ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾರೂಢ ಮಿಷನ್‌ಗೆ ಬೆಳ್ಳಿ ಹಬ್ಬದ ಸಂಭ್ರಮ: ಸಂಸ್ಥೆ ಬೆಳೆದು ಬಂದ ದಾರಿ...

Published 9 ಮೇ 2024, 10:16 IST
Last Updated 9 ಮೇ 2024, 10:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: 1998 ರಲ್ಲಿ ಹುಬ್ಬಳ್ಳಿಯಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ದಕ್ಷಿಣ ತಾಲ್ಲೂಕಿನ ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಇದೇ ಮೇ 10 ರಿಂದ 12 ರ ವರೆಗೆ 25 ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಶಾಂಡಿಲ್ಯಾಶ್ರಮದ ಚಂದ್ರಶೇಖರ್ ಸ್ವಾಮಿಗಳಿಂದ ಉದ್ಘಾಟನೆಗೊಂಡು ರಾಮೋಹಳ್ಳಿಯಲ್ಲಿ ನೆಲೆಯೂರಿದ ಈ ಸಂಸ್ಥೆ ಹಲವು ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ. ಇದರ ಸಂಸ್ಥಾಪಕ ಅಂದಿನ ವಿದ್ವಾನ್ ಎಸ್. ಪ್ರಭುಲಿಂಗದೇವರು ಇಂದು ಡಾ. ಆರೂಢಭಾರತೀ ಸ್ವಾಮೀಜಿ.

2001 ರಲ್ಲಿ ಗೋಕಾಕ್ ತಾಲ್ಲೂಕಿನ ಚಿಕ್ಕನಂದಿ, ಮಂಡ್ಯ ಜಿಲ್ಲೆಯ ಶಿವನ ಸಮುದ್ರ ಹಾಗೂ ಮೈಸೂರುಗಳಿಂದ ಸಿದ್ಧಾರೂಢ ಜ್ಯೋತಿಯಾತ್ರೆಗಳನ್ನು ನಡೆಸಿ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಬೃಹತ್ ಪ್ರಮಾಣದ ಸಿದ್ಧಾರೂಢ ಜಯಂತಿಯನ್ನು ಆಚರಿಸಲಾಯಿತು. ರೇಲ್ವೆಯೊಂದಕ್ಕೆ ಸಿದ್ಧಾರೂಢರ ಹೆಸರಿಡಲು ಮುಖ್ಯಮಂತ್ರಿ ಎಸ್. ಎಮ್. ಕೃಷ್ಣ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು. ಹುಬ್ಬಳ್ಳಿಯ ರೈಲು ನಿಲ್ದಾಣಕ್ಕೆ ಸಿದ್ಧಾರೂಢರ ನಾಮಕರಣವಾಗುವಲ್ಲಿ ಈ ಪ್ರಯತ್ನ ಫಲಕೊಟ್ಟಿತು. ಎಚ್. ಕೆ. ಪಾಟೀಲ್, ಪಿಜಿಆರ್ ಸಿಂಧ್ಯ ಮುಂತಾದವರ ಸಹಕಾರ ಇಲ್ಲಿ ಸ್ಮರಣೀಯ.

2002 ಹಾಗೂ 2003 ರಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆಗಳನ್ನು ನಡೆಸಿದೆ. 2005 ರಲ್ಲಿ ಸಿದ್ಧಾರೂಢರ ಜನ್ಮಸ್ಥಳವಾದ ಚಳಕಾಪುರದಿಂದ ಆಗಮಿಸಿದ ಸಿದ್ಧಾರೂಢ ಜ್ಯೋತಿಯಾತ್ರೆಗೆ ಅದ್ದೂರಿಯ ಸ್ವಾಗತ ಕೋರಿ ಭವ್ಯ ಮೆರವಣಿಗೆ ಮಾಡಿ ಬೃಹತ್ ಸಮಾರಂಭವನ್ನು ನಡೆಸಿಕೊಟ್ಟಿದೆ. ಮುಖ್ಯಮಂತ್ರಿ ಎನ್ ಧರ್ಮಸಿಂಗ್ ಮುಂತಾದವರು ಪಾಲ್ಗೊಂಡಿದ್ದರು. ವಿಜಯಪುರದ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಉಪನ್ಯಾಸವನ್ನು ಬೆಂಗಳೂರಿನಲ್ಲಿ ಏರ್ಪಡಿಸುವಲ್ಲಿ ಸಿದ್ಧಾರೂಢ ಮಿಷನ್ ನ ಪಾತ್ರವಿದೆ.

ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಆದಿಚುಂಚನಗಿರಿಯ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳು, ರಾಮಕೃಷ್ಣ ಆಶ್ರಮದ ಸ್ವಾಮಿ ಜಗದಾತ್ಮಾನಂದಜಿ, ಸ್ವಾಮಿ ಹರ್ಷಾನಂದಜಿ, ಸಿದ್ಧಾರೂಢ ಮಠದ ಶ್ರೀ ಶಾಂತಮುನಿ ಸ್ವಾಮೀಜಿ, ಷಣ್ಮುಖಾರೂಢ ಮಠದ ಅಭಿನವ ಶಿವಪುತ್ರ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ ಮುಂತಾದ ಸಂತ ಮಹಂತರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ನೇತ್ರತಜ್ಞ ಡಾ. ಎಂ. ಸಿ. ಮೋದಿ, ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸ ರಾವ್, ವಿದ್ವಾನ್ ಎನ್. ರಂಗನಾಥ ಶರ್ಮಾ ಮುಂತಾದವರಿಗೆ ಆರೂಢಶ್ರೀ ಪುರಸ್ಕಾರ ನೀಡಿ ಗೌರವಿಸಿದೆ.

ಯೋಗ ಶಿಬಿರ ಸಂಸ್ಕೃತ ಸಂಭಾಷಣ ಶಿಬಿರ ಅಧ್ಯಾತ್ಮ ಶಿಬಿರ ಮಕ್ಕಳ ವ್ಯಕ್ತಿತ್ವ ರೂಪಿಸುವ ವಿಕಾಸ ಸಂಗಮ ತರಬೇತಿಗಳನ್ನು ಆಯೋಜಿಸಿದೆ. 2021 ರಲ್ಲಿ ಬೆಳಗಾವಿ ಜಿಲ್ಲೆ ಜಲಪ್ರವಾಹಕ್ಕೆ ನಲುಗಿದಾಗ ಪಾದಯಾತ್ರೆ ನಡೆಸಿ, ಆಹಾರ ಸಾಮಗ್ರಿ ಔಷಧಿ ಹಾಸಿಗೆ ಹೊದಿಕೆ ಬಟ್ಟೆ ಬರೆಗಳನ್ನು ಸಂಗ್ರಹಿಸಿ ಲಾರಿಯ ಮೂಲಕ ಹಳ್ಳಿಗಳಲ್ಲಿ ಸಂತ್ರಸ್ತರಿಗೆ ವಿತರಿಸಲಾಯಿತು. ಮಹಾಲಕ್ಷ್ಮೀಪುರ ಹೌಸಿಂಗ್ ಬೋರ್ಡ್ ಗಾಯತ್ರಿ ನಗರ ಕುರುಬರ ಹಳ್ಳಿ ಪ್ರದೇಶಗಳಲ್ಲಿ ಉದ್ಯಾನಗಳಿಗೆ ಸಿದ್ಧಾರೂಢರ ಹೆಸರಿಡಲಾಗಿದೆ.

ಕೆಂಗೇರಿಯಿಂದ ಉಲ್ಲಾಳ ಜಂಕ್ಷನ್ ವರೆಗೆ ಆರು ಕಿಲೋಮೀಟರ್ ಉದ್ದದ ವರ್ತುಲ ರಸ್ತೆಗೆ ಭಗವಾನ್ ಶ್ರೀ ಸಿದ್ಧಾರೂಢ ಸ್ವಾಮಿ ರಸ್ತೆ ಎಂದು ನಾಮಕರಣಗೊಳಿಸಲಾಗಿದೆ.ಹಲವಾರು ಮಾಸಿಕ ಸಂಗೀತ ಹಾಗೂ ಪ್ರವಚನಗಳನ್ನು ಆಯೋಜಿಸಿದೆ. 2007 ರಲ್ಲಿ ರಾಮೋಹಳ್ಳಿಯಲ್ಲಿ ಸ್ಥಳ ಖರೀದಿಸಿ ಕಟ್ಟಡ ನಿರ್ಮಿಸಿ 2015 ರಲ್ಲಿ ಸೇವಾಸೌಧವನ್ನು ಉದ್ಘಾಟಿಸಲಾಗಿದೆ. ಸಂಸ್ಕೃತದ ಜ್ಞಾನಪೀಠ ಪುರಸ್ಕೃತ ಡಾ ಸತ್ಯವ್ರತ ಶಾಸ್ತ್ರೀ, ಕನ್ನಡದ ಜ್ಞಾನಪೀಠ ಪುರಸ್ಕೃತ ಡಾ ಚಂದ್ರಶೇಖರ್ ಕಂಬಾರ, ಡಾ. ಕೆ. ಮರುಳಸಿದ್ಧಪ್ಪ, ಆದಿದೇವಾನಂದಗಿರಿ ಸ್ವಾಮೀಜಿ, ದಯಾನಂದ ಸರಸ್ವತೀ ಸ್ವಾಮೀಜಿ ಭಾಗವಹಿಸಿದ್ದರು.

ಸಿದ್ಧಾರೂಢ ಅಂತಾರಾಷ್ಟ್ರಿಯ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸುಸಜ್ಜಿತ ಬೃಹತ್ ಗ್ರಂಥಾಲಯ ಇಲ್ಲಿದೆ. ಇದರ ಮೂಲಕ ಹಲವಾರು ಗ್ರಂಥಗಳನ್ನು ಧ್ವನಿಸುರುಳಿಗಳನ್ನು ಹೊರತರಲಾಗಿದೆ.

2016 ರಲ್ಲಿ ಬೃಹತ್ ಪ್ರಮಾಣದ ಸಂಸ್ಕೃತ ವಿದ್ಯಾರ್ಥಿಸಮ್ಮೇಲನವನ್ನು, ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಸಂಘಟಿಸಿದೆ. 2017 ರಲ್ಲಿ ಸಾಂಸ್ಕೃತಿಕ ಭವನ ಹಾಗೂ ಅಧ್ಯಾತ್ಮಮಂದಿರಕ್ಕೆ ಅಡಿಗಲ್ಲು ಸಮಾರಂಭವನ್ನು ನಡೆಸಲಾಯಿತು. 2021 ರಲ್ಲಿ ಯೋಗಭವನ ಶಾಲಾ ಕಟ್ಟಡಕ್ಕೆ ಶಂಖುಸ್ಥಾಪನೆ ನೆರವೇರಿಸಲಾಯಿತು.

2022 ರಲ್ಲಿ ಸಿದ್ಧಾಮೃತ ಗುರುಕುಲವನ್ನು ಆರಂಭಿಸಲಾಯಿತು. ಆರರಿಂದ ಹತ್ತನೇ ತರಗತಿಯ ಗಂಡು ಮಕ್ಕಳ ಈ ಗುರುಕುಲದಲ್ಲಿ ರಾಜ್ಯ ಸರ್ಕಾರದ ಕನ್ನಡ ಮಾಧ್ಯಮದ ಪಾಠ್ಯದೊಂದಿಗೆ ಸಂಸ್ಕೃತ ವೇದ ವಚನ ಯೋಗ ಸಂಗೀತ ಸಂಸ್ಕಾರಗಳ ಶಿಕ್ಷಣವನ್ನು ನೀಡಲಾಗುತ್ತಿದೆ. 2023 ರಲ್ಲಿ ಸಿದ್ಧಾರೂಢ ಇಂಟರ್ನ್ಯಾಷನಲ್ ಗುರುಕುಲಮ್ ಶಾಲೆಯನ್ನು ಆರಂಭಿಸಲಾಗಿದೆ.

ಇದೀಗ ಇದೇ ಮೇ 10,11 ಹಾಗೂ 12 ರಂದು 25 ನೇ ವರ್ಷದ ಸಂಭ್ರಮವನ್ನು ಹಮ್ಮಿಕೊಂಡಿದ್ದು ಸಾಂಸ್ಕೃತಿಕ ಭವನದ ಉದ್ಘಾಟನೆ, ಪುಸ್ತಕಗಳ ಲೋಕಾರ್ಪಣೆ, 108 ಮಠಾಧೀಶರ ಸಮಾವೇಶ ಐವತ್ತಕ್ಕೂ ಹೆಚ್ಚು ತಂಡಗಳ ಭಜನ ಸಮ್ಮೇಳನ, ಆರೂಢಶ್ರೀ ಪುರಸ್ಕಾರ, ಜ್ಞಾನ ಯಜ್ಞ ಜಪಯಜ್ಞ, ಗೀತಾ ವಚನ ಚರಿತ್ರಗಳ ಪಾರಾಯಣ ಇಲ್ಲಿ ನಡೆಯಲಿವೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು ದಾಸೋಹ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT