ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಮಹಾನಗರ ಪಾಲಿಕೆಯಿಂದ ತ್ಯಾಜ್ಯ ಸಂಗ್ರಹಕ್ಕೆ 35 ಹೊಸ ಟ್ರ್ಯಾಕ್ಟರ್

ಹು–ಧಾ ಮಹಾನಗರ ಪಾಲಿಕೆಯಿಂದ ₹3.5 ಕೋಟಿ ವೆಚ್ಚದಲ್ಲಿ ಖರೀದಿ
Last Updated 22 ಫೆಬ್ರುವರಿ 2023, 8:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರದ ಘನ ತ್ಯಾಜ್ಯ ನಿರ್ವಹಣೆಯನ್ನು ಸುಗಮಗೊಳಿಸುವುದಕ್ಕಾಗಿ, ಮತ್ತೊಂದು ಹೆಜ್ಜೆ ಮುಂದಕ್ಕೆ ಇಟ್ಟಿರುವ ಮಹಾನಗರ ಪಾಲಿಕೆಯು ಹೊಸದಾಗಿ 35 ಟ್ರಾಕ್ಟರ್‌ಗಳನ್ನು ಖರೀದಿಸಿದೆ. ಇದರೊಂದಿಗೆ ಪಾಲಿಕೆಯಲ್ಲಿರುವ ತ್ಯಾಜ್ಯ ಸಂಗ್ರಹಣಾ ಟ್ರಾಕ್ಟರ್‌ಗಳ ಸಂಖ್ಯೆ 114ಕ್ಕೆ ಏರಿಕೆಯಾಗಿದೆ. ಮಾರುಕಟ್ಟೆ ಪ್ರದೇಶ, ಅಪಾರ್ಟ್‌ಮೆಂಟ್, ಹೋಟೆಲ್, ಕಲ್ಯಾಣ ಮಂಟಪದಲ್ಲಿ ನಿತ್ಯ ಭಾರೀ ಪ್ರಮಾಣದ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಹೆಚ್ಚಿನ ತ್ಯಾಜ್ಯವನ್ನು ಆಟೊ ಟಿಪ್ಪರ್‌ಗಳ ಬದಲು, ಟ್ರಾಕ್ಟರ್‌ಗಳಲ್ಲಿ ಸಂಗ್ರಹಿಸಲಾಗುತ್ತಿತ್ತು.

ಸದ್ಯ ಪಾಲಿಕೆಯ ಬಳಿ ಇರುವ ಬಹುತೇಕ ಟ್ರಾಕ್ಟರ್‌ಗಳು ಹಳೆಯದಾಗಿವೆ. ಅವುಗಳಲ್ಲಿ ಕಸ ಸಂಗ್ರಹಿಸಿದರೂ, ದಾರಿಯುದ್ದಕ್ಕೂ ದುರ್ವಾಸನೆ ಬೀರುತ್ತಾ ಚೆಲ್ಲಿಕೊಂಡು ಹೋಗುವುದು ಸಾಮಾನ್ಯವಾಗಿದೆ.

₹3.5 ಕೋಟಿ ವೆಚ್ಚ: ‘ಮ್ಯಾಸಿ ಫರ್ಗುಸನ್ ಕಂಪನಿಯ ತಲಾ ಒಂದು ಟ್ರಾಕ್ಟರ್‌ಗೆ ₹9.94 ಲಕ್ಷದಂತೆ, 35 ಟ್ರಾಕ್ಟರ್‌ಗಳಿಗೆ ತಲಾ ₹3.5 ಕೋಟಿ ವೆಚ್ಚವಾಗಿದೆ. ಪಾಲಿಕೆಯ 2021–22ನೇ ಸಾಲಿನ ಹದಿನೈದನೇ ಹಣಕಾಸಿನಲ್ಲಿ ಖರೀದಿ ಮಾಡಲಾಗಿದೆ’ ಎಂದು ಪಾಲಿಕೆಯ ಘನ ತ್ಯಾಜ್ಯ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷಕುಮಾರ ಯರಂಗಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹಾನಗರ ಬೆಳೆದಂತೆ ಸಂಗ್ರಹವಾಗುತ್ತಿರುವ ತ್ಯಾಜ್ಯದ ಪ್ರಮಾಣವೂ ಹೆಚ್ಚುತ್ತಿದೆ. ಮನೆಮನೆಯಿಂದ ಆಟೊ ಟಿಪ್ಪರ್‌ಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಆದರೆ, ದೊಡ್ಡ ಹೋಟೆಲ್‌ಗಳು, ಮಾರುಕಟ್ಟೆ ಪ್ರದೇಶ, ಮಾಲ್‌ಗಳು ಸೇರಿದಂತೆ ವಿವಿಧೆಡೆ ಕಸ ಸಂಗ್ರಹಕ್ಕೆ ಟ್ರಾಕ್ಟರ್‌ಗಳ ಅಗತ್ಯವಿತ್ತು’ ಎಂದು ಹೇಳಿದರು.

‘ಎಲ್ಲಾ ವಲಯಗಳಲ್ಲೂ ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪತ್ತಿಯಾಗುವ ಸ್ಥಳಗಳಿವೆ. ಹಾಗಾಗಿ, ಪ್ರತಿ ವಲಯಕ್ಕೂ ತಲಾ 3 ಟ್ರಾಕ್ಟರ್‌ಗಳನ್ನು ಹಂಚಲಾಗುವುದು. ಗುತ್ತಿಗೆ ಆಧಾರದ ಮೇಲೆ ಚಾಲಕರನ್ನು ನೇಮಿಸಿಕೊಂಡು ನಿರ್ವಹಣೆ ಮಾಡಲಾಗುವುದು’ ಎಂದರು.

ವಿಶೇಷ ವಿನ್ಯಾಸದ ಟ್ರೇಲರ್‌

‘ಹೊಸ ಟ್ರಾಕ್ಟರ್‌ಗಳನ್ನು ತಾಜ್ಯ ಸಂಗ್ರಹದ ಅಗತ್ಯಕ್ಕೆ ತಕ್ಕಂತೆ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಆರು ಟನ್ ಕಸ ಸಂಗ್ರಹ ಸಾಮರ್ಥವ್ಯಿದ್ದು, ಟ್ರೇಲರ್‌ಗಳ ಅಂಚು 5 ಅಡಿ ಎತ್ತರವಿದೆ. ವಿಂಗಡಿತ ಕಸ ಸಂಗ್ರಹಕ್ಕಾಗಿ 2 ಕಂಪಾರ್ಟ್‌ಮೆಂಟ್‌ಗಳಿದ್ದು, ಎರಡಕ್ಕೂ ಪ್ರತ್ಯೇಕ ಡೋರ್‌ಗಳಿವೆ. ಲೋಡ್ ಆದ ಬಳಿಕ ಟ್ರಾಕ್ಟರ್‌ನಿಂದ ತ್ಯಾಜ್ಯ ಚೆಲ್ಲದಂತೆ ಮೇಲ್ಭಾಗವನ್ನು ಟಾರ್ಪಲಿನ್‌ನಿಂದ ಮುಚ್ಚಲಾಗುತ್ತದೆ. ಕಸದ ನೀರು ರಸ್ತೆಗೆ ಚೆಲ್ಲದೆ, ಅಲ್ಲಿಯೇ ಸಂಗ್ರಹಗೊಳ್ಳುವಂತೆ ತಳಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ’ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷಕುಮಾರ ಯರಂಗಳಿ ಹೇಳಿದರು.

ಅಂಕಿ ಅಂಶ

₹9.94 ಲಕ್ಷ

ಹೊಸ ಟ್ರಾಕ್ಟರ್‌ ತಲಾ ಖರೀದಿ ವೆಚ್ಚ

79

ಪಾಲಿಕೆ ಬಳಿ ಇರುವ ಹಳೆಯ ಟ್ರಾಕ್ಟರ್‌ಗಳು

193

ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೊ ಟಿಪ್ಪರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT