ಸೋಮವಾರ, ಮೇ 16, 2022
22 °C
ಹೊಸ ಸಿನಿಮಾಕ್ಕೆ ಕಾಯುತ್ತಿರುವ ಮಂದಿ, ‘ಪೊಗರು’ ಮೇಲೆ ಕಣ್ಣು

ಹುಬ್ಬಳ್ಳಿಯಲ್ಲಿ ಚಿತ್ರಮಂದಿರಕ್ಕೆ ಪ್ರೇಕ್ಷಕರ ಮಿಶ್ರಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪೂರ್ಣಪ್ರಮಾಣದಲ್ಲಿ ಸೀಟುಗಳ ಭರ್ತಿಗೆ ಸರ್ಕಾರ ಅವಕಾಶ ಕೊಟ್ಟ ಬೆನ್ನಲ್ಲೆ ನಗರದ ಕೆಲ ಚಿತ್ರಮಂದಿರಗಳನ್ನು ಬಾಳೆ ದಿಂಡು, ಹೂವಿನಹಾರ ಹಾಕಿ ಶೃಂಗರಿಸಲಾಗಿದೆ. ಪ್ರೇಕ್ಷಕರಿಗೆ ಎದ್ದು ಕಾಣುವಂತೆ ’ಸುರಕ್ಷತೆಗೆ ಒತ್ತು ನೀಡಲಾಗಿದೆ’ ಎನ್ನುವ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಆದರೆ, ಪ್ರೇಕ್ಷಕರ ಪ್ರತಿಕ್ರಿಯೆ ಮಾತ್ರ ಮಿಶ್ರವಾಗಿದೆ.

ನಗರದಲ್ಲಿರುವ ಏಳು ಚಿತ್ರಮಂದಿರಗಳ ಪೈಕಿ ನಾಲ್ಕು ಆರಂಭವಾಗಿಲ್ಲ. ಧಾರವಾಡದಲ್ಲಿರುವ ನಾಲ್ಕರಲ್ಲಿ ಒಂದರಲ್ಲಿ ಮಾತ್ರ ಸಿನಿಮಾ ಪ್ರದರ್ಶನವಾಗುತ್ತಿದೆ. ಇಲ್ಲಿನ ರೈಲು ನಿಲ್ದಾಣದ ಸಮೀಪದಲ್ಲಿರುವ ‘ಚಂದ್ರಕಲಾ’ದಲ್ಲಿ ರಾಜಾನರಸಿಂಹ ಚಿತ್ರ ಪ್ರದರ್ಶಿಸಲಾಗುತ್ತಿದೆ. ಶುಕ್ರವಾರ ಒಟ್ಟು 33 ಜನ ಸಿನಿಮಾ ನೋಡಿದರೆ, ಶನಿವಾರ ಸಿನಿಮಾ ನೋಡಿದವರ ಸಂಖ್ಯೆ ಇದಕ್ಕಿಂತಲೂ ಕಡಿಮೆಯಿತ್ತು. ಆದ್ದರಿಂದ ದಿನಕ್ಕೆ ನಡೆಯಬೇಕಿದ್ದ ನಾಲ್ಕು ಆಟಗಳಲ್ಲಿ ರಾತ್ರಿಯ ಪ್ರದರ್ಶನ ರದ್ದುಪಡಿಸಲಾಗಿತ್ತು ಎನ್ನುತ್ತಾರೆ ಚಂದ್ರಕಲಾ ಚಿತ್ರಮಂದಿರದಲ್ಲಿ ಟಿಕೆಟ್‌ ನೀಡುತ್ತಿದ್ದ ಗಣೇಶ ಪವಾರ್‌. ಶೃಂಗಾರ ಹಾಗೂ ರೂಪಂ ಚಿತ್ರಮಂದಿರಗಳು ಇನ್ನೂ ಆರಂಭವಾಗಿಲ್ಲ.

ಚಿತ್ರಮಂದಿರ ಯಾವಾಗ ಆರಂಭವಾಗುತ್ತದೆ ಎಂದು ’ಶೃಂಗಾರ’ದ ಸಿಬ್ಬಂದಿಯನ್ನು ಪ್ರಶ್ನಿಸಿದರೆ ‘ಹೊಸ ಸಿನಿಮಾ ಬಂದರಷ್ಟೇ ಜನ ಬರುತ್ತಾರೆ. ಫೆ. 19ರಂದು ತೆರೆ ಕಾಣಲಿರುವ ಪೊಗರು ಚಿತ್ರದ ದಿನವೇ ಥಿಯೇಟರ್‌ ಆರಂಭ’ ಎಂದರು.

ಸುಧಾ ಮತ್ತು ಅಪ್ಸರಾ ಚಿತ್ರಮಂದಿರಗಳಲ್ಲಿ ಪ್ರದರ್ಶಿತಗೊಳ್ಳುತ್ತಿರುವ ಇನ್‌ಸ್ಟೆಕ್ಟರ್‌ ವಿಕ್ರಂ ಹಾಗೂ ಶ್ಯಾಡೊ ಚಿತ್ರಗಳನ್ನು ನೋಡಲು ಎರಡು ದಿನಗಳಲ್ಲಿ ಶೇ 60ರಿಂದ ಶೇ 70ರಷ್ಟು ಪ್ರೇಕ್ಷಕರು ಬಂದಿದ್ದಾರೆ. ಹೊಸ ಸಿನಿಮಾಗಳಿಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ ಎಂದು ಈ ಚಿತ್ರಮಂದಿರದ ಲೆಕ್ಕಾಧಿಕಾರಿ ಜಿ.ಕೆ. ಮಾಳ್ವೇಕರ್‌ ತಿಳಿಸಿದರು.

‘ಲಾಕ್‌ಡೌನ್‌ ಸಮಯದಲ್ಲಿಯೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿತ್ರಮಂದಿರ ಚೆನ್ನಾಗಿ ನಿರ್ವಹಣೆ ಮಾಡಿದ್ದೇವೆ. ಶೇ 50ರಷ್ಟು ಪ್ರೇಕ್ಷಕರಿಗಷ್ಟೇ ಅವಕಾಶವಿದ್ದಾಗ ಶೇ 5ರಿಂದ ಶೇ 6ರಷ್ಟು ಮಾತ್ರ ಜನ ಇರುತ್ತಿದ್ದರು. ಈಗ ನಿಧಾನವಾಗಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮಲ್ಲಿ ಕನ್ನಡ ಮತ್ತು ಹಿಂದಿ ಸಿನಿಮಾಗಳಿಗೆ ಬೇಡಿಕೆಯಿದ್ದು, ಹಿಂದಿ ಸಿನಿಮಾ ಬಿಡುಗಡೆಯಾದರೆ ಪ್ರೇಕ್ಷಕರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಕನ್ನಡದ ತಾರಾ ನಾಯಕರ ಚಿತ್ರಗಳಿಗೂ ಬೇಡಿಕೆಯಿದೆ’ ಎಂದರು.

***

ಪ್ರೇಕ್ಷಕರು ಹೊಸ ಸಿನಿಮಾಗಳು ಬೇಕು ಎಂದು ಬಯಸುತ್ತಾರೆ. ಕೋವಿಡ್‌ ಪರಿಣಾಮದಿಂದಾಗಿ ಜನರಲ್ಲಿ ಈಗ ಮೊದಲಿನ ಹಾಗೆ ಹಣವಿಲ್ಲ. ಆದ್ದರಿಂದ ಹೆಚ್ಚು ಜನ ಬರುತ್ತಿಲ್ಲ.

- ರಾಜಶೇಖರ ಬಡಿಗೇರ, ಚಂದ್ರಕಲಾ ಚಿತ್ರಮಂದಿರಕ್ಕೆ ಬಂದಿದ್ದ ಹುಬ್ಬಳ್ಳಿ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು