ಶುಕ್ರವಾರ, ಜೂನ್ 5, 2020
27 °C
ಸಿದ್ದಾರೂಢ ಮಠದಿಂದ ಜಿಲ್ಲಾಡಳಿತಕ್ಕೆ ನಾಲ್ಕು ಸಾವಿರ ಕಿಟ್‌

ಹುಬ್ಬಳ್ಳಿ | ಹಸಿದವರಿಗೆ ನೆರವಾದ ದಾಸೋಹದ ಧಾನ್ಯ

ಗೌರಮ್ಮ ಭೀ.ಕಟ್ಟಿಮನಿ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಆರಂಭಿಸಿರುವ ಸಹಾಯವಾಣಿಗೆ ನಿತ್ಯ ನೂರಾರು ಜನ ಕರೆ ಮಾಡಿ ಆಹಾರ ಪೂರೈಸುವಂತೆ ಕೋರುತ್ತಿದ್ದಾರೆ. ಇಂಥ ಬೇಡಿಕೆಗಳನ್ನು ಪೂರೈಸಲು ಸಿದ್ಧಾರೂಢ ಸ್ವಾಮಿಯವರ ಟ್ರಸ್ಟ್‌ ಕಮಿಟಿ ಜಿಲ್ಲಾಡಳಿತದ ಜೊತೆ ಕೈಜೋಡಿಸಿ ನಾಲ್ಕು ಸಾವಿರ ಆಹಾರ ಪದಾರ್ಥದ ಕಿಟ್ ವಿತರಿಸಲು ಮುಂದಾಗಿದೆ.

ಒಟ್ಟು 80 ಕ್ವಿಂಟಲ್‌ ಅಕ್ಕಿ, 40 ಕ್ವಿಂಟಲ್‌ ಬೆಲ್ಲ, 40 ಕ್ವಿಂಟಲ್‌ ತೊಗರಿಬೇಳೆ, 40 ಕ್ವಿಂಟಲ್‌ ಉಪ್ಪು, 20 ಕ್ವಿಂಟಲ್‌ ಅಡುಗೆ ಎಣ್ಣೆ, 40 ಕ್ವಿಂಟಲ್‌ ಉಳ್ಳಾಗಡ್ಡೆ, 10 ಕ್ವಿಂಟಲ್‌ ಕಾರದ ಪುಡಿ ಸೇರಿದಂತೆ ಒಟ್ಟು ₹12.20 ಲಕ್ಷ  ಮೌಲ್ಯದ ಪದಾರ್ಥಗಳನ್ನು ಮಠದ ವತಿಯಿಂದ ನೀಡಲಾಗುತ್ತಿದೆ.

‘ಪ್ರತಿ ಕಿಟ್‌ನಲ್ಲೂ 2 ಕೆ.ಜಿ ಅಕ್ಕಿ, 1ಕೆ.ಜಿ ಬೆಲ್ಲ, 1ಕೆ.ಜಿ ತೊಗರಿ ಬೇಳೆ, 1ಕೆ.ಜಿ ಉಪ್ಪು, 1ಕೆ.ಜಿ ಉಳ್ಳಾಗಡ್ಡಿ, ಕಾರದಪುಡಿ ಮತ್ತು ಅರ್ಧ ಕೆ.ಜಿ ಅಡುಗೆ ಎಣ್ಣೆ ಇರುತ್ತದೆ. ಮೊದಲ ಹಂತದಲ್ಲಿ ಗುರುವಾರ ಒಂದು ಸಾವಿರ ಕಿಟ್‌ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ. ಉಳಿದ ಕಿಟ್‌ಗಳನ್ನು ತಯಾರಿಸುವಲ್ಲಿ ಮಠದ ಸಿಬ್ಬಂದಿ ತೊಡಗಿದ್ದಾರೆ. ಜಿಲ್ಲಾಡಳಿತದ ಬೇಡಿಕೆಗೆ ಅನುಗುಣವಾಗಿ ಕಿಟ್‌ಗಳನ್ನು ಪೂರೈಸಲಾಗುವುದು’ ಎಂದು ಕಮಿಟಿಯ ವ್ಯವಸ್ಥಾಪಕ ಈರಣ್ಣ ತುಪ್ಪದ ತಿಳಿಸಿದರು.

‘ಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಪ್ರಧಾನ ನ್ಯಾಯಾಧೀಶ ಈಶಪ್ಪ ಭೂತೆ ಅವರು, ಮಠದಲ್ಲಿರುವ ದಾಸ್ತಾನು ಜಿಲ್ಲಾಡಳಿತದ ಸಹಾಯವಾಣಿಗೆ ಕರೆ ಮಾಡಿ ನೆರವು ಕೋರುವವರಿಗೆ ತಲುಪಿಸಬಹುದು ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ತಿಳಿಸಿದ್ದರು. ಅದರಂತೆ ಇಲಾಖೆಯ ಅಧಿಕಾರಿ ಪುರುಷೋತ್ತಮ ನಾಲ್ಕು ಸಾವಿರ ಜನರಿಗೆ ಕಿಟ್‌ಗಳ ಅಗತ್ಯವಿದೆ ಎಂದು ತಿಳಿಸಿದ್ದರು. ಅದರಂತೆ ಮಠ ಈ ಕಾರ್ಯ ಕೈಗೊಂಡಿದೆ’ ಎಂದರು.

‘ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಠದಲ್ಲಿ ನಡೆಯುತ್ತಿದ್ದ ನಿತ್ಯ ದಾಸೋಹ ನಿಲ್ಲಿಸಲಾಗಿದೆ. ದಾಸೋಹಕ್ಕಾಗಿ ಸಂಗ್ರಹಿಸಿದ ಅಕ್ಕಿ, ತೊಗರಿ ಬೇಳೆ, ಉಪ್ಪು ಮತ್ತು ಬೆಲ್ಲ ಹೆಚ್ಚು ದಿನ ಇಟ್ಟರೆ ಕೆಟ್ಟುಹೋಗುತ್ತಿತ್ತು. ಅದರ ಬದಲು ಹಸಿವಿನಿಂದ ಬಳಲುವವರಿಗೆ ನೀಡಲಾಗುತ್ತಿದೆ. ಇದು ಮಠದ ಅಳಿಲು ಸೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು