ಸೋಮವಾರ, ಜೂನ್ 21, 2021
30 °C

ಉತ್ತರ ಪ್ರದೇಶದ ನಾಲ್ವರ ಮೇಲೆ ಹಲ್ಲೆ; 12 ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹುಬ್ಬಳ್ಳಿ: ಉತ್ತರ ಪ್ರದೇಶದ ನಾಲ್ಕು ಯುವಕರ ಮೇಲೆ ಮಂಗಳವಾರ ತಡರಾತ್ರಿ ಹಲ್ಲೆ ನಡೆಸಿದ್ದ ನಗರದ 12 ಆರೋಪಿಗಳನ್ನು ಬುಧವಾರ ಕಸಬಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸೆಟ್ಲಮೆಂಟ್‌ ಮತ್ತು ವೀರಾಪುರ ಓಣಿ ನಿವಾಸಿಗಳಾದ ಶಶಿ, ಭೀಮಸಿ, ರಾಜನಗೌಡ, ವಿಜಯ, ನಾಗರಾಜ, ಕಾರ್ತಿಕ, ಮಂಜು, ಬಸು, ರಾಜು, ಇಮಾಮಸಾಬ್‌ ಮುಬಾರಕ, ಇಮ್ತಿಯಾಜ್‌, ಇಸ್ಮಾಯಿಲ್‌ ಬಂಧಿತ ಆರೋಪಿಗಳು.

ಬಂಕಾಪುರ ಚೌಕಿಯ ಆರ್‌.ಕೆ. ಪ್ಲಾಸ್ಟಿಕ್‌ ಫ್ಯಾಕ್ಟರಿಯೊಂದರಲ್ಲಿ ಅನಿಲ ಸಿಂಗ್‌ ಕೆಲಸ ಮಾಡುತ್ತಿದ್ದರು. ಮಂಗಳವಾರ ತಡರಾತ್ರಿ 1.30ರ ವೇಳೆ ಮೂತ್ರ ವಿಸರ್ಜನೆಗೆಂದು ಹೊರಗೆ ಬಂದಿದ್ದರು. ಆ ವೇಳೆ ಬೈಕ್‌ ಮೇಲೆ ಹೋಗುತ್ತಿದ್ದ ಮೂವರು ಯುವಕರು, ಅಲ್ಲಿ ಕಚೇರಿಯಿದ್ದು, ಮೂತ್ರ ವಿಸರ್ಜನೆ ಮಾಡಬೇಡ ಎಂದಿದ್ದರು. ಇದರಿಂದ ಮಾತಿಗೆ ಮಾತು ಬೆಳೆದಾಗ ಕೋಪಗೊಂಡ ಯುವಕರು ಅನಿಲ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಲಾಟೆ ಕೇಳಿ ಅನಿಲನ ಸ್ನೇಹಿತರಾದ ಆಶಾರಾಮ ಶಿವನಾರಾಯಣ, ವಿಜಯಲಾಲಕುಮಾರ ಮತ್ತು ಬೋಲಕುಮಾರ ಅವರು ಸ್ಥಳಕ್ಕೆ ಬಂದಿದ್ದರು. ಆಗ ಬೈಕ್‌ ಮೇಲೆ ಬಂದ ಮತ್ತಷ್ಟು ಮಂದಿ ಏಕಾಏಕಿ ನಾಲ್ವರ ಮೇಲೆ ಬಡಿಗೆ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಪ್ರಕರಣ ಕಸಬಾ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು.

ಅನಿಲ ಸಿಂಗ್‌ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರೆ, ಆಶಾರಾಮ ಅವರ ಕೈ ಹಾಗೂ ಕಾಲಿಗೆ ಪೆಟ್ಟಾಗಿವೆ. ಉಳಿದ ಇಬ್ಬರಿಗೂ ಗಾಯಗಳಾಗಿದ್ದು ಕಿಮ್ಸ್‌ಗೆ ದಾಖಲಿಸಲಾಗಿದೆ.

ಶವ ಪತ್ತೆ: ಇಲ್ಲಿನ ಸಂತೋಷನಗರ ಕೆರೆಯಲ್ಲಿ ಎಮ್ಮೆ ಮೈತೊಳೆಯಲು ತೆರಳಿದ್ದಾಗ ಮುಳುಗಿ ಮೃತಪಟ್ಟಿದ್ದ ದೇಶಪಾಂಡೆ ನಗರದ ವಿಠ್ಠಲ ಜಾನುಬಸು(23) ಅವರ ಶವ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ.

ಮಂಗಳವಾರ ಮಧ್ಯಾಹ್ನ ಎಮ್ಮೆ ಮೈತೊಳೆಯುವಾಗ ವಿಠ್ಠಲ ನೀರಲ್ಲಿ ಆಯತಪ್ಪಿ ಬಿದ್ದಿದ್ದರು. ಸ್ಥಳೀಯ ಯುವಕರು ಅವರ ರಕ್ಷಣೆಗೆ ಮುಂದಾಗುವಷ್ಟರಲ್ಲಿ ಮುಳುಗಿದ್ದರು. ಅಗ್ನಿಶಾಮಕ ಹಾಗೂ ಪೊಲೀಸ್‌ ಸಿಬ್ಬಂದಿ ಕತ್ತಲಾಗುವವರೆಗೆ ಕಾರ್ಯಾಚರಣೆ ನಡೆಸಿ ವಾಪಸ್ಸಾಗಿದ್ದರು. ಬುಧವಾರ ಬೆಳಿಗ್ಗೆ ಜಂಟಿ ಕಾರ್ಯಾಚರಣೆ ನಡೆಸಿ, ಶವ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಿಮ್ಸ್‌ ಶವಾಗಾರಕ್ಕೆ ಶವ ಸಾಗಿಸಿ, ಪರೀಕ್ಷೆ ನಡೆಸಲಾಯಿತು. ನಂತರ ಕುಟುಂಬದ ವಾರಸುದಾರರಿಗೆ ಪೊಲೀಸರು ಶವವನ್ನು ಹಸ್ತಾಂತರಿಸಿದರು.

13 ಪ್ರಕರಣ ದಾಖಲು: ಮಂಗಳವಾರ ರಾತ್ರಿ ನೂತನ ವರ್ಷಾರಂಭದ ವೇಳೆ ಹುಬ್ಬಳ್ಳಿ ನಗರದಲ್ಲಿ ಕುಡಿದು ವಾಹನ ಚಲಾಯಿಸಿದ 13 ಮಂದಿ ವಿರುದ್ಧ ಸಂಚಾರ ಪೊಲೀಸರು ದೂರು ದಾಖಲಿಸಿದ್ದಾರೆ.

ಉತ್ತರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮೂರು ಪ್ರಕರಣಗಳು ಹಾಗೂ ಪೂರ್ವ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 10 ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಸಂಚಾರ ಪೊಲೀಸ್‌ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ಜೀವ ಬೆದರಿಕೆ: ‘ನಾನು ಮದುವೆಯಾಗುವ ಹುಡುಗಿಯ ಮೊಬೈಲ್‌ನಲ್ಲಿ ನಿನ್ನ ಫೋಟೊ ಏಕಿದೆ’ ಎಂದು ಪ್ರಶ್ನಿಸಿ ಡೆನಿಸ್‌ ಬೆಂಗಳೂರು ಎಂಬಾತ ಪ್ರಿನ್ಸ್‌ ಹಿರೇಕೆರೂರು ಎಂಬುವವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಕ್ರಿಶ್ಚಿಯನ್‌ ಕಾಲೊನಿಯ ಬಿಸಿಎಂ ಹಾಸ್ಟೆಲ್‌ ಬಳಿ ಪ್ರಿನ್ಸ್‌ ಅವರು ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಹೋಗುತ್ತಿರುವಾಗ, ಡೆನಿಸ್‌ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ನಂತರ, ‘ನಾನು ಮದುವೆ ಆಗಲಿರುವ ಹುಡುಗಿಯ ಮೊಬೈಲ್‌ನಲ್ಲಿ ನಿನ್ನ ಫೋಟೊ ಏಕಿದೆ’ ಎಂದು ತಂಟೆ ತೆಗೆದಿದ್ದಾರೆ. ನಂತರ ಸಿಗರೇಟಿನ ಹೊಗೆಯನ್ನು ಪ್ರಿನ್ಸ್‌ ಅವರ ಮುಖಕ್ಕೆ ಬಿಡುತ್ತಾ ಮೂಗಿನ ಮೇಲೆ ಬಲವಾಗಿ ಹೊಡೆದು, ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ದೂರು ದಾಖಲಾಗಿದೆ.

ಲ್ಯಾಪ್‌ಟಾಪ್‌ ಕಳವು: ಚಂಡಿಘಡದಿಂದ ಯಶವಂತಪುರಕ್ಕೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ಸಂಚರಿಸುತ್ತಿದ್ದ ಮೇಘಾಲಯದ ಟೆಕ್ಕಿ ಮೋಹಿತ್‌ ಗುಪ್ತಾ ಅವರ ಲ್ಯಾಪ್‌ಟಾಪ್‌, ಮೊಬೈಲ್‌, ನಗದು ಹಣ ಸೇರಿದಂತೆ ಒಟ್ಟು ₹49,400 ಮೌಲ್ಯದ ವಸ್ತುಗಳು ಕಳುವಾಗಿವೆ.

ಮೋಹಿತ್‌ ಅವರು ಡಿ. 28ರಂದು ಚಂಡಿಘಡದಿಂದ ಹೊರಟಿದ್ದರು. ಡಿ.31ರಂದು ರಾತ್ರಿ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ರೈಲು ಬಂದಾಗ ಲ್ಯಾಪ್‌ಟಾಪ್‌, ಮೊಬೈಲ್‌, ಗುರುತು ಪತ್ರಗಳು, ₹12,500 ನಗದು ಕಳವು ಆಗಿರುವುದು ಕಂಡು ಬಂದಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು