24X7 ನೀರಿಗೆ ₹54 ಕೋಟಿ ಮಂಜೂರು: ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾಹಿತಿ
ಅಣ್ಣಿಗೇರಿ: ಪಟ್ಟಣದ ಜನರಿಗೆ 24X7 ನೀರು ಒದಗಿಸುವ ಉದ್ದೇಶದಿಂದ ಸರ್ಕಾರ ಈಗಾಗಲೇ ₹54 ಕೋಟಿ ಅನುದಾನ ಮಂಜೂರು ಮಾಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ದಿ ನಿಗಮ ಮತ್ತು ಹಣಕಾಸು ಸಂಸ್ಥೆ ಅಧ್ಯಕ್ಷ ಶಂಕರಪಾಟೀಲ ಮುನೇನಕೊಪ್ಪ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ’ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸುವ ನೂತನ ಕೆರೆ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ. ತಾಲ್ಲೂಕು ಪಂಚಾಯ್ತಿ ಹೊಸ ಕಟ್ಟಡಕ್ಕೆ ₹50 ಲಕ್ಷವನ್ನು ಸರ್ಕಾರ ನೀಡಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅಣ್ಣಿಗೇರಿ-ಭದ್ರಾಪೂರ ನಡುವಿನ 7 ಕಿ.ಮೀ ಚಕ್ಕಡಿ ರಸ್ತೆ ನಿರ್ಮಾಣಕ್ಕೆ ₹8.40 ಕೋಟಿ ಮತ್ತು ಅಣ್ಣಿಗೇರಿ-ಶಿಶ್ವಿನಹಳ್ಳಿ ಚಕ್ಕಡಿ ರಸ್ತೆ ನಿರ್ಮಾಣಕ್ಕೆ ₹2.5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಕೂಡ ಕರೆಯಲಾಗಿದೆ’ ಎಂದು ತಿಳಿಸಿದರು.
’ಕ್ರೀಡಾ ಚಟುವಟಿಕೆಗಳನ್ನು ನಡೆಸಲು ₹5 ಕೋಟಿ ಅನುದಾನಕ್ಕೆ ಮಂಜೂರಾತಿ ಲಭಿಸಿದೆ. ನೂತನ ತಾಲ್ಲೂಕು ಕೇಂದ್ರಕ್ಕೆ ಬರಬೇಕಾದ ಎಲ್ಲ ಕಚೇರಿಗಳು ಆದಷ್ಟು ಬೇಗನೆ ಬರಲಿವೆ. ಕ್ಷೇತ್ರದಲ್ಲಿ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಅಣ್ಣಿಗೇರಿ ಪಟ್ಟಣ ಕೊರೊನಾ ಮುಕ್ತವಾಗಿರುವುದು ಸಂತೋಷದ ಸಂಗತಿ’ ಎಂದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ, ಶಿವಯೋಗಿ ಸುರಕೋಡ, ಮಹೇಶ ದೇಸಾಯಿ, ಡಾ.ಅಶೋಕ ಅಗರವಾಲ್, ಮುಖ್ಯಾಧಿಕಾರಿ ಕೆ.ಎಫ್.ಕಟಗಿ, ಆರ್.ಡಿ.ಕುಲಕರ್ಣಿ, ಶಿವಾನಂದ ಹೊಸಳ್ಳಿ, ಬಸವರಾಜ ಯಳವತ್ತಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.