ಹುಬ್ಬಳ್ಳಿ: ಘಂಟಿಕೇರಿಯಲ್ಲಿರುವ ಬಾಲಕಿಯರ ಬಾಲಮಂದಿರ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಸದ್ಯ ಇಲ್ಲಿರುವ ಮಕ್ಕಳಿಗೆ ತಾತ್ಕಾಲಿಕವಾಗಿ ಸಿಬ್ಬಂದಿ ವಸತಿ ಗೃಹದಲ್ಲಿ ಆಸರೆ ಕಲ್ಪಿಸಲಾಗಿದ್ದು, ಅಧಿಕಾರಿಗಳು ಬಾಡಿಗೆ ಕಟ್ಟಡದ ಹುಡುಕಾಟದಲ್ಲಿ ತೊಡಗಿದ್ದಾರೆ.ಶಿಶು ಗೃಹ, ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೂ ಹೋಗುವ ಬಾಲಕಿಯರು ಇಲ್ಲಿದ್ದಾರೆ. ಕೆಲವರು ವೃತ್ತಿ ಸಂಬಂಧಿ ತರಬೇತಿ ಪಡೆಯುತ್ತಿದ್ದಾರೆ.
ಬಾಲಮಂದಿರದ ಕಟ್ಟಡವನ್ನು ಎಂಟು ದಶಕಗಳ ಹಿಂದೆ ಬ್ರಿಟಿಷರು ನಿರ್ಮಿಸಿದ್ದರು. ವಿವಿಧ ಹಿನ್ನೆಲೆಯ ಸಮುದಾಯಗಳ ಜನರನ್ನು ಇಲ್ಲಿಗೆ ತಂದು ಬಿಡುತ್ತಿದ್ದ ಬ್ರಿಟಿಷರು, ಅವರ ಮಕ್ಕಳ ಶಿಕ್ಷಣದ ವ್ಯವಸ್ಥೆಗಾಗಿ 1935ರಲ್ಲಿ ಕೆಲ ಕಟ್ಟಡಗಳನ್ನು ನಿರ್ಮಿಸಿ ಶಾಲೆ ಆರಂಭಿಸಿದ್ದರು. ಸ್ವಾತಂತ್ರ್ಯೋತ್ತರದ ವರ್ಷಗಳಲ್ಲಿ ಈ ಕಟ್ಟಡದಲ್ಲಿ ಬಾಲಮಂದಿರ ಆರಂಭಿಸಲಾಗಿದೆ.
35 ಮಕ್ಕಳಿದ್ದಾರೆ: ‘ಕಟ್ಟಡವು ಶಿಥಿಲಾವಸ್ಥೆ ತಲುಪಿದ್ದನ್ನು ಮನಗಂಡು ಸಿಬ್ಬಂದಿಯ ವಸತಿ ಗೃಹಕ್ಕೆ ಮಕ್ಕಳನ್ನು ಸ್ಥಳಾಂತರಿಸಲಾಗಿದೆ. 200 ಮಕ್ಕಳ ಸಾಮರ್ಥ್ಯದ ಬಾಲ ಮಂದಿರದಲ್ಲಿ ಸದ್ಯ 35 ಮಕ್ಕಳಿದ್ದಾರೆ. ರಜೆ ಕಾರಣಕ್ಕಾಗಿ ಊರಿಗೆ ಹೋಗಿದ್ದವರು,ಶಾಲೆ ಆರಂಭವಾದ ಬಳಿಕ ವಾಪಸ್ಸಾಗುತ್ತಿದ್ದಾರೆ. ಎಲ್ಲರೂ ಬಂದರೆ, ವಸತಿಗೆ ಸಮಸ್ಯೆಯಾಗಬಹುದೆಂಬ ಕಾರಣಕ್ಕಾಗಿ ಬಾಡಿಗೆ ಕಟ್ಟಡ ಹುಡುಕಲಾಗುತ್ತಿದೆ’ ಎಂದುಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ (ಪ್ರಭಾರ)ಡಾ. ಕಮಲ ಬೈಲೂರು‘ಪ್ರಜಾವಾಣಿ’ಗೆ ತಿಳಿಸಿದರು.
‘ವಸತಿ ಗೃಹದಲ್ಲೇ ಮಕ್ಕಳಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಮಕ್ಕಳನ್ನು ಕಾಳಜಿ ಮಾಡುವವರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ 12 ಸಿಬ್ಬಂದಿ ಇಲ್ಲಿದ್ದಾರೆ. ಬಹುತೇಕ ಸಿಬ್ಬಂದಿ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಪ್ರತಿ ತಿಂಗಳು ಸಿಬ್ಬಂದಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಲಾಗುತ್ತದೆ. ಇಲ್ಲಿನ ಮಕ್ಕಳಿಗೂ ಕೊರೊನಾ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ವೈದ್ಯರು ವಾರಕ್ಕೊಮ್ಮೆ ಬಂದು ಮಕ್ಕಳ ಆರೋಗ್ಯ ತಪಾಸಣೆ ನಡೆಸುತ್ತಾರೆ’ ಎಂದುಬಾಲಮಂದಿರದ ಅಧೀಕ್ಷಕಿ ಅತೀಕಾ ಎಂ. ಸಿದ್ಧಿಕಿ ಹೇಳಿದರು.
ಮಂದಗತಿಯಲ್ಲಿ ಕಾಮಗಾರಿ: ಶಿಥಿಲಾವಸ್ಥೆ ತಲುಪಿದ್ದ ಬಾಲಮಂದಿರದ ಬಳಿ, ₹4.25 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆಜನವರಿಯಲ್ಲಿ ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಗದೀಶ ಶೆಟ್ಟರ್ ಭೂಮಿಪೂಜೆ ನೆರವೇರಿಸಿದ್ದರು. ಎರಡು ಬ್ಲಾಕ್‌ಗಳು ನಿರ್ಮಾಣವಾಗುತ್ತಿದ್ದು, ಒಂದೊಂದು ಬ್ಲಾಕ್‌ನಲ್ಲಿ 50 ಬಾಲಕಿಯರು ವಾಸ್ತವ್ಯ ಮಾಡಬಹುದಾಗಿದೆ. ಲೋಕೋಪಯೋಗಿ ಇಲಾಖೆ ಕೈಗೊಂಡಿರುವ ಈ ಕಾಮಗಾರಿ ಹನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಏಳು ತಿಂಗಳಾದರೂ ತೆವಳುತ್ತಾ ಸಾಗಿದ್ದು, ನಿಗದಿತ ಅವಧಿಯಲ್ಲಿ ಮುಗಿಯುವುದು ಅನುಮಾನವಾಗಿದೆ.
‘ಕಟ್ಟಡದ ಅಡಿಪಾಯ ಮುಗಿದು, ಕಾಲಂಗಳನ್ನು ನಿರ್ಮಿಸಲಾಗಿದೆ. ಕೋವಿಡ್ ಮತ್ತು ಮಳೆಯ ಕಾರಣದಿಂದಾಗಿ ಕಾಮಗಾರಿ ವಿಳಂಬವಾಗಿದೆ. ಆದಷ್ಟು ಬೇಗ ಕಟ್ಟಡ ಪೂರ್ಣಗೊಳಿಸುವಂತೆ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಂದಲೂ ಒತ್ತಡವಿದೆ. ಡಿಸೆಂಬರ್ ಹೊತ್ತಿಗೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಹುಬ್ಬಳ್ಳಿಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉದಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.