ಮಂಗಳವಾರ, ಜನವರಿ 26, 2021
16 °C
ಸ್ಮಾರ್ಟ್‌ ಸಿಟಿ ಮಂದಗತಿಯ ಕಾಮಗಾರಿಗೆ ಸಚಿವ ಬಸವರಾಜ ಅಸಮಾಧಾನ, ಕ್ರಮದ ಎಚ್ಚರಿಕೆ

‘ಹುಬ್ಬಳ್ಳಿ–ಧಾರವಾಡದ ಅಭಿವೃದ್ಧಿಗೆ ₹1 ಸಾವಿರ ಕೋಟಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೇಂದ್ರ ರಸ್ತೆ ನಿಧಿ ಅಡಿ ಹುಬ್ಬಳ್ಳಿ–ಧಾರವಾಡದ ಪ್ರಮುಖ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಉಳಿದ ರಸ್ತೆಗಳ ಅಭಿವೃದ್ಧಿಗೆ ₹1 ಸಾವಿರ ಕೋಟಿ ನೀಡಬೇಕು ಎಂದು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಮಾಡಿದ ಮನವಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದರು.

ಇಲ್ಲಿ ಗುರುವಾರ ನಡೆದ ಸ್ಮಾರ್ಟ್‌ ಸಿಟಿ, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ, ಕೆಯುಐಡಿಎಫ್‌ಸಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಸ್ತೆಗಳ ಅಭಿವೃದ್ಧಿಗೆ ಶೀಘ್ರದಲ್ಲಿಯೇ ಹಣ ಬಿಡುಗಡೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಇಲ್ಲಿನ ಮಹಾನಗರ ಪಾಲಿಕೆಗೆ ₹150 ಕೋಟಿ ಸೇರಿದಂತೆ ವಿವಿಧ ಯೋಜನೆಗಳಿಂದ ಒಟ್ಟು ₹229 ಕೋಟಿ ನೀಡಲಾಗಿದೆ. ಪ್ರಮುಖ ನಗರವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ–ಧಾರವಾಡದ ಸಮಗ್ರ ಅಭಿವೃದ್ಧಿಗೆ ಹಣ ವ್ಯಯಿಸಲು ಸರ್ಕಾರ ಬದ್ಧವಿದೆ. ನಗರ ವಿಕಾಸ ಯೋಜನೆಯ ಕಾರ್ಯಯೋಜನೆ ಸಿದ್ಧವಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುವುದು. ಬರುವ ಬೇಸಿಗೆ ವೇಳೆಗೆ ಎಲ್ಲಾ ರಸ್ತೆ ಹಾಗೂ ಒಳಚರಂಡಿಗಳನ್ನು ದುರಸ್ತಿ ಮಾಡಲಾಗುವುದು’ ಎಂದರು.

ಅಸಮಾಧಾನ: ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿವೆ. ಇದು ಹೀಗೆಯೇ ಮುಂದುವರಿದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.

ಇಂದಿರಾ ಗಾಜಿನ ಮನೆಯಲ್ಲಿ ನಡೆಯುತ್ತಿರುವ ಕಾಮಗಾರಿ, ತೋಳನಕೆರೆಗೆ ಚರಂಡಿ ನೀರು ಸೇರುತ್ತಿರುವುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಎರಡ್ಮೂರು ದಿನಗಳಲ್ಲಿ ಚರಂಡಿ ನೀರು ಹೋಗುವುದನ್ನು ನಿಲ್ಲಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದರು. 

‘ಪ್ರಗತಿಯಲ್ಲಿರುವ ಕಾಮಗಾರಿಗಳು ಐದಾರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಸ್ಮಾರ್ಟ್‌ ಸಿಟಿಯ ಯೋಜನೆಗಳ‌ನ್ನು ಮುಗಿಸಲು ಒಂದೂವರೆ ವರ್ಷ ಕಾಲಾವಕಾಶವಿದೆ. ಯೋಜನಾ ವೆಚ್ಚ ಹೆಚ್ಚಾಗದಂತೆ ಎಚ್ಚರಿಕೆ ವಹಿಸಿ ಕಾಲಮಿತಿಯಲ್ಲಿ ಮುಗಿಸಲಾಗುವುದು’ ಎಂದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಕೆಯುಐಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಟಿ.ರೆಜು, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹಮದ್, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಆಯುಕ್ತ ವಿನಾಯಕ ಪಾಲನಕ್ ಪಾಲ್ಗೊಂಡಿದ್ದರು.

 

ಅಕ್ರಮ ಸಕ್ರಮ: ಉಪ ಸಮಿತಿ ರಚನೆ

ನಗರ ಪ್ರದೇಶಗಳಲ್ಲಿ ಅಕ್ರಮ ಸಕ್ರಮ ಆಸ್ತಿಗಳ ಕುರಿತು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿ ಚಿಸಲಾಗಿದೆ. ಎಲ್ಲಾ ಸಾಧಕ ಬಾಧಕಗಳನ್ನು ಚರ್ಚಿಸಿ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಬಸವರಾಜ ಹೇಳಿದರು.

‘ಇಲ್ಲಿನ ಪಾಲಿಕೆಯ ಪಿಂಚಣಿ ಪಾವತಿಗೆ ₹52 ಕೋಟಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಉಳಿದ ಹಣವನ್ನು ಮುಂದಿನ ಬಜೆಟ್‌ನಲ್ಲಿ ನೀಡಲಾಗುವುದು. ವಿಶ್ವಬ್ಯಾಂಕ್ ನೆರವಿನಲ್ಲಿ ₹2,800 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ–ಧಾರವಾಡ, ಕಲಬುರ್ಗಿ ಮತ್ತು ಬೆಳಗಾವಿಯಲ್ಲಿ 24X7 ಕುಡಿಯುವ ನೀರು ಸರಬರಾಜು ಯೋಜನೆ ನಡೆಯಲಿದೆ’ ಎಂದರು.

 

ಎಲ್‌ಇಡಿ ದೀಪ ಅಳವಡಿಸಲು ₹77 ಕೋಟಿ ವೆಚ್ಚ

ಅವಳಿ ನಗರಗಳಲ್ಲಿ 64 ಸಾವಿರ ಎಲ್‌ಇಡಿ ಬಲ್ಪ್‌ಗಳನ್ನು ಅಳವಡಿಸಲು ₹77 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ಲಾಭ, ನಷ್ಟಗಳನ್ನು ಪರಿಶೀಲಿಸಿಯೇ ಅನುಮೋದನೆ ನೀಡಲಾಗಿದೆ. ಇದರಿಂದ ಸರ್ಕಾರಕ್ಕೆ ಯಾವುದೇ ಹೊರೆಯಿಲ್ಲ. ಇವೆಲ್ಲವೂ ಸಾರ್ವಜನಿಕ ಸಹಭಾಗಿತ್ವದಲ್ಲಿ ನಡೆಯಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು