ದಾವಣಗೆರೆ: ನಮ್ಮ ನಾಡಿನಲ್ಲಿ ಮಾತಿಗೆ ಬರವಿಲ್ಲ, ಕೃತಿಗಳಿಗೆ ಬರವಿದೆ. ನಾವು ಎಷ್ಟು ಮಾತನಾಡುತ್ತೇವೆ ಎನ್ನುವುದು ಮುಖ್ಯವಲ್ಲ. ಆಡಿದ ಮಾತುಗಳನ್ನು ಎಷ್ಟು ಸಾಕಾರಗೊಳಿಸುತ್ತೇವೆ ಎನ್ನುವುದು ಮುಖ್ಯವಾಗಿದೆ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮಾನವ ಬಂಧುತ್ವ ವೇದಿಕೆ, ಸತೀಶ್ ಜಾರಕಿಹೊಳಿ ಫೌಂಡೇಶನ್ ಸಹಯೋಗದೊಂದಿಗೆ ಬುಧವಾರ ನಡೆದ ‘ಬುದ್ಧನ ಬೆಳಕು’ ನಾಟಕ ಪ್ರದರ್ಶನ ಮತ್ತು ಕಲೆಗಳ ಕಲರವ ಶಿಬಿರದ ಸಮಾರೋಪವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಾತು ಕಡಿಮೆಯಾಗಬೇಕು, ಕೃತಿ ಹೆಚ್ಚಾಗಬೇಕು. ಸಾಧು ಸಂತರು ಹೇಳಿರುವುದು ಇದನ್ನೇ. ಗೌತಮ ಬುದ್ಧ ಹೆಚ್ಚು ಮಾತನ್ನು ಆಡಿ ಮನಸ್ಸನ್ನು ಅರಳಿಸುವ ಕಾರ್ಯ ಮಾಡಿದರು. ಈ ನಾಡಿನಲ್ಲಿ ಸ್ವಾಮೀಜಿಗಳು, ಸಾಹಿತಿಗಳು, ರಾಜಕಾರಣಿಗಳು ಸೇರಿದಂತೆ ಎಲ್ಲರೂ ಮನಸ್ಸಿಗೆ ಹಿತ ನೀಡುವ ಮಾತುಗಳನ್ನಾಡುತ್ತಾರೆ. ಆದರೆ ಮಾತಿಗೆ ಅನುಗುಣವಾಗಿ ವರ್ತನೆ ಇಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಒಂದು ಸಂಘಟನೆಯ ಮೂಲಕ ಬೇರೆ ಬೇರೆ ರೀತಿಯ ಕ್ರಾಂತಿಗಳು ನಡೆಯುತ್ತಿವೆ. ಆದರೆ ಇಂದು ಕ್ರಾಂತಿಗಳು ಕಳೆಯನ್ನು ಕಳೆದುಕೊಳ್ಳುತ್ತಿವೆ. ಮಾಡುವ ಕೆಲಸದಲ್ಲಿ ಬದ್ಧತೆ ಇಲ್ಲದಿರುವುದು ಇದಕ್ಕೆ ಕಾರಣ. ಬದ್ಧತೆ ಇಲ್ಲದಿದ್ದರೆ ಏನನ್ನು ಮಾಡಲು ಸಾಧ್ಯವಿಲ್ಲ’ ಎಂದರು.
‘ಬುದ್ಧ ತನಗೆ ತಾನೇ ಬೆಳಕಾಗಿ ಲೋಕಕ್ಕೂ ಬೆಳಕಾದ. ಆದ್ದರಿಂದಲೇ ಆತನನ್ನು ‘ಏಷ್ಯಾದ ಬೆಳಕು’ ಎಂತಲೂ ಕರೆಯುತ್ತಾರೆ. ಆದರೆ ಭಾರತಕ್ಕಿಂತಲೂ ಹೊರ ದೇಶಗಳಲ್ಲಿ ಬುದ್ಧನ ಅಸ್ತಿತ್ವ ಜಾಸ್ತಿ ಇದೆ’ ಎಂದರು.
‘ನಮ್ಮ ದೇಶವನ್ನು ಬೆಳೆಸಿ, ಉಳಿಸಬೇಕಾದರೆ ಬುದ್ಧ, ಬಸವಣ್ಣ, ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳು ನಮಗೆ ಮಾರ್ಗದರ್ಶನ. ವಿಛಿದ್ರ ಸಮಾಜವನ್ನು ಕಾಣುತ್ತಿರುವ ಈ ವಿಕ್ಷಿಪ್ತ ಸಂದರ್ಭದಲ್ಲಿ ಬುದ್ಧನ ಬೆಳಕು ನಾಟಕ ಅಂಧಕಾರವನ್ನು ಹೋಗಲಾಡಿಸುತ್ತದೆ’ ಎಂದು ಜಾನಪದ ತಜ್ಞ ಎಂ.ಜಿ. ಈಶ್ವರಪ್ಪ ಅಭಿಪ್ರಾಯಪಟ್ಟರು.
‘ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಬುದ್ಧನ ಚಿಂತನೆಗಳು ಪರಿಹಾರ ರೂಪದಲ್ಲಿ ಇವೆ. ಬುದ್ಧನ ತತ್ವವನ್ನು ಓದಿಕೊಂಡು, ಅಳವಡಿಸಿಕೊಂಡರೆ ರಾಜಕೀಯ, ಧರ್ಮ, ಜಾತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದರೆ ಓದುವ ವ್ಯವಧಾನ ಆಸಕ್ತಿ ಇಲ್ಲವಾಗಿವೆ’ ಎಂದು ಪತ್ರಕರ್ತ ಬಿ.ಎನ್. ಮಲ್ಲೇಶ್ ಹೇಳಿದರು.
‘ಸತೀಶ್ ಜಾರಕಿಹೊಳಿ ಫೌಂಡೇಶನ್ ಮೊದಲ ರಂಗ ಪ್ರಯೋಗ ಮಾಡಿದ್ದು, ರಾಜ್ಯದಾದ್ಯಂತ ಹೊತ್ತೊಯ್ಯಲಿದ್ದೇವೆ. ಸ್ವಸ್ಥ್ಯ ಸಮಾಜಕ್ಕೆ ಬೇಕಾದ ಚಿಂತನೆಗಳನ್ನು ಈ ಎರಡು ವೇದಿಕೆಗಳು ಮಾಡುತ್ತಿವೆ. ಸಾಹಿತ್ಯ ಹಾಗೂ ಕಲೆ ಆರೋಗ್ಯಪೂರ್ಣ ಸಮಾಜ ಕಟ್ಟಲು ನಿರಂತರ ಪ್ರಯತ್ನ ಮಾಡುತ್ತೇವೆ’ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ಹೇಳಿದರು.
ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕರ್ ವೇದಿಕೆಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.