ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮುಂದಿಟ್ಟ ಕಾರು ಕದ್ದ ಖದೀಮರು

ಅವಳಿ ನಗರಗಳಲ್ಲಿ ಹೆಚ್ಚುತ್ತಿರುವ ವಾಹನ ಕಳ್ಳರ ಹಾವಳಿ
Last Updated 27 ಅಕ್ಟೋಬರ್ 2020, 4:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರಗಳಲ್ಲಿ ಮನೆ ಮುಂದಿಟ್ಟ ದ್ವಿಚಕ್ರವಾಹನ ಮತ್ತು ಕಾರುಗಳನ್ನು ಕಳ್ಳತನ ಮಾಡುವ ಹಾವಳಿ ಮುಂದುವರಿದಿದೆ. ಕಳೆದ ವಾರ ಕೂಡ ವಾಹನಗಳು ಕಳವಾದ ಬಗ್ಗೆ ಅನೇಕ ದೂರುಗಳು ದಾಖಲಾಗಿವೆ.

ಲಿಂಗರಾಜ ನಗರದ ಸಮುದಾಯ ಭವನದ ಸಮೀಪದಲ್ಲಿರುವ ‘ಗುರುಕೃಪಾ’ ಮನೆಯ ಮುಂದೆ ಕಾರು ನಿಲ್ಲಿಸಿದ್ದ ಅಶೋಕ ಬಂಗಾರಶೆಟ್ಟರ ಅವರ ಟೊಯೊಟೊ ಇನ್ನೊವಾ ಕಾರನ್ನು ಕಳ್ಳತನ ಮಾಡಲಾಗಿದೆ. ಇದು ₹18 ಲಕ್ಷ ಮೌಲ್ಯ ಒಳಗೊಂಡಿದೆ ಎಂದು ಅಶೋಕ ಅವರು ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಂಧನ: ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಒಬ್ಬ ಆರೋಪಿಯನ್ನು ಬಂಧಿಸಿರುವ ಕೇಶ್ವಾಪುರ ಠಾಣೆಯ ಪೊಲೀಸರು ನಾಲ್ಕು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಧಾರವಾಡದ ವಿದ್ಯಾಗಿರಿಯ 19 ವರ್ಷದ ಅಪ್ಪಯ್ಯ ಬೆಂಡಿಗೇರಿ ಮಠ ಬಂಧಿತ.

ಹುಬ್ಬಳ್ಳಿ ಉಪನಗರ ಠಾಣೆ ವ್ಯಾಪ್ತಿಯ ರೇವಣಕರ್‌ ಕಾಂಪ್ಲೆಕ್ಸ್‌ ಮುಂದೆ ನಿಲ್ಲಿಸಲಾಗಿದ್ದ ಬೈಕ್‌ಗಳನ್ನು ಕಳ್ಳತನ ಮಾಡಿದ್ದ ಹಳೇ ಹುಬ್ಬಳ್ಳಿಯ ಸಹದೇವ ನಗರದ 32 ವರ್ಷದ ವಿಜಯ ಅಣ್ಣಿಗೇರಿ ಎಂಬಾತನನ್ನು ಬಂಧಿಸಲಾಗಿದೆ. ಈತನಿಂದ ₹2.35 ಲಕ್ಷ ಮೌಲ್ಯದ ಐದು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೈಕ್‌ ಕಳ್ಳತನ ಮಾಡಿದ ಬಗ್ಗೆ ವಿಜಯ ವಿರುದ್ಧ ಉಪನಗರ ಠಾಣೆ, ಲೋಕಾಪುರ, ಹಳೇ ಹುಬ್ಬಳ್ಳಿ, ವಿದ್ಯಾಗಿರಿ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜನತಾ ಬಜಾರ್‌ನ ಪೈ ಅಡಿಕೆ ಅಂಗಡಿಯಲ್ಲಿ ಕಳ್ಳತನ ಮಾಡಿದ ಆರೋಪವೂ ಇತನ ಮೇಲಿದೆ. ಕಳ್ಳತನ ಮಾಡಿದ ಹಣದ ಪೈಕಿ ₹5,200 ವಶಪಡಿಸಿಕೊಳ್ಳಲಾಗಿದೆ.

₹1.48 ಲಕ್ಷ ವಂಚನೆ: ಫೇಸ್‌ಬುಕ್‌ನಲ್ಲಿ ‘ಮಿಲಿಟರಿ ಟ್ರಾನ್ಸ್‌ಪೋರ್ಟ್‌ ಸರ್ವಿಸ್‌’ ಹೆಸರಿನಲ್ಲಿ ಜಾಹೀರಾತು ನೀಡಿ, ಕಾರು ಮಾರಾಟದ ನೆಪದಲ್ಲಿ ಹೇಮಂತ ಕೆ. ಕುಲಕರ್ಣಿ ಎಂಬುವರಿಗೆ ಆನ್‌ಲೈನ್ ಮೂಲಕ ₹1.48 ಲಕ್ಷ ವಂಚಿಸಲಾಗಿದೆ.

ಸಚಿನ್‌ ಸಿಂಗ್ ಬಲಿಯಾನ ಎಂಬಾತ ₹1.10ಲಕ್ಷಕ್ಕೆ ಕಾರು ಮಾರಾಟಕ್ಕಿದೆ ಎಂದು ಹೇಮಂತ್‌ ಅವರಿಗೆ ನಂಬಿಸಿ, ಹಂತಹಂತವಾಗಿ ಹಣ ಪಡೆದುಕೊಂಡಿದ್ದಾನೆ. ಸಚಿನ್‌ ತನ್ನನ್ನು ‘ಇಂಡಿಯನ್‌ ಆರ್ಮಿ ಮ್ಯಾನ್‌’ ಎಂತಲೂ ಹೇಳಿಕೊಂಡಿದ್ದ. ಹೇಮಂತ್‌ ಅವರಿಂದ ಹಣ ಪಡೆದು, ಕಾರನ್ನೂ ಕೊಡದೆ ಮೋಸ ಮಾಡಿದ್ದಾನೆ ಎಂದು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು: ಬನಶಂಕರಿ ಬಡಾವಣೆಯ ಬನಶಂಕರಿ ದೇವಸ್ಥಾನಕ್ಕೆ ಹೊರಟಿದ್ದ ಮಹಿಳೆಯ ಚಿನ್ನದ ಮಾಂಗಲ್ಯಸರವನ್ನು ಲಿಂಗರಾಜ ನಗರದ ಜೆ.ಕೆ. ರಿಟೇಲ್‌ ಮಾರ್ಟ್‌ ಬಳಿ ಕೊರಳಿನಿಂದ ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಂಡ: ಸಂಚಾರ ನಿಯಮ ಉಲ್ಲಂಘನೆ ಮಾಡಿದ 181 ಸವಾರರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದ್ದು, ₹86,700 ದಂಡ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT