ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಕೃಷಿ ಮೇಳ: ಹೆಚ್ಚು ಇಳುವರಿ ನೀಡುವ ಹೊಸ ತಳಿಯ ಕಬ್ಬು

ಸಂಕೇಶ್ವರ ಕೃಷಿ ಸಂಶೋಧನಾ ಕೇಂದ್ರದ ಶೋಧನೆ; ಉತ್ತರ ಕರ್ನಾಟಕದ ರೈತರಿಗೆ ಅನುಕೂಲ
Published 12 ಸೆಪ್ಟೆಂಬರ್ 2023, 5:30 IST
Last Updated 12 ಸೆಪ್ಟೆಂಬರ್ 2023, 5:30 IST
ಅಕ್ಷರ ಗಾತ್ರ

ಧಾರವಾಡ: ಉತ್ತರ ಕರ್ನಾಟಕ ಭಾಗದ ಪ್ರದೇಶಗಳಿಗೆ ಸೂಕ್ತವಾದ ಹಾಗೂ ಹೆಚ್ಚು ಇಳುವರಿ ನೀಡುವ ಎರಡು ಹೊಸ ತಳಿಯ ಕಬ್ಬನ್ನು ಸಂಕೇಶ್ವರದ ಅಖಿಲ ಭಾರತ ಸಮನ್ವಯ ಯೋಜನೆ ಕೃಷಿ ಸಂಶೋಧನಾ ಕೇಂದ್ರ ಸಂಶೋಧಿಸಿದ್ದು, ಕೃಷಿ ಮೇಳದಲ್ಲಿ ರೈತರು ಉತ್ಸುಕತೆಯಿಂದ ಇದರ ಬಗ್ಗೆ ಮಾಹಿತಿ ಪಡೆದರು.

‘ಉತ್ತರ ಕರ್ನಾಟಕ ಭಾಗದ ಒಣಪ್ರದೇಶಗಳಾದ (ವಾರ್ಷಿಕ 700 ಮಿ.ಮೀ ಗಿಂತ ಕಡಿಮೆ ಮಳೆಯಾಗುವ ಪ್ರದೇಶ) ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಬೆಳೆಯಲು CoSnk13374 ಹಾಗೂ ಅರೆಮಲೆನಾಡು ಪ್ರದೇಶಗಳಾದ (ವಾರ್ಷಿಕ 700 ಮಿ.ಮೀ ಗಿಂತ ಹೆಚ್ಚು ಮಳೆಯಾಗುವ ಪ್ರದೇಶ) ಕಾರವಾರ, ಹಾವೇರಿ, ಧಾರವಾಡ ಹಾಗೂ ಬೆಳಗಾವಿಯ ಕೆಲ ಪ್ರದೇಶಗಳಲ್ಲಿ ಬೆಳೆಯಲು  CoSnk13436 ತಳಿಯ ಕಬ್ಬನ್ನು ಪ್ರಾಯೋಗಿಕವಾಗಿ ಬೆಳೆದಿದ್ದು ಯಶಸ್ವಿಯಾಗಿದೆ.

ಈಗಾಗಲೇ ಹುಕ್ಕೇರಿ, ಅಥಣಿ, ನಿಪ್ಪಾಣಿ, ಗೋಕಾಕ್‌, ರಾಯಬಾಗ ಹಾಗೂ ಧಾರವಾಡದ ಆಸಕ್ತ ರೈತರು ಬೀಜಗಳನ್ನು ಖರೀದಿಸಿದ್ದಾರೆ ಎಂದು ಸಂಕೇಶ್ವರ ಸಂಶೋಧನಾ ಕೇಂದ್ರದ ಮುಖ್ಯಸ್ಥ ಹಾಗೂ ಕೃಷಿ ವಿಜ್ಞಾನಿ ಡಾ.ಬಿ.ಅರುಣಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊಯಮತ್ತೂರಿನಿಂದ ಬೀಜಗಳನ್ನು ತಂದು ಪ್ರಾಯೋಗಿಕವಾಗಿ ಸಂಕೇಶ್ವರ ಫಾರ್ಮ್‍ನಲ್ಲಿ ಬೆಳೆಯಲಾಗಿದೆ.  CoSnk13374 ತಳಿಯು ಮಧ್ಯಮಾವಧಿ ತಳಿಯಾಗಿದ್ದು, ಜೂನ್‍ನಿಂದ ಆಗಸ್ಟ್‌ವರೆಗೆ ಹಾಗೂ ಸೆಪ್ಟೆಂಬರ್‌ನಿಂದ ಜನವರಿವರೆಗೆ ನಾಟಿ ಮಾಡಬಹುದು. ಇದು ದಪ್ಪ, ನೇರವಾಗಿ ಬೆಳೆಯುವ, ಕಂದು/ ತಿಳಿಗೆಂಪು ಬಣ್ಣದ ಆಕರ್ಷಕ ಕಾಂಡಗಳನ್ನು ಹೊಂದಿದ್ದು ಇಳುವರಿ ಅತ್ಯುತ್ತಮವಾಗಿದೆ’ ಎಂದರು.

‘CoSnk 13436 ತಳಿಯು ದಪ್ಪ ತಿಳಿ ಹಸಿರು ಬಣ್ಣದ ಕಾಂಡ ಹೊಂದಿದ್ದು, ಉತ್ತಮ ಇಳುವರಿಯೊಂದಿಗೆ ಬರ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದು ಮಧ್ಯಮಾವಧಿ ತಳಿಯಾಗಿದ್ದು ಜೂನ್‍ನಿಂದ ಜನವರಿವರೆಗೆ ನಾಟಿ ಮಾಡಬಹುದು’ ಎಂದು ಮಾಹಿತಿ ನೀಡಿದರು.

‘ಎರಡು ತಳಿಗಳು ಅಧಿಕ ಸಕ್ಕರೆ ಅಂಶ ಹೊಂದಿದ್ದು ಎಕರೆಗೆ 60 ಟನ್ ಹಾಗೂ ಹೆಕ್ಟೇರ್‌ಗೆ 150 ಟನ್ ಇಳುವರಿ ನೀಡುತ್ತದೆ. ಕೀಟಬಾಧೆಯನ್ನು ತಡೆದುಕೊಳ್ಳುತ್ತದೆ, ಹೂವು ಹಾಗೂ ಸುಂಕ ರಹಿತವಾಗಿದ್ದು, ಹೆಚ್ಚು ತೂಕವನ್ನು ಹೊಂದಿರುತ್ತದೆ. ಸಕ್ಕರೆ ಹಾಗೂ ಬೆಲ್ಲ ತಯಾರಿಸಲು ಉಪಯುಕ್ತವಾಗಿದೆ’ ಎಂದು ಹೇಳಿದರು.

ಅಖಿಲ ಭಾರತ ಕಬ್ಬು ಸಮನ್ವಯ ಯೋಜನೆ ಕೃಷಿ ಸಂಶೋಧನ ಕೇಂದ್ರ ಸಂಶೋಧಿಸಿದ ಹೊಸ ತಳಿಯ ಕಬ್ಬನ್ನು ರೈತರು ವೀಕ್ಷಿಸಿದರು
ಅಖಿಲ ಭಾರತ ಕಬ್ಬು ಸಮನ್ವಯ ಯೋಜನೆ ಕೃಷಿ ಸಂಶೋಧನ ಕೇಂದ್ರ ಸಂಶೋಧಿಸಿದ ಹೊಸ ತಳಿಯ ಕಬ್ಬನ್ನು ರೈತರು ವೀಕ್ಷಿಸಿದರು
ಮಾಹಿತಿಗೆ ಕ್ಯುಆರ್ ಕೋಡ್
ಕೃಷಿ ಮೇಳಕ್ಕೆ ಬರುವ ರೈತರಿಗೆ ಕಬ್ಬಿನ ನೂತನ ಬೇಸಾಯ ತಾಂತ್ರಿಕತೆಗಳ ಬಗ್ಗೆ ಹಾಗೂ ಹೊಸ ತಳಿಗಳ ಬಗ್ಗೆ ತಿಳಿದುಕೊಳ್ಳಲು ಕ್ಯುಆರ್ ಕೋಡ್‍ಗಳು ಸಹಕಾರಿಯಾಗಿವೆ. ಸಂಕೇಶ್ವರ ಕೃಷಿ ಸಂಶೋಧನಾ ಕೇಂದ್ರದ ಮಳಿಗೆ ಬಳಿ ಕ್ಯುಆರ್ ಕೋಡ್ ಇಡಲಾಗಿದೆ. ಇದನ್ನು ಸ್ಕ್ಯಾನ್ ಮಾಡಿದದರೆ 14 ಪುಟಗಳ ಪಿಡಿಎಫ್ ಡೌನ್‌ಲೋಡ್ ಆಗುತ್ತದೆ. ಇದರಲ್ಲಿ ವಿವಿಧ ತಳಿಗಳ ರಕ್ಷಣೆ ನಿರ್ವಹಣೆ ಕುರಿತ ಮಾಹಿತಿ  ಹಾಗೂ ಮತ್ತೊಂದರಲ್ಲಿ 5 ಪುಟಗಳ ವಿವಿಧ ಹೊಸ ತಳಿಗಳ ಬೀಜ ಹಂಚಿಕೆ ಕುರಿತ ಮಾಹಿತಿ ಲಭ್ಯವಿದೆ. ಒಂದೇ ಕಡೆ ಎಲ್ಲ ಮಾಹಿತಿ ಲಭ್ಯವಿದ್ದು ರೈತರಿಗೆ ಹೆಚ್ಚು ಉಪಯುಕ್ತವಾಗಿದೆ ಎನ್ನುತ್ತಾರೆ ಡಾ.ಬಿ.ಅರುಣಕುಮಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT