ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ಆಐ ಕೋಟಾ, ಶುಲ್ಕ ಹೆಚ್ಚಳಕ್ಕೆ ವಿರೋಧ

7
ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಕಿಮ್ಸ್‌ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ಆಐ ಕೋಟಾ, ಶುಲ್ಕ ಹೆಚ್ಚಳಕ್ಕೆ ವಿರೋಧ

Published:
Updated:
Prajavani

ಹುಬ್ಬಳ್ಳಿ: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ (ಅನಿವಾಸಿ ಭಾರತೀಯರ) ಕೋಟಾ ಜಾರಿಗೆ ತರುವ ಪ್ರಸ್ತಾವ  ಹಾಗೂ ಶುಲ್ಕ ಹೆಚ್ಚಳದ ವಿರುದ್ಧ ಶುಕ್ರವಾರ ನಗರದಲ್ಲಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯ (ಎಐಡಿಎಸ್‌ಒ) ನೇತೃತ್ವದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಡಾ. ಎನ್. ಪ್ರಮೋದ್ ಮಾತನಾಡಿ, ‘ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ ಜಾರಿಗೆ ತರುವ ಪ್ರಸ್ತಾವವನ್ನು ಹಿಂದಿನ ವೈದ್ಯಕೀಯ ಶಿಕ್ಷಣ ಸಚಿವರು ಸದನದಲ್ಲಿ ಮಾಡಿದ್ದಾರೆ. ಸರ್ಕಾರದ ಈ ನಿಲುವು ವೈದ್ಯರಲ್ಲಿ, ವಿದ್ಯಾರ್ಥಿ, ಪೋಷಕರು, ಹಾಗೂ ಜನಸಾಮಾನ್ಯರಲ್ಲಿ ದೊಡ್ಡ ಆಘಾತ ಮೂಡಿಸಿದೆ. ರಾಜ್ಯ ಸರ್ಕಾರ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ 10ರಷ್ಟು ಎನ್.ಆರ್.ಐ ಕೋಟಾ ಜಾರಿಗೆ ತಂದಿದ್ದೇ ಆದರೆ, ಸಹಜ ನ್ಯಾಯಕ್ಕೆ ವಿರುದ್ಧವಾದ ನಡೆಯಾಗುತ್ತದೆ’ ಎಂದರು.

‘ಈಗಾಗಲೇ ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣ ಕೈಗೆಟುಕದಷ್ಟು ದುಬಾರಿಯಾಗಿರುವಾಗ, ಬಡ ವಿದ್ಯಾರ್ಥಿಗಳಿಗೆ ಇದ್ದ ಏಕೈಕ ಆಸರೆಯೆಂದರೆ, ಸರ್ಕಾರಿ ವೈದ್ಯಕೀಯ ಕಾಲೇಜುಗಳು. ಸರ್ಕಾರಿ ಕಾಲೇಜುಗಳಲ್ಲಿ ಓದಿದ ಎಷ್ಟೋ ಬಡ ವಿದ್ಯಾರ್ಥಿಗಳು ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ನೀಡುವ ಕಾಳಜಿ ತೋರುತ್ತಿದ್ದರು. ಇನ್ನು ಬರುವ ದಿನಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ ಜಾರಿಯಾದರೆ, ಸೀಟುಗಳು ಕಡಿತವಾಗುತ್ತಾ ಹೋಗಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪದವಿ ಹಾಗೂ ಸ್ನಾತಕೋತ್ತರ ಕೋರ್ಸುಗಳ ಶುಲ್ಕವನ್ನು ಶೇ 300ರಿಂದ 600ರಷ್ಟು ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರ ಪ್ರಸ್ತಾಪ ಮಾಡಿದೆ. ಪದವಿ ಕೋರ್ಸುಗಳ ಶುಲ್ಕ ₹ 17 ಸಾವಿರದಿಂದ ₹ 50 ಸಾವಿರಕ್ಕೆ ಏರಿಸಲಾಗಿದೆ. ಸ್ನಾತಕೋತ್ತರ ಕೋರ್ಸುಗಳ ಶುಲ್ಕಗಳನ್ನು ₹ 40 ಸಾವಿರದಿಂದ ₹ 3.5 ಲಕ್ಷಕ್ಕೆ ಏರಿಸುವ ಪ್ರಸ್ತಾಪವಿದೆ. ಈ ಮೂಲಕ ರಾಜ್ಯ ಸರ್ಕಾರ ಇನ್ನೊಂದು ಆಘಾತವನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡಿದೆ. ಬೆಲೆ ಏರಿಕೆ, ಬರ ಮುಂತಾದ ಸಮಸ್ಯೆಗಳಿಂದ ಜನತೆ ತತ್ತರಿಸುತ್ತಿರುವಾಗ, ಶುಲ್ಕ ಕಡಿಮೆ ಮಾಡುವ ಬದಲು, 5–6 ಪಟ್ಟು ಹೆಚ್ಚಿಸಿರುವುದು ಅತ್ಯಂತ ನೋವಿನ ವಿಚಾರ ಎಂದು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಟೀಕಿಸಿದರು.

ಕಿಮ್ಸ್‌ ವೈದ್ಯಕೀಯ ಕಾಲೇಜಿನಿಂದ ತಹಶೀಲ್ದಾರ್‌ ಕಚೇರಿವರೆಗೆ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ತಹಶೀಲ್ದಾರ್‌ ಮೂಲಕ ವೈದ್ಯಕೀಯ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಮುಖಂಡರಾದ ಮಹಾಂತೇಶ ಬಿಳೂರ, ಕಿರಣ ಮಾಳಗಿ, ಶಶಿಕಲಾ ಮೇಟಿ, ಸಿಂಧು ಕೌದಿ, ರಣಜಿತ್ ಧೂಪದ, ವಿದ್ಯಾರ್ಥಿಗಳಾದ ಅನಂತ ಗುರುರಾಜ, ವಿನೋದ ಅಂಗಡಿ, ಕಾವ್ಯಾ, ಭರತ್ ಹಾಗೂ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !