ಮಂಗಳವಾರ, ಜನವರಿ 31, 2023
27 °C

ಸ್ವಗ್ರಾಮ ಫೆಲೋಶಿಪ್‌ಗೆ ಅರ್ಜಿ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ನಮ್ಮ ಗ್ರಾಮ–ನಮ್ಮ ಹೆಮ್ಮೆ ಎಂಬ ಧ್ಯೇಯದೊಂದಿಗೆ ಸ್ವಗ್ರಾಮ ಫೆಲೋಶಿಪ್‌ಗಾಗಿ ಆಸಕ್ತ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಸವರಾಜ ಲಕ್ಕಣ್ಣವರ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗದುಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಬೆಂಗಳೂರಿನ ಯೂತ್ ಫಾರ್ ಸೇವಾ, ಚಾಣಕ್ಯ ವಿಶ್ವವಿದ್ಯಾಲಯ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಅಬ್ದುಲ್ ನಜೀರ್ ಸಾಬ್ ಅಧ್ಯಯನ ಪೀಠ, ಪ್ರಜ್ಞಾ ಪ್ರವಾಹದ ಸಹಯೋಗದಲ್ಲಿ ‘ಸ್ವಗ್ರಾಮ ಫೆಲೋಶಿಪ್’ ನೀಡಲಾಗುತ್ತದೆ’ ಎಂದು ತಿಳಿಸಿದರು.

‘ಮೂರು ವರ್ಷದ ಗುಂಪು ಮಾದರಿಯ ಫೆಲೋಶಿಪ್ ಇದಾಗಿದ್ದು, ಸ್ವಗ್ರಾಮದ ಯುವಕ-ಯುವತಿ, ಅದೇ ಗ್ರಾಮದ ಬೇರೆಡೆ ಇರುವ ಮತ್ತೊಬ್ಬ ವ್ಯಕ್ತಿಯನ್ನು ಈ ಫೆಲೋಶಿಪ್ ಒಳಗೊಂಡಿದೆ. ನಿಶ್ಚಿತ ಠೇವಣಿ ₹ 50 ಸಾವಿರವನ್ನು ಮುಂಗಡವಾಗಿ ನೀಡಲಾಗುತ್ತದೆ. ಪ್ರತಿ ತಿಂಗಳು ಇಬ್ಬರಿಗೂ ₹5 ಸಾವಿರ ನೀಡಲಾಗುವುದು. ಗ್ರಾಮ ವಿಕಾಸ ಕುರಿತ ಮಾದರಿಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು’ ಎಂದರು.

‘ನ.2ರಂದು ಲೋಕಾರ್ಪಣೆಗೊಂಡ ಫೆಲೋಶಿಪ್‌ಗೆ ಪ್ರತಿ ಜಿಲ್ಲೆಯಲ್ಲಿ 3 ಗ್ರಾಮಗಳಂತೆ ರಾಜ್ಯದ 75 ಗ್ರಾಮಗಳನ್ನು ಆಯ್ಕೆ ಮಾಡಲಾಗುತ್ತಿದೆ. ಈಗಾಗಲೇ 400 ಅರ್ಜಿಗಳು ಬಂದಿದ್ದು, ಡಿ.15ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸ್ವ-ಉದ್ಯೋಗ ಮಾಡುತ್ತ ತಮ್ಮ ಗ್ರಾಮದ ವಿಕಾಸಕ್ಕೆ ತೊಡಗಿಸಿಕೊಳ್ಳಬಯಸುವವರು ಮತ್ತು ಈಗಾಗಲೇ ತೊಡಗಿಕೊಂಡವರು, ಗ್ರಾಮದಿಂದ ಹೊರಗಿದ್ದವರು ಗ್ರಾಮಕ್ಕೆ ಕೊಡುಗೆ ಕೊಡಬೇಕೆಂಬ ತುಡಿತವಿದ್ದರೆ ಅರ್ಜಿ ಸಲ್ಲಿಸಬಹುದು’ ಎಂದು ವಿವರಿಸಿದರು.

‘ಡಿ.30ರಂದು ಸಂದರ್ಶನ ನಡೆಯಲಿದ್ದು, 2023, ಜನವರಿ 20ರಿಂದ ಮೊದಲ ಹಂತದಲ್ಲಿ ಆಯ್ಕೆಯಾದ ತಂಡದ ಅಭ್ಯರ್ಥಿಗಳಿಗೆ 9 ದಿನ ತರಬೇತಿ ನೀಡಲಾಗುತ್ತದೆ. ಜ.31ರಂದು ಗ್ರಾಮಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ, ಚಟುವಟಿಕೆಗಳ ಕಾರ್ಯಾರಂಭ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.ಸಂ–9206808889, 8050501377 ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು https://ksrdpru.ac.in/page_kannadda.aspx?id=73 ವಿವಿಯ ವೆಬ್‌ಸೈಟ್‌ ಸಂಪರ್ಕಿಸಬಹುದು’ ಎಂದರು.

ಡಾ.ಪ್ರಕಾಶ ಭಟ್, ವೀಣಾ ಅಟವಾಲೆ, ಲಿಂಗರಾಜ್ ನಿಡುವಣಿ, ಅಭಿಷೇಕ ಎಚ್.ಈ, ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.