ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ಉಚಿತ ಪಡಿತರ ವ್ಯವಸ್ಥೆ: ಉದ್ಯಮಿ‌ ಸಂಕೇಶ್ವರ ಅಸಮಾಧಾನ

Last Updated 25 ಏಪ್ರಿಲ್ 2021, 9:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಕೇಂದ್ರ ಸರ್ಕಾರ ಜನತೆಗೆ ಉಚಿತ ಪಡಿತರ ವ್ಯವಸ್ಥೆ ಮಾಡುವುದು ಸರಿಯಲ್ಲ. ಇದು ದೇಶಕ್ಕೆ ಗಂಡಾಂತರವಾಗಿದ್ದು, ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ' ಎಂದು ಉದ್ಯಮಿ ವಿಜಯ‌ ಸಂಕೇಶ್ವರ ಅಸಮಾಧಾನ ವ್ಯಕ್ತಪಡಿಸಿದರು.

'ಕೇಂದ್ರ ಸರ್ಕಾರ ಪದೇ ಪದೇ ತಪ್ಪು ಮಾಡುತ್ತಿದೆ. ಕೊರೊನಾ ಮೊದಲ ಅಲೆಯ ಲಾಕ್‌ಡೌನ್ ಸಂದರ್ಭ ಹಾಗೂ ನಂತರದ‌ ಮೂರು ತಿಂಗಳು ಜನರಿಗೆ ಉಚಿತ ಪಡಿತರ ನೀಡಿತ್ತು. ಎರಡನೇ‌ ಅಲೆ ಎದ್ದಿರುವ ಈ ವೇಳೆಯೂ ದೇಶದ 80 ಕೋಟಿ ಮಂದಿಗೆ ಉಚಿತ ಪಡಿತರ ನೀಡಲು ನಿರ್ಧರಿಸಿದೆ. ಇದರಿಂದ ಕಾರ್ಮಿಕರು‌ ಕೆಲಸಕ್ಕೆ ಬರದೆ ಮನೆಯಲ್ಲೇ ಉಳಿಯುತ್ತಾರೆ.‌ ಕೈಗಾರಿಕಾ ಕ್ಷೇತ್ರದ ಮೇಲೆ‌ ಇದು ಗಂಭೀರ‌ ಪರಿಣಾಮ ಉಂಟು ಮಾಡುತ್ತದೆ' ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

'ಜನರಿಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಆದರೆ, ಉಚಿತ ಪಡಿತರ ವ್ಯವಸ್ಥೆಯಿಂದ, ಕಾರ್ಯಕ್ಷೇತ್ರಗಳಿಂದ ಮನೆಗಳಿಗೆ ತೆರಳುತ್ತಿದ್ದಾರೆ. ನಮ್ಮಂತ ದೇಶದಲ್ಲಿ ಇಂತಹ‌ ಸವಲತ್ತು ನೀಡುವುದು ಸರಿಯಲ್ಲ' ಎಂದರು.

'ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ‌ ಮುಖಂಡರು‌ ಚುನಾವಣಾ ಪ್ರಚಾರ ನಡೆಸಿರುವುದು ಸರಿಯಲ್ಲ. ಕೋವಿಡ್ ನಿಯಂತ್ರಣಕ್ಕೆ‌ ಸರ್ಕಾರ ಒಂದೆರಡು ದಿನ ವಿಳಂಬವಾದರೂ ಉತ್ತಮ ನಿರ್ಧಾರಗಳನ್ನೇ ತೆಗೆದುಕೊಂಡಿದೆ. ಆದರೆ, ಕಮಿಷನ್ ವ್ಯವಹಾರಗಳು ಅಲ್ಲಲ್ಲಿ ನಡೆಯುತ್ತಿರುವುದರಿಂದ‌ ಸ್ವಲ್ಪ ಸಮಸ್ಯೆಗಳು‌ ಎದುರಾಗುತ್ತಿವೆ. ಹೆಚ್ಚು ಜನಸಂಖ್ಯೆ ಇರುವ ನಮ್ಮ‌ ರಾಷ್ಟ್ರದಲ್ಲಿ ಇಷ್ಟು ಮಾಡಿರುವುದು ದೊಡ್ಡ ಸಾಧನೆ' ಎಂದು‌ ಅಭಿಪ್ರಾಯಪಟ್ಟರು.

'ಲಿಂಬೆ ರಸದಿಂದ ಆಮ್ಲಜನಕ ವೃದ್ಧಿ': 'ಉಸಿರಾಟ ಮತ್ತು ಆಮ್ಲಜನಕ ಸಮಸ್ಯೆಯಿಂದ ಬಳಲುತ್ತಿರುವವರು ಲಿಂಬೆ ಹಣ್ಣಿನ ರಸವನ್ನು ಮೂಗಿನಲ್ಲಿ‌ ಹಾಕಿಕೊಂಡರೇ ಅರ್ಧ ಗಂಟೆಯಲ್ಲಿ ಗಂಭೀರ ಸಮಸ್ಯೆಯಿಂದ ಹೊರಬರಬಹುದು' ಎಂದು ಸಂಕೇಶ್ವರ ಹೇಳಿದರು.

'ನನಗೆ ಗೊತ್ತಿರುವ 200 ಜನರು ಈ ಪದ್ಧತಿ‌ ಅನುಸರಿಸಿದ್ದು, ಅರ್ಧ ಗಂಟೆಯಲ್ಲಿ ಅವರಲ್ಲಿ ಆಮ್ಲಜನಕ ವೃದ್ದಿಯಾಗಿ ಉಸಿರಾಟ ಸಮಸ್ಯೆ ಕಡಿಮೆಯಾಗಿದೆ. ನಿಂಬೆಹಣ್ಣಿನ‌ ರಸವನ್ನು ಬಳಕೆ ಮಾಡುವುದರಿಂದ ಸದ್ಯ ಉಂಟಾಗಿರುವ ಆಮ್ಲಜನಕ ಕೊರತೆಯನ್ನು‌ ನೀಗಿಸಬಹುದು. ಅಲ್ಲದೇ ಇದರಿಂದ ಶೇ 80ರಷ್ಟು ಬೆಡ್‌ ಸಹ ಆಸ್ಪತ್ರೆಯಿಂದ ಖಾಲಿಯಾಗುತ್ತವೆ' ಎಂದು ಹೇಳಿದರು.

'ಡಾ. ಬಿ.ಎಂ ಹೆಗಡೆ ಹೇಳಿರುವಂತೆ ಮುಖಕ್ಕೆ ಮತ್ತು ಮೂಗಿನ‌‌‌ ಹೊಳ್ಳಿಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡರೆ ವೈರಸ್ ದೇಹದೊಳಗೆ ಪ್ರವೇಶಿಸುವುದನ್ನು ತಡೆಯಬಹುದು. ಬಿಸಿನೀರಿನ ಆವಿಯನ್ನು (ಸ್ಟೀಮ್) ತೆಗೆದುಕೊಳ್ಳುವುದರಿಂದ ಕೊರೊನಾ ವೈರಸ್‌ ತೊಂದರೆಗಳಿಂದ ದೂರ ಇರಬಹುದು. ಇದನ್ನು ನಾನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇನೆ. ಇದರಿಂದಾಗಿ ಹಿಂದಿ‌ಗಿಂತಲೂ ಈಗ ದೇಶದಾದ್ಯಂತ ನಾಲ್ಕು ಪಟ್ಟು ಓಡಾಡಿದರೂ ಏನು ಆಗಿಲ್ಲ' ಎಂದು‌ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT