ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಿದಾರನ ಕೊಲೆಗೆ ಯತ್ನ

ಬೈಕ್ ಅಡ್ಡಗಟ್ಟಿ ಉದ್ಯಮಿಗೆ ಚಾಕುವಿನಿಂದ ಇರಿದ ಆರೋಪಿ
Last Updated 22 ಫೆಬ್ರುವರಿ 2021, 5:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನ್ಯಾಯಾಲದಲ್ಲಿರುವ ಪ್ರಕರಣವೊಂದರ ಸಾಕ್ಷಿಯೊಬ್ಬರಿಗೆ, ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಕಲ್ಮೇಶ್ವರ ನಗರದಲ್ಲಿ ನಡೆದಿದೆ.

ನೇಕಾರ ನಗರದ ಉದ್ಯಮಿ ಯುವರಾಜ ಕಲಾಲ ಹಲ್ಲೆಗೊಳಗಾದವರು. ಹಳೇ ಹುಬ್ಬಳ್ಳಿಯ ಇಮ್ರಾನ್‌ ಮನಿಯಾರ್‌ ಚಾಕು ಇರಿದು ಕೊಲೆಗೆ ಯತ್ನಿಸಿದ ಆರೋಪಿ. ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಇಮ್ರಾನ್ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದಕ್ಕೆ ಯುವರಾಜ ಸಾಕ್ಷಿಯಾಗಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ, ಇಮ್ರಾನ್‌ ಆಗಾಗ ಬೆದರಿಕೆ ಹಾಕುತ್ತಿದ್ದ.

ಫೆ. 18ರ ರಾತ್ರಿ ಯುವರಾಜ ಅವರು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಅವರನ್ನು ಅಡ್ಡಗಟ್ಟಿದ ಆರೋಪಿ, ‘ಅದೇಗೆ ಸಾಕ್ಷಿ ಹೇಗೆ ಹೇಳ್ತಿಯಾ. ನೀನು ಬದುಕಿದ್ದರೆ ತಾನೇ ಸಾಕ್ಷಿ ಹೇಳೋದು’ ಎಂದು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಬಂಧನ, ಬಂಗಾರ ವಶ:

ನಗರದ ಹಳೇ ಬಸ್ ನಿಲ್ದಾಣದ ಬಳಿ ಚಿನ್ನಾಭರಣ ಮತ್ತು ಮೊಬೈಲ್ ಕಳವು ಆರೋಪಿಯನ್ನು ಬಂಧಿಸಿರುವ ಉಪನಗರ ಠಾಣೆ ಪೊಲೀಸರು 40 ಗ್ರಾಂ ಚಿನ್ನಾಭರಣ, ಮೊಬೈಲ್, ಪಲ್ಸರ್ ಬೈಕ್ ಸೇರಿ ಒಟ್ಟು ₹2.55 ಲಕ್ಷ ಮೌಲ್ಯದ ವಸ್ತಗಳನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶ ಮೂಲದ ಗದಗ ಜಿಲ್ಲೆಯ ನರೇಗಲ್ ನಿವಾಸಿ, ಶ್ಯಾಮ ವೆಂಕಟೇಶ್ವರಲು ಮೇಡ ಬಂಧಿತ ವ್ಯಕ್ತಿ. 2020ರ ಫೆ. 24ರಂದು ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಮಹಿಳೆಯ ಬ್ಯಾಗ್‌ನಲ್ಲಿದ್ದ ಬಂಗಾರದ ಆಭರಣ ಹಾಗೂ ಕಳೆದ ತಿಂಗಳ ಜ. 9ರಂದು ಮಂತ್ರಾ ರೆಸಿಡೆನ್ಸಿ ಮುಂದೆ ನಿಂತಿದ್ದ ಕಾರಿನಲ್ಲಿದ್ದ ಮೊಬೈಲ್‌ ಕಳವು ಮಾಡಿದ್ದ.

ಉಪನಗರ ಠಾಣೆ ಇನ್‌ಸ್ಪೆಕ್ಟರ್‌ ರವಿಚಂದ್ರ ಬಡಾಫಕ್ಕೀರಪ್ಪನವರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

ಒಬ್ಬ ವಶಕ್ಕೆ:

ಗಬ್ಬೂರು ಟೋಲ್‌ ಗೇಟ್‌ ಬಳಿ 420 ಕ್ವಿಂಟಲ್‌ ಪಡಿತರ ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಸಬಾ ಪೇಟೆ ಠಾಣೆ ಪೊಲೀಸರು ಹಾವೇರಿಯ ಶಿವಾ ಟ್ರೇಡರ್ಸ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಹಾವೇರಿಯ ಎಪಿಎಂಸಿ ಮಾರುಕಟ್ಟೆ‌ಯಿಂದ ₹29.24 ಲಕ್ಷ ಮೌಲ್ಯದ ಪಡಿತರ ಅಕ್ಕಿಯನ್ನು ಲಾರಿಗೆ ತುಂಬಿಕೊಂಡು ಗುಜರಾತ್‌ ರಾಜ್ಯದ ಖಚ್‌ ಜಿಲ್ಲೆಗೆ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ರಾಜಸ್ಥಾನದ ಲಾರಿ ಚಾಲಕ ಜೋರಾರಾಮ ಬಿಷ್ಣೋಯ್‌ ಎಂಬಾತನನ್ನು ಬಂಧಿಸಿದ್ದರು.

ವೈದ್ಯೆ ನಾಪತ್ತೆ:

ಗೋಪನಕೊಪ್ಪದ ಮನೋವಿಕಾಸ ಸಂಸ್ಥೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿದ್ಯಾಶ್ರೀ ಕಟಾವಕರ್‌ ಅವರು ನಾಪತ್ತೆಯಾಗಿದ್ದಾರೆ ಎಂದು ಸಂಸ್ಥೆಯ ಲೆಕ್ಕಪತ್ರ ವಿಭಾಗದ ಮುಖ್ಯಸ್ಥೆ ವಿರೂಪಾಕ್ಷಿ ಎ. ಅವರು, ಅಶೋಕನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಫೆ. 17ರಂದು ಮಧ್ಯಾಹ್ನ ನವನಗರದ ಕ್ಯಾನ್ಸರ್‌ ಆಸ್ಪತ್ರೆಗೆ ಹೋಗಿ ಕೆಲಸದ ಮಾಹಿತಿ ಪಡೆದುಕೊಂಡು ಬರುತ್ತೇನೆ ಎಂದು ವಿದ್ಯಾಶ್ರೀ ಅವರು, ಸಂಸ್ಥೆಯ ಮುಖ್ಯಸ್ಥರಿಗೆ ಹೇಳಿದ್ದರು. ನಂತರ ಸಂಸ್ಥೆಗೂ ಬರದೆ, ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

₹84 ಸಾವಿರ ವಂಚನೆ:

ಧಾರವಾಡದ ವಿದ್ಯಾಗಿರಿಯ ವೃಷಾಲಿ ನಿಕ್ಕಂ ಅವರಿಗೆ 20 ಕೆ.ಜಿ ಕೇಕ್‌ ಆರ್ಡರ್‌ ಮಾಡಿದ ವ್ಯಕ್ತಿಯೊಬ್ಬ, ಹಣ ಕಳುಹಿಸುವುದಾಗಿ ಅವರ ವಾಟ್ಸ್‌ಆ್ಯಪ್‌ಗೆ ಕ್ಯೂಆರ್‌ ಕೋಡ್‌ ಕಳುಹಿಸಿ ₹84 ಸಾವಿರವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.

ಒಂದು ಕೆ.ಜಿಯಂತೆ 20 ಕೆ.ಜಿ ಕೇಕ್‌ ಬೇಕೆಂದು ಆರ್ಡರ್‌ ಮಾಡಿದ ವಂಚಕ, ಅದಕ್ಕೆ ₹7 ಸಾವಿರ ಕಳುಹಿಸುವುದಾಗಿ ಹೇಳಿ ವಾಟ್ಸ್‌ಆ್ಯಪ್‌ಗೆ ಕ್ಯೂಆರ್‌ ಕೋಡ್‌ ಕಳುಹಿಸಿದ್ದ. ಅದನ್ನು ಸ್ಕ್ಯಾನ್‌ ಮಾಡಿ ಪಿನ್‌ ನಂಬರ್‌ ಹಾಕುತ್ತಿದ್ದಂತೆ ₹84 ಸಾವಿರ ವರ್ಗಾವಣೆಯಾಗಿದೆ ಎಂದು ಹುಬ್ಬಳ್ಳಿ ಸೈಬರ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕ್ಯೂಆರ್‌ ಕೋಡ್‌ ಬಳಸಿ 40 ಸಾವಿರ ವಂಚನೆ:

ಮನೆ ಬಾಡಿಗೆಗೆ ಮುಂಗಡವಾಗಿ ಹಣ ನೀಡುತ್ತೇನೆಂದು, ಮಾಲೀಕರ ವಾಟ್ಸ್‌ಆ್ಯಪ್‌ಗೆ ಕ್ಯೂಆರ್ ಕೋಡ್‌ ಕಳಿಸಿದ್ದ ದುಷ್ಕರ್ಮಿಯೊಬ್ಬ ₹40 ಸಾವಿರವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.

ಗೋಕುಲ ರಸ್ತೆಯಲ್ಲಿ ವಾಸವಾಗಿರುವ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಶಾಂತಿ ಕಾಲೊನಿಯ ವಿಜಯ ಗಣಪ ಹಣ ಕಳೆದುಕೊಂಡವರು.

ತಮ್ಮ ಊರಿನಲ್ಲಿರುವ ಖಾಲಿ ಮನೆಯನ್ನು ಬಾಡಿಗೆ ನೀಡುವುದಾಗಿ 99ACRES ಎಂಬ ವೆಬ್‌ಸೈಟ್‌ನಲ್ಲಿ ಮನೆಯ ಚಿತ್ರ, ವಿಳಾಸ, ಮೊಬೈಲ್‌ ಸಂಖ್ಯೆ ಹಾಗೂ ಇಮೇಲ್‌ ವಿವರವನ್ನು ಹಾಕಿದ್ದರು.

ಅದನ್ನು ಗಮನಿಸಿದ ವಂಚಕ ಮನೆಗೆ ಬಾಡಿಗೆಗೆ ಬರುವುದಾಗಿ ವಿಜಯ ಅವರಿಗೆ ತಿಳಿಸಿದ್ದ. ಮುಂಗಡವಾಗಿ ₹20 ಸಾವಿರ ನೀಡುತ್ತೇನೆ ಎಂದು ವಿಜಯ ಅವರ ವಾಟ್ಸ್‌ಆ್ಯಪ್‌ಗೆ ಕ್ಯೂಆರ್‌ ಕೋಡ್ ಕಳುಹಿಸಿದ್ದ. ಅದನ್ನು ಸ್ಕ್ಯಾನ್‌ ಮಾಡಿದ ಕೆಲವೇ ಕ್ಷಣಗಳಲ್ಲಿ ವಿಜಯ ಅವರ ಖಾತೆಯಿಂದ ಹಣ ವರ್ಗಾವಣೆಯಾಗಿದೆ ಎಂದು ಪೊಲೀಸರು ತಿಳಿಸಿದರು. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆ:

ಅಕ್ಷಯ ಕಾಲೊನಿಯ ಪ್ರಜ್ವಲ್‌ ರಾವ್‌ ಅವರು ಕಳೆದುಕೊಂಡಿದ್ದ ಪಾನ್‌ ಕಾರ್ಡ್‌ನ ಗೌಪ್ಯ ಮಾಹಿತಿಯನ್ನು ಪಡೆದ ವಂಚಕನೊಬ್ಬ, ಅವರ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕ್ರೆಡಿಟ್‌ ಕಾರ್ಡ್‌ ಹಾಗೂ ವಾಹನ ಸಾಲ ಪಡೆದುಕೊಂಡಿದ್ದಾನೆ.

ಸಿಟಿ ಬ್ಯಾಂಕ್‌ ಮತ್ತು ಇಂಡಸ್‌ ಬ್ಯಾಂಕ್‌ನಲ್ಲಿ ಕ್ರೆಡಿಟ್‌ ಕಾರ್ಡ್‌ ಹಾಗೂ ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ದ್ವಿ ಚಕ್ರ ವಾಹನಕ್ಕೆ ಸಾಲ ಪಡೆದುಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆದರಿಸಿ ಹಣ ವಸೂಲಿ:

ನಗ್ನ ವಿಡಿಯೊವನ್ನು ಬಹಿರಂಗಗೊಳಿಸುವುದಾಗಿ ಬೆದರಿಸಿದ ದುಷ್ಕರ್ಮಿಯೊಬ್ಬ, ವ್ಯಕ್ತಿಯೊಬ್ಬರಿಂದ ₹13,200 ಹಣವನ್ನು ವಸೂಲಿ ಮಾಡಿದ್ದಾನೆ.

ಧಾರವಾಡದ ಶಾಂತಿನಿಕೇತನ ನಗರದ ನವೀನ ಎಂಬುವವರಿಗೆ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊಕಾಲ್‌ ಮಾಡಿದ ದುಷ್ಕರ್ಮಿ, ವಿಡಿಯೊದ ರೆಕಾರ್ಡಿಂಗ್‌ ಮಾಡಿದ್ದ. ನಂತರ ವಿಡಿಯೊ ಎಡಿಟ್ ಮಾಡಿ ನವೀನ ಅವರ ಮುಖಕ್ಕೆ ನಗ್ನ ದೇಹದ ವಿಡಿಯೊ ಜೋಡಿಸಿ ಅವರ ಖಾತೆಯಲ್ಲಿದ್ದ ಹಣವನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡಿದ್ದಾನೆ ಎಂದು ಸೈಬರ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

ಹಣ ವರ್ಗಾವಣೆ:

ವಿದ್ಯಾನಗರದ ಪವನಕುಮಾರ ಅವರ ಕ್ರೆಡಿಟ್ ಕಾರ್ಡ್‌ನಿಂದ ವಂಚಕನೊಬ್ಬ ₹41 ಸಾವಿರವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT