ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಶಿಕ್ಷಕರ ಕ್ಷೇತ್ರ: ಶಿಕ್ಷಕರ ಸಮಸ್ಯೆ ಪರಿಹರಿಸುವೆ -ಗುರಿಕಾರ

Last Updated 11 ಜೂನ್ 2022, 15:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಶಿಕ್ಷಕರ ಹಲವು ಸಮಸ್ಯೆಗಳನ್ನು ಬಸವರಾಜ ಹೊರಟ್ಟಿ ಅವರು ಈವರೆಗೆ ಪರಿಹರಿಸಿಲ್ಲ. ನನಗೆ ಶಾಸನಬದ್ಧ ಅಧಿಕಾರಿ ನೀಡಿದರೆ ಕಾಲಮಿತಿಯೊಳಗೆ ಬಗೆಹರಿಸುವೆ’ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಗುರಿಕಾರ ಭರವಸೆ ನೀಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊರಟ್ಟಿ ಅವರು ಈ ಬಾರಿ ಗೆದ್ದರೆ ದಾಖಲೆ ನಿರ್ಮಾಣವಾಗಬಹುದು. ಆದರೆ ಶಿಕ್ಷಕರ ಬೇಡಿಕೆಗಳು ಈಡೇರುವುದಿಲ್ಲ. ಅದಕ್ಕಾಗಿ ಹೊಸ ನಾಯಕತ್ವ ಅಗತ್ಯವಿದೆ’ ಎಂದರು.

‘40 ವರ್ಷಗಳಿಂದ ಶಿಕ್ಷಕರ ಸಂಘಟನೆಗಾಗಿ ಶ್ರಮಿಸಿದ್ದೇನೆ. ನಿರುದ್ಯೋಗಿ ಶಿಕ್ಷಕರ ಸಂಘ ಸ್ಥಾಪಿಸಿ, ಅವರ ನೇಮಕಾತಿಗಾಗಿ ಹೋರಾಡಿ, ಯಶಸ್ಸು ಕಂಡಿದ್ದೇನೆ. ಶಿಕ್ಷಕರ ಹಲವು ಸಮಸ್ಯೆಗಳಿಗೆ ಸರ್ಕಾರದಿಂದ ಪರಿಹಾರ ಒದಗಿಸಲು ಹೋರಾಡಿದ್ದೇನೆ, ಮುಂದೆಯೂ ಹೋರಾಡುತ್ತೇನೆ’ ಎಂದು ಹೇಳಿದರು.

‘1991ರಿಂದ ಕಾಲ್ಪನಿಕ ವೇತನ ಕಲ್ಪಿಸಿಲ್ಲ. ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆ ಹಲವರಿಗೆ ಸಿಕ್ಕಿಲ್ಲ. ನೆರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ವೇತನ ತಾರತಮ್ಯವಿದೆ. 1995ರಿಂದ ಶಾಲಾ–ಕಾಲೇಜುಗಳಿಗೆ ಅನುದಾನ ಲಭ್ಯವಾಗಿಲ್ಲ. 2015ರಿಂದ ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ, ಭರ್ತಿ ಮಾಡಿಲ್ಲ. ಹೊಸ ಪಿಂಚಣಿ ಯೋಜನೆ ರದ್ದು ಮಾಡಿ, ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುತ್ತಿಲ್ಲ. ಸುದೀರ್ಘ ಕಾಲ ಶಿಕ್ಷಕರ ಪ್ರತಿನಿಧಿಯಾಗಿದ್ದರೂ ಹೊರಟ್ಟಿ ಇದಕ್ಕಾಗಿ ಹೋರಾಟ ಮಾಡಲಿಲ್ಲ. ಸಮಸ್ಯೆಗಳು ಇವೆ ಎಂಬುದನ್ನು ಅವರೇ ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.

‘ತಮ್ಮ ಸಂಕಷ್ಟಕ್ಕೆ ಹೊರಟ್ಟಿ ಸ್ಪಂದಿಸುವುದಿಲ್ಲ ಎಂಬುದು ಶಿಕ್ಷಕರ ಮನವರಿಕೆಯಾಗಿದೆ. ಈ ಬಾರಿ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದಾರೆ. ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ಅಗತ್ಯ ಸೌಲಭ್ಯ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಬದ್ಧ’ ಎಂದರು.

ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ, ಧಾರವಾಡ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡರಾದ ಸದಾನಂದ ಡಂಗನವರ, ತಿಮ್ಮಯ್ಯ ಪುರ್ಲೆ, ಆರ್‌.ಎಂ. ಕುಲಕರ್ಣಿ,ಪ್ರಕಾಶ ಕ್ಯಾರಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT