ಸೋಮವಾರ, ಸೆಪ್ಟೆಂಬರ್ 20, 2021
22 °C
ಹಿಂದುಳಿದ ವರ್ಗದ ಇಲಾಖೆ ಸಿಬ್ಬಂದಿ ಮೇಲೆ ಅನುಮಾನ; ಪ್ರಕರಣ ದಾಖಲು

₹24 ಲಕ್ಷ ವಿದ್ಯಾರ್ಥಿ ವೇತನ ನಕಲಿ ಖಾತೆಗೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿ ಆಯುರ್ವೇದ ಮಹಾವಿದ್ಯಾಲಯದ ಹೆಸರಲ್ಲಿ ನಕಲಿ ಬ್ಯಾಂಕ್‌ ಖಾತೆ ತೆರೆದು, ಆ ಖಾತೆಗೆ ಹಿಂದುಳಿದ ವರ್ಗಗಳ ಇಲಾಖೆ ಸಿಬ್ಬಂದಿಯೊಬ್ಬರು ₹ 24 ಲಕ್ಷ ವಿದ್ಯಾರ್ಥಿ ವೇತನ ಜಮಾ ಮಾಡಿ ವಂಚಿಸಿರುವುದಾಗಿ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2017ರ ಏಪ್ರಿಲ್‌ 1ರಿಂದ 2018ರ ಮಾರ್ಚ್‌ 31ರ ಮಧ್ಯೆ ಈ ಖಾತೆಯಲ್ಲಿ ಹಣದ ವಹಿವಾಟಾಗಿದೆ.

ಹಿಂದುಳಿದ ವರ್ಗಗಳ ಇಲಾಖೆಯಿಂದ ಪ್ರತಿ ವರ್ಷ ಕಾಲೇಜಿನ ಪ್ರಾಚಾರ್ಯರ ಹೆಸರಲ್ಲಿರುವ ಬ್ಯಾಂಕ್‌ ಖಾತೆಗೆ ವಿದ್ಯಾರ್ಥಿ ವೇತನ ಜಮಾ ಆಗುತ್ತಿತ್ತು. ಆದರೆ, 2017ರ ಶೈಕ್ಷಣಿಕ ವರ್ಷದಲ್ಲಿ ಇಲಾಖೆ ಸಿಬ್ಬಂದಿಯೊಬ್ಬರು, ಹುಬ್ಬಳ್ಳಿ ದೇಶಪಾಂಡೆ ನಗರದಲ್ಲಿರುವ ಐಸಿಐಸಿಐ ಬ್ಯಾಂಕ್‌ನಲ್ಲಿ ಕಾಲೇಜಿನ ಹೆಸರಲ್ಲಿ ಖಾತೆ ತೆರೆದಿದ್ದಾರೆ. ನಂತರ ವಿದ್ಯಾರ್ಥಿ ವೇತನ ಅದಕ್ಕೆ ಜಮಾ ಮಾಡಿ, ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಾಚಾರ್ಯ ಡಾ. ಪ್ರಶಾಂತ ಎ.ಎಸ್‌., ‘ಆಯುಷ್‌ ಇಲಾಖೆ ಮೂರು ವರ್ಷದ ಹಣಕಾಸಿನ ವ್ಯವಹಾರದ ವರದಿ ಕೇಳಿತ್ತು. ಆ ವರದಿ ತೆಗೆಯುವಾಗ 2017ರ ಅವಧಿಯಲ್ಲಿ ವಿದ್ಯಾರ್ಥಿ ವೇತನದ ಮಾಹಿತಿ ಇರಲಿಲ್ಲ. ಹಿಂದುಳಿದ ವರ್ಗದ ಇಲಾಖೆ ಅಧಿಕಾರಿ ಜೊತೆ ಚರ್ಚಿಸಿದಾಗ ಕಾಲೇಜಿನ ಹೆಸರಲ್ಲಿರುವ ಐಸಿಐಸಿಐ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಿರುವುದಾಗಿ ತಿಳಿಸಿದ್ದರು. ಆ ಹೆಸರಿನ ಖಾತೆಯೇ ನಮ್ಮಲ್ಲಿ ಇಲ್ಲ ಎಂದು ತಿಳಿಸಿದಾಗ, ಅಲ್ಲಿಯ ಸಿಬ್ಬಂದಿಯೇ ಈ ಕೃತ್ಯ ನಡೆಸಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ’ ಎಂದರು.

‘ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಲಾ ₹20 ಸಾವಿರ ವಿದ್ಯಾರ್ಥಿ ವೇತನ ದೊರೆಯಬೇಕಿತ್ತು. ಆ ವರ್ಷ ಪ್ರಾಚಾರ್ಯರ ಖಾತೆಗೆ ಹಣ ಬರದಿದ್ದಕ್ಕೆ ತಾಂತ್ರಿಕ ಸಮಸ್ಯೆಗಳಿರಬಹುದು ಎಂದು ಮಾರನೇ ವರ್ಷ, ಇಲಾಖೆ ಜೊತೆ ಪತ್ರ ವ್ಯವಹಾರ ನಡೆಸಲಾಗಿತ್ತು. ನಂತರದ ದಿನಗಳಲ್ಲಿ, ಕೋವಿಡ್‌, ಲಾಕ್‌ಡೌನ್‌ಗಳಿಂದಾಗಿ ಮಾಹಿತಿ ದೊರೆಯುವಲ್ಲಿ ವಿಳಂಬವಾಗಿತ್ತು. ಇದೀಗ ಪ್ರಕರಣ ದಾಖಲಿಸಲಾಗಿದೆ’ ಎಂದು ತಿಳಿಸಿದರು.

ಹಣ ದುಪ್ಪಟ್ಟು ಹೆಸರಲ್ಲಿ ₹1.20 ಲಕ್ಷ ವಂಚನೆ

ಹುಬ್ಬಳ್ಳಿ: ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂದು ಧಾರವಾಡದ ಸಾಮಗಾರ ಓಣಿಯ ಸಾಗರ ಇಂಚಗೇರಿ ಅವರನ್ನು ನಂಬಿಸಿದ್ದ ವಂಚಕರು, ಅವರಿಂದ ಹಂತ, ಹಂತವಾಗಿ ₹1.20 ಲಕ್ಷ ವರ್ಗಾಯಿಸಿಕೊಂಡಿದ್ದಾರೆ.

ಸಾಗರ ಅವರಿಗೆ ಸಾನ್ವಿ ಹೆಸರಲ್ಲಿ ಯುವತಿಯೊಬ್ಬಳು ‘ಮನಿ ಪ್ಲಾಂಟ್‌ ಗ್ಲೋಬಲ್‌ ರಿಸರ್ಚ್‌ ಕೊಟಾ ರಾಜಸ್ಥಾನ’ ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿ, ಹಣ ಹೂಡಿಕೆ ಮಾಡಲು ಹೇಳಿದ್ದಾಳೆ. ಒಂದು ಬಾರಿ ಹಣ ಹೂಡಿಕೆ ಮಾಡಿದರೆ ಪ್ರತಿ ದಿನ ಹಣ ಮರಳಿ ಬರುವುದಲ್ಲದೆ, ದುಪ್ಪಟ್ಟಾಗುವುದಾಗಿ ನಂಬಿಸಿದ್ದಾಳೆ. ಅಲ್ಲದೆ, ಕಂಪನಿ ಹೆಸರಲ್ಲಿ ಬೇರೆ ಸಿಬ್ಬಂದಿ ಸಹ ಕರೆ ಮಾಡಿ ನಂಬಿಕೆ ಬರುವಂತೆ ಮಾಡಿದ್ದಾರೆ. ನಂತರ ಸಾಗರ, ಫೋನ್‌ ಪೇ ಮೂಲಕ ₹1.20 ಲಕ್ಷ ವರ್ಗಾಯಿಸಿ ಮೋಸ ಹೋಗಿದ್ದಾರೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ನುಗ್ಗಿ ಹಲ್ಲೆ, ಅಪರಹಣದ ಬೆದರಿಕೆ: ಕಚೇರಿಗೆ ಸಂಬಂಧಪಟ್ಟ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ದೇಶಪಾಂಡೆ ಬಡಾವಣೆಯ ಶಾಂತಾ ಓಸ್ವಾಲ್‌ ಮನೆಗೆ ನುಗ್ಗಿರುವ ಅಂಗಡಿ ವಿ.ಎನ್‌. ಜೊತೆ ಐವರು ಹಲ್ಲೆ ನಡೆಸಿದ್ದಾರೆ.

ಶಾಂತಾ ಅವರ ಮಾವ ಅಮರಗೋಳದಲ್ಲಿ ವ್ಯಾಪಾರ ನಡೆಸುತ್ತಿದ್ದು, ಅವರ ಜೊತೆ ಆರೋಪಿ ವ್ಯವಹಾರ ಹೊಂದಿದ್ದನು. ಲಾಕ್‌ಡೌನ್‌ನಿಂದ ವ್ಯವಹಾರದಲ್ಲಿ ಸಮಸ್ಯೆಯಾಗಿ ಹಣ ನೀಡಲು ವಿಳಂಬವಾಗಿದೆ. ಇದರಿಂದ ಕೋಪಗೊಂಡ ಆರೋಪಿ, ಅವರ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಹಣ ಮರಳಿ ನೀಡಿದಿದ್ದರೆ, ಮಾವನನ್ನು ಅಪಹರಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾರ್ಟ್‌ ಸರ್ಕಿಟ್‌; ಹಾನಿ: ಶಾರ್ಟ್ ಸರ್ಕಿಟ್‌ನಿಂದ ನಗರದ ಯಲ್ಲಾಪುರ ಓಣಿಯ ಆರೀಫ್ ಡಿಜಿಟಲ್‌ ಸೇವಾ ಕೇಂದ್ರದಲ್ಲಿಯೇ ಬೆಂಕಿ ಹೊತ್ತಿ ಉರಿದ ಪರಿಣಾಮ ಲಕ್ಷಾಂತರ ಮೌಲ್ಯದ ಉಪಕರಣಗಳು ಹಾನಿಯಾಗಿವೆ.

ಶುಕ್ರವಾರ ಬೆಳಿಗ್ಗೆ ಅಂಗಡಿಗೆ ಬೆಂಕಿ ಬಿದ್ದಿದ್ದು, ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ₹81 ಸಾವಿರ ಮೌಲ್ಯದ ಕಂಪ್ಯೂಟರ್, ಪ್ರಿಂಟರ್ ಹಾಗೂ ₹21 ಸಾವಿರ ನಗದು ಸುಟ್ಟು ಭಸ್ಮವಾಗಿದೆ. ಬೆಂಡಿಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರು ಆತ್ಮಹತ್ಯೆ: ಹುಬ್ಬಳ್ಳಿ ಹಳೇ ಬಸ್‌ ನಿಲ್ದಾಣ ಹಾಗೂ ರೈಲು ನಿಲ್ದಾಣದ ಆವರಣದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಎರಡು ಪ್ರತ್ಯೇಕ ಪ್ರಕರಣಗಳು ಉಪನಗರ ಪೊಲೀಸ್‌ ಠಾಣೆ ಹಾಗೂ ಶಹರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿವೆ.

ಹಳೇ ಬಸ್‌ ನಿಲ್ದಾಣದ ಆವರಣದಲ್ಲಿ ಟೆಲಿಫೋನ್‌ ತಂತಿ ಕುತ್ತಿಗೆಗೆ ಬಿಗಿದು 27 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ರೈಲು ನಿಲ್ದಾಣದ ಆವರಣದಲ್ಲಿ 32 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು