ಭಾನುವಾರ, ಏಪ್ರಿಲ್ 18, 2021
29 °C
ಕೋವಿಡ್‌ನಿಂದಾಗಿ ಸ್ಥಗಿತಗೊಂಡಿದ್ದ ಮಹಿಳಾ ಸ್ವಸಹಾಯ ಸಂಘಗಳ ಹಲವು ಚಟುವಟಿಕೆ

ಗರಿಗೆದರಿದ ಚಟುವಟಿಕೆ: ಬಗೆಹರಿಯದ ಮಾರುಕಟ್ಟೆ ಸಮಸ್ಯೆ

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನಮ್ಮ ಸ್ವಸಹಾಯ ಸಂಘದಲ್ಲಿ 15 ಸದಸ್ಯರೂ ಹೊಲಿಗೆ ಮಾಡುತ್ತೇವೆ. ಕಳೆದ ವರ್ಷ ಕೋವಿಡ್‌ ಆರಂಭದ ಸಂದರ್ಭದಲ್ಲಿ ಹೊಲಿಗೆಗೆ ಬಟ್ಟೆಗಳು ಬರಲಿಲ್ಲ. ಹೀಗಾಗಿ 2–3 ತಿಂಗಳು ಬರೀ ಮಾಸ್ಕ್‌ಗಳನ್ನು ಹೊಲಿದೆವು. ನಂತರವೂ ವರ್ಷವೂ ಇರುವಷ್ಟು ಬಟ್ಟೆ ಇರಲಿಲ್ಲ. ಹೀಗಾಗಿ ಸಮಸ್ಯೆ ಉಂಟಾಯಿತು’ ಎಂದು ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದ ಎನ್‌ಆರ್‌ಎಲ್‌ಎಂ ಸಂಜೀವಿನಿ ಲಕ್ಷ್ಮೀದೇವಿ ಸ್ವಸಹಾಯ ಸಂಘದ ಪ್ರತಿನಿಧಿ ರೇಖಾ ಕೆ.ಆರ್‌. ತಿಳಿಸಿದರು.

‘ಕಳೆದ ವರ್ಷ ಶಾಲೆಗಳು ಇಲ್ಲದ್ದರಿಂದ ಯೂನಿಫಾರ್ಮ್‌ಗಳ ಹೊಲಿಗೆಯೂ ಬರಲಿಲ್ಲ. ಹೀಗಾಗಿ ತುಂಬಾ ಸಮಸ್ಯೆ ಆಯಿತು. ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಆದರೆ, ಈಗಲೂ ಇಲ್ಲಿ ಮಹಿಳೆಯರು ಸರಿಯಾಗಿ ಕೆಲಸ ಸಿಗದೇ ಕಷ್ಟದಲ್ಲಿ ಇದ್ದಾರೆ. ಹೊಲಿಗೆ ತರಬೇತಿ ಪಡೆದಿರುವ ಕನಿಷ್ಠ 50 ಮಂದಿ ಇಲ್ಲಿ ಇದ್ದಾರೆ. ದಾವಣಗೆರೆಯಲ್ಲಿ ಇರುವ ಗಾರ್ಮೆಂಟ್ಸ್‌ಗೆ ಹೋಗಿ–ಬಂದು ಮಾಡುವುದು ಕಷ್ಟ. ಇಲ್ಲಿಯೇ ಒಂದು ಗಾರ್ಮೆಂಟ್‌ ಘಟಕ ಆರಂಭವಾದರೆ, ಮನೆಯನ್ನೂ ನೋಡಿಕೊಂಡು ಕೆಲಸ ಮಾಡಬಹುದು’ ಎಂದು ಅವರು ವಿವರಿಸಿದರು.

ಮಾಯಕೊಂಡದ ಎನ್‌ಆರ್‌ಎಲ್‌ಎಂ ರೇಣುಕಾ ಸ್ವಸಹಾಯ ಸಂಘದ ಸದಸ್ಯರು ಅಂಗಡಿ, ಬ್ಯೂಟಿ ಪಾರ್ಲರ್‌, ರೊಟ್ಟಿ ವ್ಯಾಪಾರ, ಕುಂಬಾರಿಕೆ, ಉಪ್ಪಿನಕಾಯಿ ತಯಾರಿಕೆ... ಹೀಗೆ ಹಲವು ಚಟುವಟಿಕೆ ನಡೆಸುತ್ತಾರೆ. ಕೋವಿಡ್‌ ಬಂದಾಗ ಇವೂ ಸಹ 3 ತಿಂಗಳ ತನಕ ಬಂದ್‌ ಆದವು. ಬ್ಯೂಟಿಪಾರ್ಲರ್‌ನ ದುಡಿಮೆ ಸಂಪೂರ್ಣ ಬಂದ್‌ ಆಯಿತು. ಉಳಿದವು ನಂತರ ಆರಂಭವಾಗಿ ಅಲ್ಪ–ಸ್ವಲ್ಪ ಚೇತರಿಕೆ ಕಂಡವು. ‘ಬ್ಯೂಟಿಪಾರ್ಲರ್‌ ಈಚೆಗಷ್ಟೇ ಮತ್ತೆ ತೆರೆದಿದೆ. ಆದರೆ ಮೊದಲಿನಷ್ಟು ದುಡಿಮೆ ಇಲ್ಲ’ ಎಂದು ಸಂಘದ ಪ್ರತಿನಿಧಿ ಸುಲೋಚನಮ್ಮ ತಿಳಿಸಿದರು.

‘ವರ್ಷಕ್ಕೆ ಒಂದೆರಡು ಬಾರಿ ಸರ್ಕಾರದಿಂದ ನಡೆಯುವ ಮೇಳಗಳಲ್ಲಿ ಸ್ಟಾಲ್‌ಗಳು ಉಚಿತವಾಗಿ ಸಿಗುತ್ತಿದ್ದವು. ಅಲ್ಲಿ ₹ 10,000– ₹ 15,000ರಷ್ಟಾದರೂ ವ್ಯಾಪಾರವಾಗುತ್ತಿತ್ತು. ಕಳೆದ ವರ್ಷ ಅವುಗಳೂ ಇಲ್ಲದ ಕಾರಣ ಸ್ವಸಹಾಯ ಸಂಘಗಳ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಇಲ್ಲದೇ ತೊಂದರೆ ಎದುರಿಸುವಂತಾಯಿತು’ ಎಂದು ಅವರು ಹೇಳಿದರು.

‘ಸಂಜೀವಿನಿ’ ಒಕ್ಕೂಟಗಳ ಅಡಿ ಬರುವ ಸ್ವಸಹಾಯ ಸಂಘಗಳ ಉತ್ಪನ್ನಗಳ ಮಾರಾಟಕ್ಕಾಗಿ ದಾವಣಗೆರೆಯಲ್ಲಿ ಕಾಯಂ ಮಳಿಗೆ ನಿರ್ಮಾಣವಾಗುತ್ತಿದೆ ಎಂದು ತಿಳಿಸಲಾಗಿದೆ. ಅದು ನಿರ್ಮಾಣವಾದರೆ ಸಂಘಗಳು ಆರ್ಥಿಕವಾಗಿ ಇನ್ನಷ್ಟು ಚೇತರಿಕೆ ಕಾಣಬಹುದು’ ಎಂದು ಅಭಿಪ್ರಾಯಪಟ್ಟರು.

ಹೊನ್ನಾಳಿಯ ಹೊಸಹಳ್ಳಿ ಗ್ರಾಮದ ಶ್ರೀ ಶಾರದಾ ಸ್ವಸಹಾಯ ಸಂಘದಸದಸ್ಯರು ಕಂಪನಿ
ಯೊಂದಕ್ಕೆ ಮಾವಿನಕಾಯಿ ಉಪ್ಪಿನಕಾಯಿ ತಯಾರಿಸಿ ಕೊಡುತ್ತಾರೆ. ಕೋವಿಡ್‌ ಸಂದರ್ಭದಲ್ಲಿ ಐದಾರು ತಿಂಗಳು ಇದೂ ಸ್ಥಗಿತವಾಯಿತು. ಅಡಿಕೆ ಹಾಳೆ ತಟ್ಟೆ ತಯಾರಿಕೆಯೂ ಕೆಲ ತಿಂಗಳು ಆರ್ಡರ್‌ ಇಲ್ಲದೇ ಸ್ಥಗಿತವಾಗಿತ್ತು. ಅಡಿಕೆ ಸುಲಿಯುವ ಕಾರ್ಯಕ್ಕೆ ಅಷ್ಟಾಗಿ ಸಮಸ್ಯೆ ಆಗಲಿಲ್ಲ. ಈಗ ಮತ್ತೆ ಎಲ್ಲ ಚಟುವಟಿಕೆ ಆರಂಭವಾಗಿವೆ ಎಂದು ಪ್ರತಿನಿಧಿ ಲಕ್ಷ್ಮಿ ಟಿ.ಪಿ. ತಿಳಿಸಿದರು.

ಜಿಲ್ಲೆಯ ಬಹುತೇಕ ಎಲ್ಲ ಸ್ವಸಹಾಯ ಸಂಘಗಳ ಸ್ಥಿತಿಯೂ ಇದೇ ಆಗಿದೆ. ಬಹುತೇಕ ಚಟುವಟಿಕೆ
3 ತಿಂಗಳು ಪೂರ್ಣ ಸ್ಥಗಿತಗೊಂಡವು. ಸದಸ್ಯರ ಸಭೆ, ಮನೆಮನೆ ಭೇಟಿ, ತರಬೇತಿ ಕಾರ್ಯಗಳು ನಿಂತವು. ಹೆಚ್ಚಿನ ಸಂಘಗಳು ಈ ಸಂದರ್ಭದಲ್ಲಿ ಮಾಸ್ಕ್‌ ಹೊಲಿದು ಮಾರಾಟ ಮಾಡಿದವು.
ಈಗ ಮತ್ತೆ ಎಲ್ಲ ಚಟುವಟಿಕೆ ಆರಂಭವಾಗಿವೆ. ಆದರೆ ಹಲವು ಸಂಘಗಳಿಗೆ ಮಾರುಕಟ್ಟೆಯ ಸಮಸ್ಯೆ ಇದ್ದೇ ಇದೆ.

ಪರಿಸರಸ್ನೇಹಿ ಸ್ಯಾನಿಟರಿ ನ್ಯಾಪ್‌ಕಿನ್‌ ತಯಾರಿಕೆ ಆರಂಭ: ಕೋವಿಡ್‌ ಸಂದರ್ಭದಲ್ಲೂ ಹರಿಹರ ತಾಲ್ಲೂಕಿನ ಎನ್‌ಆರ್‌ಎಲ್‌ಎಂ ‘ಸಂಜೀವಿನಿ’ಯ 2 ಸ್ವಸಹಾಯ ಸಂಘಗಳು ಪರಿಸರ ಸ್ನೇಹಿ ಸ್ಯಾನಿಟರಿ ನ್ಯಾಪ್‌ಕಿನ್‌ ತಯಾರಿಕೆ ಆರಂಭಿಸಿವೆ.

ಹರಿಹರ ತಾಲ್ಲೂಕಿನ ಜಿಗಳಿಯಲ್ಲಿ ‘ಶ್ರೀನಿಧಿ ಸ್ವಸಹಾಯ ಸಂಘ’ದಿಂದ 10 ಸದಸ್ಯರು 4 ತಿಂಗಳು
ಗಳಿಂದ ನ್ಯಾಪ್‌ಕಿನ್‌ ತಯಾರಿಸುತ್ತಿದ್ದಾರೆ. ‘ಪ್ರತ್ಯೇಕವಾಗಿ ಸಾಲ ಪಡೆದು ಒಟ್ಟು ₹ 1,31,300 ವೆಚ್ಚದಲ್ಲಿ ಸಲಕರಣೆ, ಕಚ್ಚಾ ಸಾಮಗ್ರಿಗಳನ್ನು ಖರೀದಿಸಿದ್ದೇವೆ. ಮಾಗನಹಳ್ಳಿಯ ಸುಧೀರ್‌ ಆನಂದ್‌ ಅವರ ಮಾರ್ಗದರ್ಶನದಲ್ಲಿ ನಾವು ಇದನ್ನು ಕೈಯಲ್ಲೇ ತಯಾರಿಸಿದ್ದೇವೆ’ ಎಂದು ಸಂಘದ ಪ್ರತಿನಿಧಿ ನೇತ್ರಾವತಿ ನಂದಿಬಸಪ್ಪ ನಿಟುವಳ್ಳಿ ತಿಳಿಸಿದರು.

ಭಾನುವಳ್ಳಿಯ ಈಶ್ವರ ಅಲ್ಲಾ ಸ್ವಸಹಾಯ ಸಂಘವೂ ಸ್ಯಾನಿಟರಿ ನ್ಯಾಪಕಿನ್‌ ತಯಾರಿಕೆ ಆರಂಭಿಸಿದೆ. ‘ಸಂಘದ 10 ಸದಸ್ಯರು ಒಟ್ಟು ₹ 1.50 ಲಕ್ಷ ವೆಚ್ಚದಲ್ಲಿ ಕಚ್ಚಾ ಸಾಮಗ್ರಿ ಖರೀದಿಸಿದ್ದೇವೆ. ಸ್ವಂತ ಬ್ರ್ಯಾಂಡ್‌ ಮಾಡುವ ಬಗ್ಗೆ ಯೋಚನೆ ನಡೆಯುತ್ತಿದೆ’ ಎಂದು ಪ್ರತಿನಿಧಿ ಖತ್ಮುನ್ನಿಸಾ ತಿಳಿಸಿದರು. ಇವೆರಡೂ ಸಂಘಗಳಿಗೆ ಇನ್ನೂ ಮಾರುಕಟ್ಟೆಯ ಬಗ್ಗೆ ಸ್ಪಷ್ಟತೆ ಲಭಿಸಿಲ್ಲ.

ಏನಿದು ಅನ್‌ಆರ್‌ಎಲ್‌ಎಂ?: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ 2016ರಲ್ಲಿ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿರುವ ‘ಎನ್‌ಆರ್‌ಎಲ್‌ಎಂ’ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ)ದ ಅಡಿ ಗ್ರಾಮೀಣ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ಸಾಲ ಒದಗಿಸಲಾಗುತ್ತಿದೆ. ಎಸ್‌ಸಿ ಎಸ್‌ಟಿ ಸಂಘಗಳಿಗೆ ₹ 1,25,000, ಸಾಮಾನ್ಯ ವರ್ಗದವರಿಗೆ ₹ 75,000 ಸಾಲ ನೀಡಲಾಗುತ್ತದೆ. ಗ್ರಾಮಗಳಲ್ಲಿ ಇರುವ ಸ್ವಸಹಾಯ ಸಂಘಗಳನ್ನು ಒಟ್ಟುಗೂಡಿಸಿ ‘ಸಂಜೀವಿನಿ’ ಒಕ್ಕೂಟಗಳನ್ನು ರಚಿಸಿ ಈ ಸಾಲ ವಿತರಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ 60:40ರ ಅನುಪಾತದಲ್ಲಿ ಸಾಲ ಒದಗಿಸುತ್ತವೆ. ತರಬೇತಿಯನ್ನೂ ನೀಡಲಾಗುತ್ತದೆ.

‘ಜಿಲ್ಲೆಯ 195 ಗ್ರಾಮ ಪಂಚಾಯಿತಿಗಳಲ್ಲಿ 178 ಸಂಜೀವಿನಿ ಒಕ್ಕೂಟಗಳು ಈಗಾಗಲೇ ರಚನೆಯಾಗಿವೆ. 5,596 ಸ್ವಸಹಾಯ ಸಂಘಗಳು ಈ ಒಕ್ಕೂಟಗಳ ವ್ಯಾಪ್ತಿಗೆ ಬಂದಿವೆ. 80,000 ಮಹಿಳಾ ಸದಸ್ಯರಿದ್ದಾರೆ. ಜೀವನೋಪಾಯ ಚಟುವಟಿಕೆಗಾಗಿ 2016ರಿಂದ ಇಲ್ಲಿಯವರೆಗೆ ₹ 17.69 ಕೋಟಿ ಮೊತ್ತದ ಸಾಲ ನೀಡಲಾಗಿದೆ. ಒಕ್ಕೂಟಗಳಲ್ಲಿ ಮರುಪಾವತಿಯೂ ಯಶಸ್ವಿಯಾಗಿ ಆಗುತ್ತಿದೆ. ಗ್ರಾಮಗಳಲ್ಲಿ ಕಸ ಸಂಗ್ರಹ ಹಾಗೂ ವಿಲೇವಾರಿಯ ಹೊಣೆಯನ್ನು ಈ ಸಂಘಗಳ ಮಹಿಳಾ ಸದಸ್ಯರಿಗೆ ನೀಡಲು ಚಿಂತಿಸಲಾಗಿದೆ’ ಎಂದು ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಭೋಜರಾಜ್‌ ಎನ್‌.ಎಂ. ತಿಳಿಸಿದ್ದಾರೆ.

ಮೇಳಗಳು ನಡೆಯಲಿಲ್ಲ

ಪ್ರತಿ ವರ್ಷ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುವ 10 ದಿನಗಳ ಕಾಲ ಸರಸ್‌ ಮೇಳಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳಿಗೆ ಮಾರುಕಟ್ಟೆ ಲಭ್ಯವಾಗುತ್ತದೆ. ಕೋವಿಡ್‌ನಿಂದಾಗಿ ಕಳೆದ ವರ್ಷ ಯಾವುದೇ ಮೇಳಗಳು ನಡೆಯಲಿಲ್ಲ. ಆದರೂ ಈಚೆಗೆ ಜಿಲ್ಲೆಯಲ್ಲಿ ನಡೆದ ಕೃಷಿ ಮೇಳ ಹಾಗೂ ವಾಲ್ಮೀಕಿ ಜಾತ್ರೆಗಳಲ್ಲಿ ಸ್ವಸಹಾಯ ಸಂಘಗಳಿಗೆ ಸ್ಟಾಲ್‌ಗಳನ್ನು ಹಾಕಲು ಅವಕಾಶ ನೀಡಲಾಗಿತ್ತು. ಕೋವಿಡ್‌ ಇದ್ದಾಗ ಕೆಲವು ಉತ್ಪನ್ನಗಳ ತಯಾರಿಕೆ ಸ್ತಬ್ಧಗೊಂಡಿದ್ದರೂ ಹಲವು ಸಂಘಗಳು ಸಾಮಾಜಿಕ ಸೇವಾ ಕಾರ್ಯ ನಡೆಸಿವೆ.

- ಭೋಜರಾಜ್‌ ಎನ್‌.ಎಂ., ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ, ಎನ್‌ಆರ್‌ಎಲ್‌ಎಂ

ಸ್ವ ಉದ್ಯೋಗಕ್ಕೆ ಆದ್ಯತೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿ ಜಿಲ್ಲೆಯಲ್ಲಿ (ಜಗಳೂರು ಬಿಟ್ಟು) 19,900 ಮಹಿಳಾ ಸ್ವಸಹಾಯ ಸಂಘಗಳು ಇವೆ. ಲಾಕ್‌ಡೌನ್ ಸಂದರ್ಭದಲ್ಲಿ 3 ತಿಂಗಳ ಕಾಲ ಚಟುವಟಿಕೆ ಸ್ಥಗಿತಗೊಂಡಿದ್ದವು. ಆಗ ಉಳಿತಾಯ, ಸಾಲ ಮರುಪಾವತಿಯನ್ನೂ ನಿಲ್ಲಿಸಲಾಗಿತ್ತು. ನಂತರ ಲಾಕ್‌ಡೌನ್‌ ತೆರವಿನ ನಂತರ ಸಂಘದ ಸದಸ್ಯರ ಜೊತೆ ಚರ್ಚೆ ಮಾಡಿ ಅವರಿಗೆ ಅನುಕೂಲವಾಗುವಂತೆ ಅವಧಿಯನ್ನು ಮರುಹೊಂದಾಣಿಕೆ ಮಾಡಿಕೊಡಲಾಗಿದೆ. ಸ್ವ ಉದ್ಯೋಗಕ್ಕೆ ಬೇಕಾದ ತರಬೇತಿ ಹಾಗೂ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಯಿತು.

- ಜಯಂತ ಪೂಜಾರಿ, ನಿರ್ದೇಶಕರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಿರ್ದೇಶಕರು, ದಾವಣಗೆರೆ

***

ಆರ್ಥಿಕತೆಯಲ್ಲಿ ಉತ್ತಮ ಸಾಧನೆ

ಚನ್ನಗಿರಿ: ತಾಲ್ಲೂಕಿನಲ್ಲಿ 61 ಗ್ರಾಮ ಪಂಚಾಯಿತಿಗಳಿದ್ದು, ಒಟ್ಟು 1,800 ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿವೆ. ಕೊರೊನಾ ಲೌಕ್‌ಡೌನ್ ಕಾಲದಲ್ಲಿಯೂ ಮಹಿಳೆಯರು ಸಂಘಗಳಲ್ಲಿ ಹಲವು ಕಾರ್ಯಗಳನ್ನು ನಡೆಸಿಕೊಂಡು ಹೋಗಿದ್ದು ವಿಶೇಷ.

‘ಸಂಜೀವಿನಿ’ ಯೋಜನೆ ಅಡಿ ತಾಲ್ಲೂಕಿನ 29 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಸ್ವಸಹಾಯ ಸಂಘಗಳಿಗೆ ₹ 2.43 ಕೋಟಿ ಸಾಲ ಬಿಡುಗಡೆಯಾಗಿದೆ. ಪ್ರತಿ ಸಂಘಕ್ಕೂ ₹ 1 ಲಕ್ಷದಿಂದ ₹ 1.25 ಲಕ್ಷದಷ್ಟು ಸಾಲ ಲಭ್ಯವಾಗಿದೆ’ ಎಂದು ಸಂಜೀವಿನಿ ಯೋಜನೆ ಮೇಲ್ವಿಚಾರಕ ವಿಜಯ ಕುಮಾರ್ ತಿಳಿಸಿದರು.

‘ಮಹಿಳೆಯರು ಸಂಘಗಳಲ್ಲಿ ತಯಾರಿಸಿದ ವಸ್ತುಗಳನ್ನು ಹೋಬಳಿ ಮಟ್ಟದಲ್ಲಿ ಹಾಗೂ ಕೃಷಿ ಮೇಳಗಳಲ್ಲಿ ಅಂಗಡಿಗಳನ್ನು ತೆರೆದು ಮಾರಾಟ ಮಾಡುತ್ತಿದ್ದಾರೆ. ಸಂಜೀವಿನಿ ಯೋಜನೆಯ ಸದುಪಯೋಗ ಪಡೆದು ಆರ್ಥಿಕ ಸ್ವಾವಲಂಬಿಗಳಾಗುವತ್ತ ಉತ್ತಮ ಸಾಧನೆ ಮಾಡುತ್ತಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್. ಪ್ರಕಾಶ್ ಹೇಳಿದರು.

ಚೇತರಿಕೆಯ ಹಾದಿಯಲ್ಲಿ ಮಹಿಳಾ ಸ್ವ–ಸಹಾಯ ಸಂಘಗಳು

ಹರಪನಹಳ್ಳಿ: ಕೊರೊನಾ ಕಬಂಧ ಬಾಹು ಚಾಚಿದ ಪರಿಣಾಮ ಶಕ್ತಿ ಕಳೆದುಕೊಂಡಿದ್ದ ಸ್ತ್ರೀ ಶಕ್ತಿ ಮತ್ತು ಮಹಿಳಾ ಸ್ವ ಸಹಾಯ ಸಂಘಗಳು ಈಗ ಚೇತರಿಸಿಕೊಳ್ಳುತ್ತಿವೆ.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿ ತಾಲ್ಲೂಕಿನಲ್ಲಿ 770 ಸಂಘಗಳಿವೆ. ಗುಂಪು ಚಟುವಟಿಕೆಗಿಂತ ವೈಯಕ್ತಿಕವಾಗಿ ಸಾಲ ಪಡೆದು ಅಂಗಡಿ, ಟೈಲರಿಂಗ್, ಹೈನುಗಾರಿಕೆ ಮತ್ತು ಗುಡಿ ಕೈಗಾರಿಕೆಗಳಲ್ಲಿ ಮಹಿಳೆಯರು ತೊಡಗಿಕೊಂಡಿದ್ದಾರೆ’ ಎಂದು ಸಿಡಿಪಿಒ ಮಂಜುನಾಥ್ ಹೇಳಿದರು.

‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿ 4,000ಕ್ಕೂ ಹೆಚ್ಚು ಮಹಿಳಾ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ ₹ 70 ಕೋಟಿ ಸಾಲ ವಿತರಣೆ ಮಾಡಲಾಗಿದೆ. ರೊಟ್ಟಿ ತಯಾರಿಕೆ, ಗುಡಿ ಕೈಗಾರಿಕೆ, ಊದು ಬತ್ತಿ ತಯಾರಿಕೆ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಕೊರೊನಾ ಲಾಕ್‍ಡೌನ್‍ ಆದ ಪರಿಣಾಮ, ಮಹಿಳಾ ಸ್ವ ಸಹಾಯ ಸಂಘಗಳಿಗೆ ಬಡ್ಡಿ ಹೊರೆ ಕಡಿಮೆ ಮಾಡಲಾಗಿದೆ. ಸಾಲದ ಕಂತು ಪರಿಷ್ಕೃತಗೊಳಿಸಿ, ಮಹಿಳಾ ಸಂಘಗಳಿಗೆ ಅನುಕೂಲ ಮಾಡಲಾಗಿದೆ’ ಎನ್ನುತ್ತಾರೆ ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ಗಣೇಶ ಮರಾಠೆ.

-ಲೇಖನ: ಎಚ್‌.ವಿ. ನಟರಾಜ್‌, ವಿಶ್ವನಾಥ ಡಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು