ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಬ್ಯಾಂಕ್ ದರೋಡೆ, ಆರೋಪಿ ಬಂಧನ ವಿಡಿಯೊ ವೈರಲ್

ಮದುವೆ ಕಾರಣಕ್ಕಾಗಿ ಆರೋಪಿಗೆ ಕೋರ್ಟ್‌ನಿಂದ ಮಧ್ಯಂತರ ಜಾಮೀನು
Last Updated 22 ಜನವರಿ 2022, 13:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಕೊಪ್ಪಿಕರ ರಸ್ತೆಯಲ್ಲಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ ಶಾಖೆಯಲ್ಲಿ ಜ. 18ರಂದು ಯುವಕನೊಬ್ಬ ಎಸಗಿದ್ದ ದರೋಡೆಯ ಸಿಸಿಟಿವಿ ಕ್ಯಾಮೆರಾದ ವಿಡಿಯೊ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗಳು ಆತನನ್ನು ಬಂಧಿಸಿದ್ದ ಘಟನೆಯ ಮೊಬೈಲ್ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಜಯಪುರದ ಪ್ರವೀಣಕುಮಾರ ಎಂಬಾತ, ಮುಖಕ್ಕೆ ಮುಸುಕು ಹಾಕಿಕೊಂಡು ಮಧ್ಯಾಹ್ನ 2.17ರ ಸುಮಾರಿಗೆ ಬ್ಯಾಂಕ್‌ ಒಳಕ್ಕೆ ನುಗ್ಗಿದ್ದಾನೆ. ನಗದು ಕೌಂಟರ್‌ನ ಬಾಗಿಲಿಗೆ ಒದ್ದು, ಪಕ್ಕದಲ್ಲಿದ್ದ ಮಹಿಳಾ ಸಿಬ್ಬಂದಿಗೆ ಚಾಕು ತೋರಿಸಿ ಬೆದರಿಸಿದ್ದಾನೆ. ನಂತರ, ಅವರ ಕೈಚೀಲವನ್ನು ದೂರಕ್ಕೆ ಎಸೆದು, ಅಲ್ಲಿದ್ದ ಹಣವನ್ನು ತನ್ನ ಬ್ಯಾಗ್‌ಗೆ ತುಂಬಿಸಿಕೊಂಡಿದ್ದಾನೆ.

ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ, ಭಯಗೊಂಡ ಮಹಿಳೆ ಮತ್ತೊಬ್ಬರತ್ತ ಕೈ ತೋರಿಸಿದ್ದಾರೆ. ಅವರತ್ತ ಹೋಗಿ ಚಾಕುವಿನಿಂದ ಹೆದರಿಸಿರುವ ಆರೋಪಿ, ಒಟ್ಟು ₹6.39 ಲಕ್ಷ ಹಣದೊಂದಿಗೆ ಬ್ಯಾಂಕ್‌ನಿಂದ ಪರಾರಿಯಾಗಿದ್ದಾನೆ. ಒಂದು ನಿಮಿಷದಲ್ಲಿ ನಡೆದಿರುವ ಈ ಕೃತ್ಯ ಬ್ಯಾಂಕ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬ್ಯಾಂಕ್‌ನಿಂದ ಹಣದೊಂದಿಗೆ ಓಡಿ ಹೋಗುತ್ತಿದ್ದ ಆತನನ್ನು ಕಾನ್‌ಸ್ಟೆಬಲ್‌ಗಳಾದ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಉಮೇಶ ಬಂಗಾರಿ ಮತ್ತು ಉಪನಗರ ಪೊಲೀಸ್ ಠಾಣೆಯ ಮಂಜುನಾಥ ಹಾಲವರ, ಬೆನ್ನತ್ತಿ ಹಿಡಿದು ಆಟೊದಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದ ದೃಶ್ಯವನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಮೈಸೂರಿನ ಟಿವಿಎಸ್ ಷೋರೂಂನಲ್ಲಿ ಟೆಕ್ನಿಷಿಯನ್ ಆಗಿದ್ದ ಆರೋಪಿ, ಕೃತ್ಯಕ್ಕೆ ಎರಡು ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಗೆ ಬಂದಿದ್ದ. ಅದ್ಧೂರಿ ಮದುವೆಗಾಗಿ ಬ್ಯಾಂಕ್ ದರೋಡೆಗೆ ಇಳಿದಿದ್ದಾಗಿ ಪೊಲೀಸ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದ.

ಮಧ್ಯಂತರ ಜಾಮೀನು:ಆರೋಪಿ ಪ್ರವೀಣಕುಮಾರ್‌ಗೆ ಜ. 21ರಂದು ಮದುವೆ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ಜ. 27ರವರೆಗೆ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಮಂಜೂರಾಗಿದೆ ಎಂದು ಶಹರ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT