ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಕುಟುಂಬದ ದಾನಮ್ಮ ಈಗ ‘ಏಕಲವ್ಯ’

ಅಂತರರಾಷ್ಟ್ರೀಯ ಸೈಕ್ಲಿಸ್ಟ್‌ಗೆ ರಾಜ್ಯ ಸರ್ಕಾರದಿಂದ ಪ್ರಶಸ್ತಿಯ ಗೌರವ
Last Updated 5 ಏಪ್ರಿಲ್ 2022, 14:15 IST
ಅಕ್ಷರ ಗಾತ್ರ

ರಾಂಪುರ (ತಾ.ಬಾಗಲಕೋಟೆ): ‘ಇಷ್ಟು ವರ್ಷಗಳ ಶ್ರಮ ಹಾಗೂ ಸಾಧನೆಗೆ ಸಿಕ್ಕ ಗೌರವ ಇದು. ಕೋಚ್‌ ಅನಿತಾ ನಿಂಬರಗಿ ಹಾಗೂ ಶಾರದಾ ನಿಂಬರಗಿ ಅವರ ಪ್ರೋತ್ಸಾಹ ನನ್ನೆಲ್ಲಾ ಸಾಧನೆಗೆ ಕಾರಣ...’

2020–21ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಭಾಜನರಾದ ಅಂತರರಾಷ್ಟ್ರೀಯ ಸೈಕ್ಲಿಸ್ಟ್‌ ದಾನಮ್ಮ ಚಿಚಖಂಡಿ ಅವರ ಮನದ ಮಾತುಗಳು ಇವು.

ರಾಜ್ಯ ಸರ್ಕಾರ ಸೋಮವಾರ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ದಾನಮ್ಮ ತಂದೆ ಚನ್ನಮಲ್ಲಪ್ಪ ಹಾಗೂ ತಾಯಿ ಮಂಜುಳಾ ಕೃಷಿಕರು. ಕೃಷಿ ಒಡನಾಟದಲ್ಲಿ ಬೆಳೆದ ದಾನಮ್ಮ 15 ವರ್ಷಗಳಿಂದ ‘ಪೆಡೆಲ್‌’ ತುಳಿದು ಈಗ ‘ಏಕಲವ್ಯ’ದ ಗುರಿ ಮುಟ್ಟಿದ್ದಾರೆ.

ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ದ್ವಿತೀಯ ವರ್ಷ ಓದುತ್ತಿರುವ ದಾನಮ್ಮ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ನಾವಲಗಿ ಗ್ರಾಮದಲ್ಲಿ 5ನೇ ತರಗತಿ ಓದುವಾಗಲೇ ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಿದ್ದರು. ಬಾಗಲಕೋಟೆ ಕ್ರೀಡಾಶಾಲೆಗೆ ಆಯ್ಕೆಯಾದರು.

2021ರಲ್ಲಿ ಹೈದರಾಬಾದ್‌ನಲ್ಲಿ ನಡೆದ 72ನೇ ಸೀನಿಯರ್ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ನಲ್ಲಿ ದಾನಮ್ಮ ಮಹಿಳೆಯರ ಸೀನಿಯರ್ ವಿಭಾಗದ 10 ಕಿ.ಮೀ. ಸ್ಕ್ರಾಚ್‌ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದರು. ಅದೇ ವರ್ಷ ಮುಂಬೈನಲ್ಲಿ ನಡೆದ 25ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ನಲ್ಲಿ ಬೆಳ್ಳಿ, 2020ರಲ್ಲಿ ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದಲ್ಲಿ ಚಿನ್ನ ಸೇರಿದಂತೆ ಹಲವಾರು ಟೂರ್ನಿಗಳಲ್ಲಿ ಪದಕಗಳ ಒಡತಿಯಾಗಿದ್ದಾರೆ.

21 ವರ್ಷದ ದಾನಮ್ಮ ರಾಜ್ಯಮಟ್ಟದಲ್ಲಿ ಒಟ್ಟು 30ಕ್ಕೂ ಹೆಚ್ಚು ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 20 ಪದಕಗಳನ್ನು ಗೆದ್ದುಕೊಂಡಿದ್ದಾರೆ. ದೆಹಲಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿಯೂ ತರಬೇತಿ ಪಡೆದಿರುವ ಅವರು 2018ರಲ್ಲಿ ಮಲೇಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಮತ್ತು ಅದೇ ವರ್ಷ ನವದೆಹಲಿಯಲ್ಲಿ ಜರುಗಿದ ಏಷ್ಯಾ ಕಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.

ತಾವು ಕಲಿಸಿದ ಕ್ರೀಡಾಪಟುವಿಗೆ ಏಕಲವ್ಯ ಪ್ರಶಸ್ತಿ ಬಂದಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ಬಾಗಲಕೋಟೆ ವಸತಿ ನಿಲಯದ ಸೈಕ್ಲಿಂಗ್‌ ಕೋಚ್‌ ಅನಿತಾ ಎಂ. ನಿಂಬರಗಿ ‘ದಾನಮ್ಮ ಶ್ರಮಕ್ಕೆ ಪ್ರಶಸ್ತಿಯೇ ಒಲಿದು ಬಂದಿದೆ. ಹಲವು ವರ್ಷಗಳಿಂದ ಬಾಗಲಕೋಟೆಯ ಸೈಕ್ಲಿಸ್ಟ್‌ಗಳಿಗೆ ಪ್ರಶಸ್ತಿಗಳು ಬರುತ್ತಿರುವುದು ಆಶಾದಾಯಕ ಬೆಳವಣಿಗೆ’ ಎಂದು ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT