ಬುಧವಾರ, ಏಪ್ರಿಲ್ 14, 2021
25 °C
ಉಪಚುನಾವಣೆ: ಭಾರತ್‌ ಕಾಲೊನಿಯಲ್ಲಿ ಕಾಂಗ್ರೆಸ್‌–ಬಿಜೆಪಿ ನೇರ ಸ್ಪರ್ಧೆ

ದಾವಣಗೆರೆ: ಯಲ್ಲಮ್ಮನಗರ: 11 ಮಂದಿಯಿಂದ 12 ನಾಮಪತ್ರ

‌ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪಾಲಿಕೆ ಉಪ ಚುನಾವಣೆಯಲ್ಲಿ ಭಾರತ್‌ ಕಾಲೊನಿ ವಾರ್ಡ್‌ನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ತಲಾ ಒಬ್ಬ ಅಭ್ಯರ್ಥಿ ಕಣಕ್ಕಿಳಿದಿದ್ದಾರೆ. ಹಾಗಾಗಿ ಇಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದೆ. ಆದರೆ ಯಲ್ಲಮ್ಮನಗರದಲ್ಲಿ 11 ಮಂದಿ 12 ನಾಮಪತ್ರ ಸಲ್ಲಿಸಿದ್ದಾರೆ.

ಮಧ್ಯಾಹ್ನ 1.30ರ ಬಳಿಕ ಒಳ್ಳೆಯ ಕಾಲ ಎಂಬ ಕಾರಣಕ್ಕೆ ಎರಡೂ ಪಕ್ಷಗಳ ಅಭ್ಯರ್ಥಿಗಳು ಮಧ್ಯಾಹ್ನದ ಬಳಿಕ ನಾಮಪತ್ರ ಸಲ್ಲಿಸಿದರು. ಯಲ್ಲಮ್ಮನಗರ ಚುನಾವಣಾಧಿಕಾರಿ ಆಗಿರುವ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಭಾರತ್‌ ಕಾಲೊನಿ ಚುನಾವಣಾಧಿಕಾರಿಯಾಗಿರುವ ಲಕ್ಷ್ಮೀಕಾಂತ್‌ ಬೋಮ್ಮನ್ನವರ್‌ ನಾಮಪತ್ರಗಳನ್ನು ಸ್ವೀಕರಿಸಿದರು.

ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾದ ಭಾರತ್ ಕಾಲೊನಿಯಲ್ಲಿ (20ನೇ ವಾರ್ಡ್‌) ಬಿಜೆಪಿಯಿಂದ ರೇಣುಕಾ ಎಂ. ಕೃಷ್ಣ ಅವರು ಎರಡು ನಾಮಪತ್ರ (ಒಂದು ಪಕ್ಷೇತರಳಾಗಿ) ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ ಮೀನಾಕ್ಷಿ ಎಂ. ಜಗದೀಶ್‌ ನಾಮಪತ್ರ ಸಲ್ಲಿಸಿದ್ದಾರೆ. ಬೇರೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ರೇಣುಕಾ ಅವರು ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಬಿಬಿಎಂ ಪದವೀಧರೆ ಆಗಿರುವ ಮೀನಾಕ್ಷಿ ಎದುರಾಳಿ ಆಗಿದ್ದಾರೆ.

ಸಾಮಾನ್ಯಕ್ಕೆ ಮೀಸಲಾಗಿದ್ದ ಯಲ್ಲಮ್ಮನಗರದಲ್ಲಿ 11 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ ಎಸ್‌. ರವಿಸ್ವಾಮಿ, ಬಿಜೆಪಿಯಿಂದ ಶಿವಾನಂದ ಆರ್‌. ನಾಮಪತ್ರ ಸಲ್ಲಿಸಿದ್ದಾರೆ. ಆಲ್‌ ಇಂಡಿಯಾ ಮಜಲಿನ್‌–ಇ–ಇತಿಹಾದುಲ್‌ ಮುಸ್ಲಿಮೀನ್‌ (ಎಐಎಂಇಐಎಂ) ಪಕ್ಷದಿಂದ ಮೊಹಮ್ಮದ್‌ ಅಲಿ ಎಫ್‌.ಎಂ. ಎರಡು ನಾಮಪತ್ರ (ಒಂದು ಪಕ್ಷೇತರನಾಗಿ) ಸಲ್ಲಿಸಿದ್ದಾರೆ. ಮನು ಎಂ., ಖಲೀಲ್ ಬೇಗ್‌, ಪ್ರಸನ್ನ ಸಾಳಂಕಿ, ಸೈಯದ್‌ ನಜೀರ್‌, ಎಸ್‌.ಕೆ. ಅಫ್ರಜ್‌, ಗಣೇಶ್‌ ರಾವ್‌, ಶುಭಮಂಗಳ, ಮಹಮ್ಮದ್‌ ಮುಜಾಹಿದ್‌ ಪಾಷಾ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ನಾಮಪತ್ರ ಸಲ್ಲಿಸುವ ವೇಳೆ ಮುಖಂಡರಾದ ವೀರೇಶ್‌ ಹನಗವಾಡಿ, ಎಸ್‌.ಟಿ. ವೀರೇಶ್‌, ಯಶವಂತರಾವ್‌ ಜಾಧವ್‌ ರಾಜನಹಳ್ಳಿ ಶಿವಕುಮಾರ್‌, ದೇವರಮನಿ ಶಿವಕುಮಾರ್‌, ದಿವಾಕರ್‌ ಇದ್ದರು.

ಕಾಂಗ್ರೆಸ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಮುಖಂಡರಾದ ಎ.ನಾಗರಾಜ್‌, ಡಿ.ಬಸವರಾಜ್‌, ಶಿವನಳ್ಳಿ ರಮೇಶ್‌,  ಅಬ್ದುಲ್‌ ಲತೀಫ್‌, ಅಯೂಬ್‌ ಪೈಲ್ವಾನ್‌, ಉಮೇಶ್‌, ಕೇಳುವಪ್ಪ, ಡಿ.ಕೆ. ರಮೇಶ್‌, ಗಣೇಶ್ ಹುಲುಮನಿ, ಡಿ. ಶಿವಕುಮಾರ್‌ ಇದ್ದರು.

15 ಬೂತ್‌ಗಳಲ್ಲಿ ಮತದಾನ
ಭಾರತ್‌ ಕಾಲೊನಿ ವಾರ್ಡ್‌ಗೆ ಸಂಬಂಧಿಸಿದಂತೆ 7 ಬೂತ್‌ಗಳು ಮತ್ತು ಯಲ್ಲಮ್ಮನಗರ ವಾರ್ಡ್‌ಗೆ ಸಂಬಂಧಿಸಿದಂತೆ 8 ಬೂತ್‌ಗಳಲ್ಲಿ ಮಾರ್ಚ್‌ 29ರಂದು ಮತದಾನ ನಡೆಯಲಿದೆ.

ಭಾರತ್‌ ಕಾಲೊನಿಯಲ್ಲಿ 3,625 ಪುರುಷರು, 3,723 ಮಹಿಳೆಯರು ಸೇರಿ 7,348 ಮತದಾರರಿದ್ದಾರೆ. ಯಲ್ಲಮ್ಮನಗರ ವಾರ್ಡ್‌ನಲ್ಲಿ 4,013 ಪುರುಷರು, 4,042 ಮಹಿಳೆಯರು, ಒಬ್ಬ ಇತರರು ಸೇರಿ ಒಟ್ಟು 8,056 ಮತದಾರರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.