ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದೊಳಗೆ ಬರುವ ಧಮ್ಮ ಉಗ್ರರಿಗೆ ಇದೆಯಾ?

ಮಾಜಿ ಸಚಿವ ಬಿ.ಶ್ರೀರಾಮುಲು ಸವಾಲು
Published 13 ಏಪ್ರಿಲ್ 2024, 14:14 IST
Last Updated 13 ಏಪ್ರಿಲ್ 2024, 14:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಈ ಮೊದಲು ಆಗಾಗ ದೇಶದೊಳಗೆ ಬಂದು ದಾಳಿ ಮಾಡಿ, ಪಾಕಿಸ್ತಾನಕ್ಕೆ ವಾಪಸ್ಸಾಗುತ್ತಿದ್ದರು. ಈಗ ಬರಲು ಉಗ್ರರಿಗೆ ಧಮ್ಮ ಇದೆಯಾ? ಪ್ರಧಾನಿ ನರೇಂದ್ರ ಮೋದಿ ಎಂದರೆ ಅವರಿಗೆ ಅಷ್ಟು ಭಯ ಮೂಡಿದೆ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದಲ್ಲಿ ಶನಿವಾರ ಬಿಜೆಪಿ ಆಯೋಜಿಸಿದ್ದ ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಮೋದಿ ಅವರ ನಾಯಕತ್ವದಲ್ಲಿ ದೇಶ ಸುರಕ್ಷಿತವಾಗಿದೆ. ಇಡೀ ದೇಶದ ರಕ್ಷಣೆಯ ಜವಾಬ್ದಾರಿ ಮೋದಿ ಅವರ ಮೇಲಿದೆ. ಯುವಕರು, ವೃದ್ದರು, ಮಹಿಳೆಯರು ಎಲ್ಲರೂ ಮೋದಿ ಪರವಾಗಿದ್ದಾರೆ. ಎಲ್ಲೆಡೆ ಜಯಕಾರ ಹಾಕುತ್ತಿದ್ದಾರೆ’ ಎಂದು ತಿಳಿಸಿದರು.

‘ಕಳೆದ ಬಿಜೆಪಿ ಸರ್ಕಾರವು ಪರಿಶಿಷ್ಟರ ಮೀಸಲಾತಿಯನ್ನು ಹೆಚ್ಚಿಸಿತ್ತು. ಎಸ್‌.ಸಿ ಶೇ 17ರಷ್ಟು ಹಾಗೂ ಎಸ್‌.ಟಿ ಸಮಾಜಕ್ಕೆ ಶೇ 7ರಷ್ಟು ಮೀಸಲಾತಿ ನೀಡಿತ್ತು. ಈ ಮೀಸಲಾತಿ ಜಾರಿಯಾಗಿಲ್ಲವೆಂದು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಜನರನ್ನು ತಪ್ಪು ದಾರಿಗೆ ಎಳೆಯಿತು. ಗೊಂದಲ ಸೃಷ್ಟಿಸಿತು. ಎಸ್‌.ಟಿ ಸಮಾಜವು ರಾಜಕೀಯವಾಗಿ, ಶೈಕ್ಷಣಿಕವಾಗಿ ಶೇ 7ರಷ್ಟು ಮೀಸಲಾತಿಯನ್ನು ಈಗ ಪಡೆದುಕೊಳ್ಳುತ್ತಿದೆ’ ಎಂದು ಹೇಳಿದರು.

‘ವಾಲ್ಮೀಕಿ ಸಮಾಜದ ಮೇಲೆ ಬ್ರಾಹ್ಮಣರ ಆಶೀರ್ವಾದ ಇರಬೇಕು. ಬ್ರಾಹ್ಮಣರಾಗಿರುವ ಜೋಶಿ ಅವರು ನನಗೆ ರಾಜಕೀಯವಾಗಿ ಪುನರ್‌ಜನ್ಮ ನೀಡಿದ್ದಾರೆ. ನನಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್‌ ಕೊಡಿಸುವಲ್ಲಿ ದೊಡ್ಡ ಪಾತ್ರ ನಿರ್ವಹಿಸಿದ್ದಾರೆ. ಅವರ ಗೆಲುವಿಗೆ ನಾವೆಲ್ಲ ಸಹಕರಿಸೋಣ’ ಎಂದು ನುಡಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಕಾಂಗ್ರೆಸ್‌ ಪಕ್ಷ ಪರಿಶಿಷ್ಟ ಜಾತಿ, ಪಂಗಡದವರನ್ನು ಕೇವಲ ಮತಬ್ಯಾಂಕ್‌ ಆಗಿ ಬಳಸಿಕೊಂಡಿದೆ ಹೊರತು, ಅವರ ಅಭಿವೃದ್ಧಿಗಾಗಿ ಏನನ್ನೂ ಮಾಡಿಲ್ಲ. ತುಷ್ಟೀಕರಣ ರಾಜಕಾರಣದಲ್ಲಿಯೇ ಕಾಲಕಳೆದಿದೆ. ಮೀಸಲಾತಿ ಹೆಚ್ಚಿಸಲಿಲ್ಲ’ ಎಂದು ಆರೋಪಿಸಿದರು.

ರಾಮಾಯಣದ ರಾವಣ ಬ್ರಾಹ್ಮಣನಾಗಿದ್ದ. ಅವನ ಆಶೀರ್ವಾದ ಯಾರೂ ಕೇಳಲ್ಲ. ಕ್ಷತ್ರೀಯನಾಗಿರುವ ರಾಮನ ಆಶೀರ್ವಾದವನ್ನು ಪಡೆಯುತ್ತಾರೆ. ಈ ದೇಶ ಜಾತಿಗೆ ಮಹತ್ವ ನೀಡಿಲ್ಲ. ಗುಣಕ್ಕೆ ಮಹತ್ವ ನೀಡಿದೆ ಎಂದು ಹೇಳಿದರು.

ನರೇಂದ್ರ ಮೋದಿ ಅವರೇ ಈ ಸಲವೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ನಾವು ಘಂಟಾಘೋಷವಾಗಿ ಹೇಳುತ್ತೇವೆ. ಆದರೆ, ಕಾಂಗ್ರೆಸ್‌ ಇದುವರೆಗೆ ತಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದನ್ನು ಹೇಳಿಲ್ಲ. ಮಮತಾ ಬ್ಯಾನರ್ಜಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿ ಅವರ ಹೆಸರು ಹೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ಖರ್ಗೆ ಅವರ ಬಗ್ಗೆ ಸಮ್ಮತಿ ಇಲ್ಲ ಎಂದು ವ್ಯಂಗ್ಯವಾಡಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ‘ವಾಲ್ಮೀಕಿ ಜನಾಂಗದವರ ಏಳಿಗೆಗಾಗಿ ಕಾಂಗ್ರೆಸ್‌ ಏನೂ ಮಾಡಿಲ್ಲ. ಜನಾಂಗದವರಲ್ಲಿ ಬಹಳ ಜನ ಸಣ್ಣ ಪುಟ್ಟ ವ್ಯಾಪಾರ, ಬೀದಿ ಬದಿ ವ್ಯಾಪಾರ ಮಾಡುತ್ತಾರೆ. ಇವರ ಸಹಾಯಕ್ಕಾಗಿ ಪ್ರಧಾನಿ ಮೋದಿ ಅವರು ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು ತಂದಿದ್ದಾರೆ. ವಿಶ್ವಕರ್ಮ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿ ತಂದಿದ್ದಾರೆ’ ಎಂದು ಹೇಳಿದರು.

ಬಿಜೆಪಿ ಪರಿಶಿಷ್ಟ ಪಂಗಡಗಳ  ರಾಜ್ಯ ಘಟಕದ ಅಧ್ಯಕ್ಷ ಬಂಗಾರು ಹನುಮಂತ ಪ್ರಾಸ್ತಾವಿಕವಾಗಿ ಮಾತನಾಡಿ, ‘ನಮ್ಮ ಸಮಾಜದ ನಾಯಕ ಬಿ.ಶ್ರೀರಾಮುಲು ಅವರು ಅರ್ಜುನ ಇದ್ದಂತೆ, ಪ್ರಲ್ಹಾದ ಜೋಶಿ ಅವರು ಕೃಷ್ಣ ಇದ್ದಂತೆ. ಇವರ ಗೆಲುವಿಗಾಗಿ ಶ್ರಮಿಸೋಣ’ ಎಂದು ತಿಳಿಸಿದರು.

ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್‌. ಪಾಟೀಲ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮೇಯರ್‌ ವೀಣಾ ಬರದ್ವಾಡ, ಪುಂಡಲೀಕ ತಳವಾರ, ರವಿ ಬೆಳ್ತೂರು, ನಾಗರಾಜ ಛಬ್ಬಿ, ಲಕ್ಷ್ಮಣ ಮೇಗಿನಮನಿ, ಭಾಗವಹಿಸಿದ್ದರು.

Highlights - ಭಾರಿ ಸಂಖ್ಯೆಯಲ್ಲಿ ಸೇರಿದ ಜನ ಹಲವು ಸಂಘಗಳಿಂದ ಶ್ರೀರಾಮುಲುಗೆ ಸನ್ಮಾನ ಮೊಳಗಿದ ಜೈಶ್ರೀರಾಮ ಘೋಷಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT