ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚಾರದ ಸಾಹಸ

ಮಳೆಯಿಂದ ಮತ್ತಷ್ಟು ಹದಗೆಟ್ಟ ಹುಬ್ಬಳ್ಳಿ ರಸ್ತೆಗಳು, ವಾಹನ ಚಾಲನೆಯೇ ನಿತ್ಯ ಸವಾಲು
Last Updated 13 ಆಗಸ್ಟ್ 2020, 16:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮೇಲಿಂದ ಮೇಲೆ ಮಳೆ ಬೀಳುತ್ತಿರುವುದರಿಂದ ನಗರದ ಪ್ರಮುಖ ರಸ್ತೆಗಳು ಮತ್ತಷ್ಟು ಹದಗೆಟ್ಟಿವೆ. ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಮಳೆಗಾಲಕ್ಕೂ ಮೊದಲೇ ನಗರದ ಬಹಳಷ್ಟು ರಸ್ತೆಗಳು ಹಾಳಾಗಿದ್ದವು. ಈಗ ಮಳೆಯೂ ಸೇರಿಕೊಂಡು ರಸ್ತೆಯಲ್ಲಿ ಮೊಣಕಾಲದಷ್ಟು ಆಳದ ಗುಂಡಿಗಳು ಬಿದ್ದಿವೆ. ಗುಂಡಿಗಳಲ್ಲಿ ಮಳೆ ನೀರು ನಿಲ್ಲುವುದರಿಂದ ರಸ್ತೆ ಯಾವುದು; ಗುಂಡಿ ಯಾವುದು ಎನ್ನುವುದು ಗುರುತಿಸುವುದೇ ವಾಹನ ಸವಾರರಿಗೆ ಸವಾಲಾಗಿದೆ.

ಗೋಪನಕೊಪ್ಪದಿಂದ ಜೆ.ಕೆ.ಸ್ಕೂಲ್ ಹೋಗುವ ಒಳರಸ್ತೆ, ನ್ಯೂ ಕಾಟನ್‌ ಮಾರುಕಟ್ಟೆ, ಕಿಮ್ಸ್‌ ಹಿಂಭಾಗ, ಕಮರಿಪೇಟೆಯ ದಿವಟೆ ಗಲ್ಲಿ, ದಾಜೀಬಾನ ಪೇಟೆ ರಸ್ತೆ, ಕಾರವಾರ ರಸ್ತೆ, ನೇಕಾರ ನಗರ, ಈಶ್ವರ ನಗರ, ಹಳೇ ಹುಬ್ಬಳ್ಳಿ ಮಾರುಕಟ್ಟೆ, ಪೆಂಡಾರಗಲ್ಲಿ, ರವಿನಗರ, ಶಿರೂರು ಪಾರ್ಕ್‌ನಿಂದ ಹೊಸ ಕೋರ್ಟ್‌ ತನಕ ಬರುವ ರಸ್ತೆ ಹೀಗೆ ನಗರದ ಪ್ರಮುಖ ಮಾರ್ಗಗಳಲ್ಲಿ ರಸ್ತೆಗಳಿಗಿಂತ ಹೆಚ್ಚಾಗಿ ಗುಂಡಿಗಳೇ ಎದ್ದು ಕಾಣುತ್ತಿವೆ.

ರಸ್ತೆಗಳ ಅವ್ಯವಸ್ಥೆಗಳ ಜೊತೆಗೆ ಸರ್ಕಾರದ ವಿವಿಧ ಇಲಾಖೆಗಳು ಕಾಮಗಾರಿಗಾಗಿ ನೆಲ ಅಗೆದಿರುವುದು ಸವಾರರ ಸಮಸ್ಯೆ ಹೆಚ್ಚಿಸಿದೆ. ನೆಲ ಅಗೆದ ಮಣ್ಣು ರಸ್ತೆ ತುಂಬೆಲ್ಲಾ ಹರಡಿ ರಸ್ತೆಪೂರ್ತಿ ಕೆಸರುಮಯವಾಗುತ್ತಿದೆ. ಬಹಳಷ್ಟು ಮುಖ್ಯರಸ್ತೆಗಳಲ್ಲಿಯೇ ಗುಂಡಿಗಳು ಬಿದ್ದಿದ್ದು, ಇನ್ನು ಒಳ ರಸ್ತೆಗಳ ಪಾಡು ಹೇಳತೀರದಂತಾಗಿದೆ.

ಹೊಸೂರಿನ ಹೊಸ ಬಸ್‌ ನಿಲ್ದಾಣದಿಂದ ಶಕುಂತಲಾ ಆಸ್ಪತ್ರೆ ಮುಂಭಾಗವಾಗಿ ಹೊಸೂರು ವೃತ್ತದ ಮಾರ್ಗವಾಗಿ ಬೇರೆ ಬೇರೆ ಊರುಗಳಿಗೆ ಬಸ್‌ಗಳು ತೆರಳುತ್ತವೆ. ಕಿರಿದಾದ ಈ ಮಾರ್ಗದಲ್ಲಿ ಖಾಸಗಿ ವಾಹನಗಳ ಸಂಚಾರವೂ ಹೆಚ್ಚು. ಇದರಿಂದ ನಿತ್ಯ ಸಂಚಾರ ದಟ್ಟಣೆ ಈ ರಸ್ತೆಯಲ್ಲಿ ಸಹಜ ಎನ್ನುವಂತಾಗಿದೆ ಎನ್ನುತ್ತಾರೆ ಸವಾರರು.

ದಾಜೀಬಾನಪೇಟೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಗಣಪತಿ ಹೆಗಡೆ ಅವರನ್ನು ಈ ಕುರಿತು ಮಾತನಾಡಿಸಿದಾಗ ’ಮಳೆಗಾಲ ಬಂದಾಗ ಹುಬ್ಬಳ್ಳಿಯಲ್ಲಿ ರಸ್ತೆಗಳ ಅವ್ಯವಸ್ಥೆ ಸಹಜ ಎನ್ನುವಂತಾಗಿದೆ. ಈಗ ನಿರಂತರ ಮಳೆ ಬರುತ್ತಿರುವ ಕಾರಣ ರಸ್ತೆ ಯಾವುದು, ಗುಂಡಿ ಯಾವುದು ಎನ್ನುವುದೇ ಗೊತ್ತಾಗುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಹೊಸೂರು ಬಸ್‌ ನಿಲ್ದಾಣದ ಹಿಂಭಾಗದ ಪೆಟ್ರೋಲ್‌ ಬಂಕ್‌ ಬಳಿಯಿದ್ದ ವಿದ್ಯಾನಗರದ ರಘುವೀರ ಮಿರ್ಜಿ ’ಗುಣಮಟ್ಟದ ರಸ್ತೆಗಳನ್ನು ನಿರ್ಮಿಸದ ಕಾರಣ ಪ್ರತಿ ವರ್ಷ ಇದೇ ಸಮಸ್ಯೆ ಎದುರಾಗುತ್ತದೆ. ಮಹಾನಗರ ಪಾಲಿಕೆಗೆ ತೆರಿಗೆ ತುಂಬಿದರೂ ನಮಗೆ ಉತ್ತಮ ರಸ್ತೆಗಳ ಭಾಗ್ಯವಿಲ್ಲ. ರಾಜಕಾರಣಿಗಳು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT