ಧಾರವಾಡ: ‘ಹಲವು ರಾಜಕಾರಣಿಗಳು ಸಭೆ ಸಮಾರಂಭಗಳಲ್ಲಿ ಪುಂಖಾನುಪುಂಖವಾಗಿ ಮಾತನಾಡಿ ಚಪ್ಪಾಳೆ ಗಿಟ್ಟಿಸುತ್ತಾರೆ. ಆದರೆ, ಮಾತಿನಂತೆ ಅವರ ಕೃತಿ ಇರುವುದಿಲ್ಲ’ ಎಂದು ಸಾಹಿತಿ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಂಗಣದಲ್ಲಿ ಸಂ.ಶಿ.ಭೂಸನೂರಮಠ ಪ್ರತಿಷ್ಠಾನ ಹಾಗೂ ಕಲ್ಯಾಣಕೂಟದ ವತಿಯಿಂದ ಗುರುವಾರ ಏರ್ಪಡಿಸಿದ್ದ ಸಂ.ಶಿ. ಭೂಸನೂರಮಠ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
‘ಮಾತುಗಳಿಂದ ಸಮಾಜದ ಪ್ರಗತಿ ಸಾಧ್ಯ ಇಲ್ಲ. ಮಾತುಗಳು ಕಾರ್ಯಗತವಾದಾಗ ಪ್ರಗತಿ ಸಾಧ್ಯವಾಗುತ್ತದೆ. ಸಮಾಜಮುಖಿಯಾಗಿ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವವರು ಕಡಿಮೆಯಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ವಚನಕಾರ್ತಿ ಅಕ್ಕಮಹಾದೇವಿ ಅವರ ಊರು ಉಡುತಡಿ ಅಭಿವೃದ್ಧಿಗೆ ಭೂಸನೂರಮಠ ಸಾಹಿತ್ಯ ಪ್ರಶಸ್ತಿಯ ಮೊತ್ತವನ್ನು ಅಕ್ಕಮಹಾದೇವಿ ಪ್ರತಿಷ್ಠಾನಕ್ಕೆ ನೀಡುತ್ತೇನೆ ಎಂದರು.
ವಿಶ್ರಾಂತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ.ವಡ್ಡೀನ ಅವರನ್ನು ಸನ್ಮಾನಿಸಲಾಯಿತು.
ಸಾಹಿತಿ ಬಸವರಾಜ ಜಗಜಂಪಿ ಅವರು ಸಂ. ಶಿ. ಭೂಸನೂರಮಠ ಅವರ ‘ಭವ್ಯಮಾನವ’ ಮಹಾಕಾವ್ಯದ ಕುರಿತು ಉಪನ್ಯಾಸ ನೀಡಿದರು.
ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂ.ಶಿ.ಭೂಸನೂರಮಠ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಗುರುದೇವಿ ಹುಲ್ಲೆಪ್ಪನವರಮಠ, ಪ್ರತಿಷ್ಠಾನದ ಕಾರ್ಯದರ್ಶಿ ಶಶಿಧರ ತೋಡಕರ ಇದ್ದರು.