ಉಂಟು ಮಾಡಿತು. ಸಿದ್ಧಮ್ಮ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿ, ತನ್ನನ್ನು ಕಾಣುವಂತೆ ಮಹಾರಾಜ ತಿಳಿಸಿದ್ದರು. ‘ಬಿಡುಗಡೆ ಮಾಡುವುದಿದ್ದರೆ ಎಲ್ಲರನ್ನು ಬಿಡುಗಡೆ ಮಾಡಿ. ಇಲ್ಲದೇ ಇದ್ದರೆ ಜೈಲಿಗೇ ಬಂದು ನಮ್ಮನ್ನು ನೋಡಿ’ ಎಂದು ಸಿದ್ಧಮ್ಮ ಪ್ರತ್ಯುತ್ತರ ನೀಡಿದ್ದರು. ಆನಂತರ ಪಾನ ನಿಷೇದಕ್ಕಾಗಿ ಅರಣ್ಯ ಸತ್ಯಾಗ್ರಹದಲ್ಲಿಯೂ ಭಾಗವಹಿಸಿದ್ದರು ಎಂದರು.

ನಾಗರತ್ನಮ್ಮ ಹಿರೇಮಠ ಎನ್ನುವ ಹೋರಾಟಗಾರ್ತಿ ಬೆಳಿಗ್ಗೆ ಮದುವೆಯಾಗಿ ಸಂಜೆ ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್‌ ಸಿದ್ಧಪ್ಪ ಅವರ ಪತ್ನಿ ಶಾಂತಮ್ಮ ಅವರ ಹೋರಾಟ ಇನ್ನೂ ಕಠಿಣವಾದುದು. ಪುಂಡುಗಂದಾಯ ಹೆಸರಲ್ಲಿ ಅವರ ಮನೆ, ಆಸ್ತಿಯನ್ನೆಲ್ಲ ಜಫ್ತಿ ಮಾಡಲಾಗಿತ್ತು. ಶಾಂತಮ್ಮ ತುಂಬು ಗರ್ಭಿಣಿಯಾಗಿದ್ದರು. ದಂಪತಿಯನ್ನು ಬಂಧಿಸಿ ಒಯ್ಯಲಾಗಿತ್ತು. ಗರ್ಭಿಣಿಯನ್ನು ಇಟ್ಟುಕೊಳ್ಳುವುದು ಅಪಾಯ ಎಂದರಿತ ಬ್ರಿಟಿಷರು ಅವರನ್ನು ರೈಲಲ್ಲಿ ಕರೆತಂದು ರಂಗಾಪುರದಲ್ಲಿ ಬಿಟ್ಟು ಹೋಗಿದ್ದರು. ಮರುದಿನ ಬೆಳಿಗ್ಗೆ ಮರದಡಿಯಲ್ಲಿ ಹೆರಿಗೆಯಾಗಿತ್ತು. ಊರವರು ಸೇರಿ ಸಣ್ಣ ಗುಡಿಸಲು ಕಟ್ಟಿ ಸಾಕಿದರು ಎಂದು ಗತ ನೆನಪು ಬಿಚ್ಚಿಟ್ಟರು.

ಸಾಣೆಕಲ್ಲು ಕೃಷ್ಣಮ್ಮ ಎಂಬವರು ಬ್ರಿಟಿಷರ ಗುಂಡಿಗೆ ಬಲಿಯಾದವರು. ಇದೇ ರೀತಿ ಸಾಣೆಕಲ್ಲಿ ಭೀಮವ್ವ, ಶಾರದಮ್ಮ, ಸಣ್ಣವ್ವ, ವೆಂಕಮ್ಮ, ಮುರಿಗೆಮ್ಮ ಮುಂತಾದ ಹಲವು ಮಹಿಳೆಯರು ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗಿಯಾಗಿದ್ದರು ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !