ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಗುಬಡಿಸುವ ಡೈನೋಸರಸ್‌

Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ಪುಟ್ಟ ಬಾಲಕಿಯ ಹಿಂದೆ ಬಿದ್ದ ಭಾರಿ ಗಾತ್ರದ ಡೈನೋಸರಸ್ (ದೈತ್ಯ ಹಲ್ಲಿಗಳು), ಆಕೆಯನ್ನು ರಕ್ಷಿಸಲು ನಿಂತ ಧೈರ್ಯವಂತ ನಾಯಕ, ಆತನಷ್ಟೆ ಗಟ್ಟಿ ಗುಂಡಿಗೆಯ ನಾಯಕಿ. ನಯನ ಮನೋಹರ ಕಾಡು, ಪ್ರತಿ ದೃಶ್ಯದಲ್ಲೂ ಮೈ ಮೇಲಿನ ಕೂದಲು ನಿಮಿರುವಂತೆ ಮಾಡುವ ದೃಶ್ಯ ಸಂಯೋಜನೆ, ಎದೆ ಝಲ್ ಎನಿಸುವಂಥ ಸೌಂಢ್ ಎಫೆಕ್ಟ್‌... ಇದು ಗುರುವಾರ ಬಿಡುಗಡೆ ಆದ ಜುರಾಸಿಕ್ ವರ್ಲ್ಡ್ ಚಿತ್ರದ ಬಿಡಿ ಚಿತ್ರಣ.

ಕ್ರಿಸ್ ಪ್ರಾಟ್ ನಾಯಕನಾಗಿ, ಬ್ರೈಸಿ ಡಲ್ಲಾಸ್ ನಾಯಕ ನಟಿಯಾಗಿ ಅಭಿನಯಿಸಿರುವ ‘ಜುರಾಸಿಕ್ ವರ್ಲ್ಡ್: ಫಾಲನ್ ಕಿಂಗ್‌ಡಮ್’ ಚಿತ್ರ 2015ರಲ್ಲಿ ಬಿಡುಗಡೆ ಆಗಿದ್ದ ‘ಜುರಾಸಿಕ್ ವರ್ಲ್ಡ್’ ಚಿತ್ರದ ಮುಂದುವರೆದ ಭಾಗ. ‘ಜುರಾಸಿಕ್ ಪಾರ್ಕ್’ ಸರಣಿಯ 5ನೇ ಚಿತ್ರವೂ ಹೌದು.

ನಾನಾ ಬಗೆಯ ಡೈನೋಸರಸ್‌ಗಳು ವಾಸವಿರುವ ದ್ವೀಪದಲ್ಲಿ ಜ್ವಾಲಾಮುಖಿ ಸ್ಪೋಟಗೊಳ್ಳುವ ಮುನ್ಸೂಚನೆ ದೊರೆಯುತ್ತದೆ. ಆ ಸುಳಿವು ಸಿಕ್ಕರೂ ಅವುಗಳನ್ನು ರಕ್ಷಿಸುವ ಹೊಣೆಯಿಂದ ಸರ್ಕಾರ ಹಿಂದೆ ಸರಿಯುತ್ತದೆ. ಆಗ ಕೆಲವು ಉತ್ಸಾಹಿ ಪ್ರಾಣಿ ಪ್ರೇಮಿಗಳು ಅವುಗಳನ್ನು ರಕ್ಷಿಸುವ ಉದ್ದೇಶದಿಂದ ದ್ವೀಪಕ್ಕೆ ಕಾಲಿಡುತ್ತಾರೆ. ಅವರಿಗೆ ಒಬ್ಬ ಧನ ದಾಹಿ ಶ್ರೀಮಂತ ವ್ಯಕ್ತಿಯೊಬ್ಬ ದುರುದ್ದೇಶದಿಂದ ಅವರಿಗೆ ಬೆಂಬಲ ನೀಡುತ್ತಾನೆ.

ಆ ಧನ ದಾಹಿಯ ಕುತಂತ್ರವೇನು, ಆತನ ಮೋಸದ ಜಾಲದಿಂದ ನಾಯಕ ಹಾಗೂ ನಾಯಕಿಯನ್ನೊಳಗೊಂಡ ಉತ್ಸಾಹಿ ಯುವಕರ ಗುಂಪು ಹೇಗೆ ಹೊರಬರುತ್ತದೆ, ಆ ಗುಂಪು ದೈತ್ಯ ಪ್ರಾಣಿಗಳನ್ನು ಹೇಗೆ ಕಾಪಾಡುತ್ತದೆ, ದೈತ್ಯಕಾರದ ಡೈನೋಸರಸ್‌ನಿಂದ ಹೇಗೆ ತಪ್ಪಿಸಿಕೊಳ್ಳುತ್ತಾರೆ ಹಾಗೂ ಯುವಕರು ಕಾಪಾಡಿದ ಡೈನೋಸರಸ್‌ ರಕ್ಕಸ ಡೈನೋಸರಸ್‌ ಅನ್ನು ಹೇಗೆ ಬಗ್ಗು ಬಡಿಯುತ್ತದೆ ಎಂಬುದೇ ಚಿತ್ರದ ಕತೆ.

ಚಿತ್ರ ಕೇವಲ ಕಣ್ ತಣಿಸಿ, ರೋಚಕತೆ ಹುಟ್ಟಿಸಿ ಸುಮ್ಮನಾಗುವುದಿಲ್ಲ. ಪ್ರಾಣಿ ಮನುಷ್ಯನ ಸಂಬಂಧದ ಬಗ್ಗೆಯೂ ಮಾತನಾಡುತ್ತದೆ. ಬೆಂಕಿ ಉಗುಳುತ್ತಿರುವ ನಡುಗಡ್ಡೆಯ ತೀರದಿಂದ ಕೊನೆಯ ಬೋಟು ಹೊರಟು ಬಿಟ್ಟಾಗ ರಕ್ಷಣೆಗಾಗಿ ದಡಕ್ಕೆ ಬಂದು ನಿಂತ ಡೈನೋಸರಸ್‌ (ಮಾನವ ಸ್ನೇಹಿ), ನನ್ನನ್ನೂ ನಿಮ್ಮೊಂದಿಗೆ ಕರೆದುಕೊಂಡು ಹೋಗಿ ಎಂಬಂತೆ ತನ್ನದೇ ದನಿಯಲ್ಲಿ ಕೂಗಿಕೊಳ್ಳುವ ದೃಶ್ಯವಂತೂ ಮನುಕುಲದ ಮನ ಮಿಡಿಯುವಂತೆ ಮಾಡುತ್ತದೆ. ಆ ದೃಶ್ಯ ದಾಟಿಸುವ ಸಂದೇಶ ಕಾಲವನ್ನು ಮೀರಿದ್ದು. ಅದು ಇಂದಿಗೂ, ಮುಂದಿಗೂ ಪ್ರಸ್ತುತ.

ಡೈನೋಸರಸ್‌ಗಳು ಹಾಗೂ ಮನುಷ್ಯರು ಏಕೆ ಒಟ್ಟಾಗಿ ಜೀವಿಸಬಾರದು ಎಂಬ ಕಾವ್ಯಾತ್ಮಕ ಅಂಶದಿಂದ ಸಿನಿಮಾಗೆ ಅಂತ್ಯ ಮಾಡಲಾಗಿದೆ.

ಪ್ರತಿ ದೃಶ್ಯವೂ ಕಣ್ಣಿಗೆ ಅದ್ದೂರಿಯಾಗಿ ಕಾಣುವಂತೆ ನಿರ್ದೇಶಕ ಜಾಗೃತಿ ವಹಿಸಿದ್ದಾನೆ. ಲೆಕ್ಕ ಹಾಕಿ ಚಿತ್ರೀಕರಿಸಿದ್ದಾರೇನೋ ಎಂಬಂತೆ ಪ್ರತಿ ಐದು ನಿಮಿಷಕ್ಕೊಮ್ಮೆ ಪ್ರೇಕ್ಷಕ ಕುರ್ಚಿಯ ತುದಿಗೆ ಕೂರುವಂತೆ ಮಾಡುವ ದೃಶ್ಯಗಳನ್ನು ಅಚ್ಚುಕಟ್ಟಾಗಿ ಹೆಣೆಯಲಾಗಿದೆ. ದೃಶ್ಯಗಳು ಪರಿಣಾಮಕಾರಿಯಾಗಿ ಮೂಡಿಬರಲು ಸೌಂಡ್ ಎಫೆಕ್ಟ್‌ ಹಾಗೂ ಅಗಾಗ ಬಂದು ಹೋಗುವ ಸಂಗೀತ ಸಾಥ್ ನೀಡಿದೆ.

ಮಕ್ಕಳನ್ನು ಕೊಲ್ಲಲು ಡೈನೋಸರಸ್ ಓಡುವ ದೃಶ್ಯಗಳು ಬಹುತೇಕ ಎಲ್ಲಾ ಜುರಾಸಿಕ್ ಸರಣಿಯ ಚಿತ್ರಗಳಲ್ಲೂ ಇರುವಂತದ್ದೆ. ಇಲ್ಲೂ ಅದೇ ಮುಂದುವರೆದಿದೆ. ಸಾಮಾನ್ಯವಾಗಿ ಜುರಾಸಿಕ್ ಚಿತ್ರಗಳಲ್ಲಿ ಮಾನವನನ್ನು ‘ವಿಲನ್’ ಆಗಿ ತೋರಿಸುವ ಪರಿಪಾಠ ಇರಲಿಲ್ಲ. ಆದರೆ ಈ ಚಿತ್ರದಲ್ಲಿ ಡನೋಸರಸ್ ಅನ್ನು ಯುದ್ಧದ ಆಯುಧವನ್ನಾಗಿ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಲಾಗುತ್ತದೆ. ಇದು ಸ್ವಲ್ಪ ಮಟ್ಟಿಗೆ ಕ್ಲೀಶೆ ಎನಿಸುತ್ತದೆ. ಕೆಲವು ಪಾತ್ರಗಳು ಇದ್ದಕ್ಕಿದ್ದಂತೆ ಕಥೆಯಿಂದ ಮಾಯವಾಗಿ ಬಿಡುತ್ತವೆ ಮತ್ತೆ ಕತೆಗೆ ಅನುಕೂಲ ಮಾಡಿಕೊಡಲೆಂದೇ ಪ್ರತ್ಯಕ್ಷವಾಗಿಬಿಡುತ್ತವೆ. ಕತೆ ಹೇಳುವ ಕ್ರಮ ಅಲ್ಲಲ್ಲಿ ಸಡಿಲವಾಗಿದೆ ಎಂಬ ಭಾವ ಮೂಡುತ್ತದೆ. ಆದರೆ, ಕೊಟ್ಟ ಕಾಸಿಗಂತೂ ಮೋಸವಾಗದು.

ಆ್ಯಕ್ಷನ್, ರೋಮಾಂಚಕತೆ, ಅದ್ದೂರಿತನವೇ ಮುಖ್ಯವಾಗಿರುವ ಚಿತ್ರದಲ್ಲಿ ಎಲ್ಲ ನಟರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರವನ್ನು ಜೆ.ಎ.ಬಯೋನಾ ನಿರ್ದೇಶಿಸಿದ್ದಾರೆ. 2015ರ ಜುರಾಸಿಕ್ ವರ್ಲ್ಡ್ ನಿರ್ದೇಶಿಸಿದ್ದ ಕೊಲಿನ್ ಟ್ರೆವೊರ್ರಾವ್ ಅವರು ಡೆರೆಕ್ ಅವರೊಂದಿಗೆ ಸೇರಿ ಕತೆ ಬರೆದಿದ್ದಾರೆ. ನಿರ್ಮಾಪಕರಾಗಿ ಫ್ರಾಂಕ್ ಮಾರ್ಷಲ್, ಪ್ಯಾಟ್ರಿಕ್ ಕ್ರೌಲೆ, ಬೆಲೆನ್ ಅಟಿಂಜಾ ತಮ್ಮ ಜವಾಬ್ದಾರಿ ನಿರ್ವಹಿಸಿರುವುದು ಸಿನಿಮಾದ ಅದ್ದೂರಿತನದಿಂದ ಗೋಚರವಾಗುತ್ತದೆ. ಜುರಾಸಿಕ್ ಪಾರ್ಕ್ ಸೃಷ್ಠಿ ಕರ್ತ ಸ್ಟಿವನ್ ಸ್ಪೀಲ್ ಬರ್ಗ್ ಅವರು ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT