ಹುಬ್ಬಳ್ಳಿ: ಕಿವಿಗಡಚಿಕ್ಕುವ ಕಹಳೆ ವಾದನ, ಗುಂಪು ಗುಂಪಾಗಿ ಸೇರಿದ ಜನ, ಕಂಬಗಳ ತುದಿಯಲ್ಲಿ ಹಾರುತ್ತಿರುವ ಪತಾಕೆಗಳು ರಸ್ತೆಯಲ್ಲಿ ಹೋಗುತ್ತಿರುವವರನ್ನು ಸೆಳೆಯುತ್ತಿತ್ತು.
ಈ ದೃಶ್ಯ ಕಂಡುಬಂದಿದ್ದು ಇಲ್ಲಿನ ಉಣಕಲ್ ಕೆರೆ ಪಕ್ಕದ ಬಯಲು ಪ್ರದೇಶದಲ್ಲಿ. ಭಾನುವಾರ ಇಳಿಸಂಜೆಯಲ್ಲಿ ಅಲ್ಲಿ ಉಣಕಲ್ ಸಿದ್ಧಪ್ಪಜ್ಜನ ಜಾತ್ರೆಯ ಅಂಗವಾಗಿ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.
8–10 ವರ್ಷದ ಬಾಲಕರಿಂದ ಹಿಡಿದು ಹಿರಿಯರ ಕುಸ್ತಿ ಪಂದ್ಯಾವಳಿಯೂ ನಡೆಯಿತು. ಬಾಲಕಿಯರೂ ತಾವೂ ಯಾರಿಗೂ ಕಮ್ಮಿ ಇಲ್ಲ ಎಂದು ಮಣ್ಣಿನ ಅಖಾಡಕ್ಕಿಳಿದು ತೊಡೆ ತಟ್ಟಿದರು.
ಜಮಖಂಡಿ, ಮುಧೋಳ, ಗದಗ ಸೇರಿದಂತೆ ವಿವಿಧೆಡೆಗಳಿಂದ ಬಂದ ಮರಿ ಪೈಲ್ವಾನರು ಸೋಲನ್ನೇ ಸೋಲಿಸುವವರಂತೆ ಪಟ್ಟು ಹಾಕಿ ಎದುರಾಳಿ ಪೈಲ್ವಾನರನ್ನು ಧರಾಶಾಹಿಯನ್ನಾಗಿ ಮಾಡುತ್ತಿದ್ದರು. ಸುತ್ತಲೂ ನೆರೆದಿದ್ದ ನೂರಾರು ಪ್ರೇಕ್ಷಕರುಚಪ್ಪಾಳೆ, ಶಿಳ್ಳೆ ಹಾಕಿ ಪೈಲ್ವಾನರನ್ನು ಪ್ರೋತ್ಸಾಹಿಸುತ್ತಿದ್ದರು. ತಮ್ಮ ನೆಚ್ಚಿನ ಪೈಲ್ವಾನರ ಮೇಲೆ ಬಾಜಿ ಕಟ್ಟುತ್ತಿದ್ದರು.
ಧಾರ್ಮಿಕ ಕಾರ್ಯಕ್ರಮ: ಜಾತ್ರೆಯ ಮುಕ್ತಾಯದ ಭಾಗವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಕಳಸ ಇಳಿಸುವ ಕಾರ್ಯಕ್ರಮ ಜರುಗಿತು. ನಂತರ ಗ್ರಾಮದ ಹಿರಿಯರನ್ನು ಸನ್ಮಾನಿಸಲಾಯಿತು. ರಾತ್ರಿ ಮಹಾಪ್ರಸಾದ ವಿತರಿಸಲಾಯಿತು. ಕೊನೆಯ ಘಟ್ಟವಾಗಿ ಭಜನಾ ಸ್ಪರ್ಧೆ ನಡೆಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.