ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ನಿರ್ವಹಣೆಗೆ ಜೈವಿಕ ಕೌಶಲ ಅಗತ್ಯ: ವಿಶ್ರಾಂತ ಕುಲಪತಿ ಎಂ.ಕೆ. ನಾಯಕ

‘ಜೈವಿಕ ಗಣಿಗಾರಿಕೆ ಹಾಗೂ ತ್ಯಾಜ್ಯ ನಿರ್ವಹಣೆ’ ಕಾರ್ಯಾಗಾರ
Published 26 ಆಗಸ್ಟ್ 2023, 11:11 IST
Last Updated 26 ಆಗಸ್ಟ್ 2023, 11:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಚಂದ್ರಯಾನದಲ್ಲಿ ಯಶಸ್ವಿಯಾಗಿರುವ ನಾವು, ಜೀವವೈವಿಧ್ಯವಿರುವ ಏಕೈಕ ಗ್ರಹ ಭೂಮಿಯನ್ನು ಜತನದಿಂದ ಕಾಪಾಡಿಕೊಳ್ಳಬೇಕು. ನಿರೀಕ್ಷೆಮೀರಿ ಸಂಗ್ರಹವಾಗುವ ತ್ಯಾಜ್ಯವನ್ನು ಸಂಪತ್ತನ್ನಾಗಿ ಮಾಡಲು ಜೈವಿಕ ಕೌಶಲ ಬೆಳೆಸಿಕೊಳ್ಳಬೇಕು’ ಎಂದು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎಂ.ಕೆ. ನಾಯಕ ಹೇಳಿದರು.

ನಗರದ ಬಿವಿಬಿ ಮಹಾವಿದ್ಯಾಲಯದ ಆವರಣದಲ್ಲಿರುವ ಆರ್ಕಿಟೆಕ್ ಸ್ಕೂಲ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜೈವಿಕ ಗಣಿಗಾರಿಕೆ ಹಾಗೂ ತ್ಯಾಜ್ಯ ನಿರ್ವಹಣೆ’ ಕಾರ್ಯಾಗಾರದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

‘ಉತ್ಪಾದನೆ ಹೆಚ್ಚಾದಂತೆ ತ್ಯಾಜ್ಯ ಹೆಚ್ಚುತ್ತದೆ. ಮಾನವನ ಎಲ್ಲ ಅವಶ್ಯಕತೆಯನ್ನು ಪೂರೈಸುವ ಶಕ್ತಿ ಭೂಮಿಗಿದೆ. ಆದರೆ, ದುರಾಸೆಗಳನ್ನಲ್ಲ. ಇತ್ತೀಚೆಗೆ ಮಾನವನ ದುರಾಸೆಯಿಂದ ತ್ಯಾಜ್ಯ ಹೆಚ್ಚುತ್ತಿದ್ದು, ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿಲ್ಲ. ಪರಿಣಾಮ ಪರಿಸರ ಮಾಲಿನ್ಯ, ಅನಾರೋಗ್ಯದಂಥ ಗಂಭೀರ ಸಮಸ್ಯೆ ಎದುರಿಸುತ್ತಿದ್ದೇವೆ’ ಎಂದು ಅಭಿಪ್ರಾಯಪಟ್ಟರು.

‘ಜನಸಂಖ್ಯೆ ಹೆಚ್ಚಿದಂತೆ ತ್ಯಾಜ್ಯ ನಿರ್ವಹಣೆ ಸಮಸ್ಯೆಯೂ ಹೆಚ್ಚುತ್ತದೆ. 2050ಕ್ಕೆ ಪ್ರಪಂಚದ ಜನಸಂಖ್ಯೆ 950 ಕೋಟಿ ತಲುಪುವ ಅಂದಾಜಿದ್ದು, ಅದಕ್ಕೆ ತಕ್ಕಂತೆಯೇ ಆಹಾರ, ವಸತಿ, ಇಂಧನ ಹಾಗೂ ಮೂಲ ಸೌಲಭ್ಯವೂ ಹೆಚ್ಚಾಗಬೇಕು. ಅವು ಹೆಚ್ಚಾದಂತೆ ತ್ಯಾಜ್ಯದ ಪ್ರಮಾಣವೂ ಹೆಚ್ಚಾಗುತ್ತದೆ. ಇದರ ಸಮರ್ಪಕ ನಿರ್ವಹಣೆಗೆ ಸಂಬಂಧಪಟ್ಟ ಅಧಿಕಾರಿ, ಎಂಜಿನಿಯರ್‌ಗಳಿಗೆ ಪೂರ್ವದಲ್ಲಿಯೇ ಪ್ರಾಯೋಗಿಕ ಶಿಕ್ಷಣ ನೀಡಬೇಕು. ಕೃಷಿ ತ್ಯಾಜ್ಯ, ಇ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯ ಹಾಗೂ ಎಲ್ಲ ಬಗೆಯ ತ್ಯಾಜ್ಯಕ್ಕೂ ಪರಿಹಾರ ಜೈವಿಕ ವಿಜ್ಞಾನದಲ್ಲಿದೆ. ಅದನ್ನು ಅರಿತು, ವೈಜ್ಞಾನಿಕವಾಗಿ ನಿರ್ವಹಿಸಬೇಕಿದೆ’ ಎಂದು ಹೇಳಿದರು.

ದಾಕ್ಷಾಯಣಿ ಜಾಬಶೆಟ್ಟಿ ಫೌಂಡೇಷನ್‌ ಮುಖ್ಯಸ್ಥ ಬಾಲಚಂದ್ರ ಜಾಬಶೆಟ್ಟಿ, ‘ತ್ಯಾಜ್ಯ ಸರಿಯಾಗಿ ನಿರ್ಹಹಣೆ ಮಾಡಿಲ್ಲವೆಂದು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ₹2,900 ಕೋಟಿ ದಂಡ ವಿಧಿಸಿ, ಒಂದು ವರ್ಷದ ಒಳಗೆ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದೆ. ಈಗಾಗಲೇ ಏಳು ತಿಂಗಳು ಮುಕ್ತಾಯವಾಗಿದ್ದು, ನಿಗದಿತ ಅವಧಿಯಲ್ಲಿ ಆದೇಶ ಪಾಲಿಸದಿದ್ದರೆ ಎರಡು ಪಟ್ಟು ದಂಡ ಪಾವತಿಸಬೇಕಾಗಬಹುದು. ರಾಜ್ಯದಲ್ಲಿ 170 ಲಕ್ಷ ಟನ್‌ ತ್ಯಾಜ್ಯವಿದ್ದರೆ, ಅದರಲ್ಲಿ 4.50 ಲಕ್ಷ ಟನ್‌ ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ಇದೆ’ ಎಂದು ತಿಳಿಸಿದರು.

ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದ ರಜಿಸ್ಟರ್‌ ಬಸವರಾಜ ಅನಾಮಿ, ಪ್ರೊ.ಎಂ.ಬಿ. ಪಾಟೀಲ ಮಾತನಾಡಿದರು. ಶರಣಬಸಪ್ಪ ಪಟ್ಟೇದ, ಜಗದೀಶ ಐ.ಎಚ್. ಇದ್ದರು. ಕೆಎಲ್ಇ ಸಿವಿಲ್ ಎಂಜಿನಿಯರ್ ವಿಭಾಗ, ಗ್ರೀನ್ ಲ್ಯಾಂಡ್ ಬಯೋಟೆಕ್, ದಾಕ್ಷಾಯಣಿ ಜಾಬಶೆಟ್ಟಿ ಫೌಂಡೇಷನ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು.

ಸ್ಥಾವರವಾದ ಸರ್ಕಾರ: ಶಿವಕುಮಾರ ಸ್ವಾಮೀಜಿ

‘ಕಪ್ಪತಗುಡ್ಡ ಸಂರಕ್ಷಣೆಗೆ ಸಂಬಂಧಿಸಿ ಐಎಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಿದ್ದರೂ ಗುಡ್ದ ಅತಿಕ್ರಮಣ ಹಾಗೂ ಅಲ್ಲಿರುವ ಮರ–ಗಿಡಗಳನ್ನು ಕಡಿಯಲಾಗುತ್ತಿದೆ. ಚಲನಶೀಲತೆ ಕಳೆದುಕೊಂಡು ಸರ್ಕಾರ ಸ್ಥಾವರವಾಗಿಬಿಟ್ಟಿದೆ’ ಎಂದು ಕಪ್ಪತಗುಡ್ಡದ ಶಿವಕುಮಾರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

‘ಪರಿಸರ ಅರಣ್ಯ ಹಾಗೂ ಮರ–ಗಿಡಗಳು ಅಗತ್ಯವೇ ಇಲ್ಲ ಎಂದು ಅವುಗಳ ಚಿಂತನೆ ಮಾಡುವುದನ್ನೇ ಬಿಟ್ಟಿದ್ದೇವೆ. ಇದು ನಿಷ್ಪ್ರಯೋಜಕ ಮನೋಭಾವ. ದುಡ್ಡು ಮತ್ತು ಅಧಿಕಾರದ ಬೆನ್ನು ಹತ್ತಿದ ಮನಸ್ಸಿಗೆ ಪರಿಸರದ ಮಹತ್ವ ಎಂದಿಗೂ ತಿಳಿಯುವುದಿಲ್ಲ’ ಎಂದರು.

‘89 ಸಾವಿರ ಹೆಕ್ಟೇರ್ ವಿಸ್ತೀರ್ಣ ಇರುವ ಕಪ್ಪತಗುಡ್ಡವನ್ನು ಅರಣ್ಯ ಇಲಾಖೆ ಕಾಪಾಡಬೇಕು. ಹಳಿ ಮೇಲೆ ಹೋಗುವ ವ್ಯವಸ್ಥೆ ಇತ್ತೀಚೆಗಿನ ವರ್ಷಗಳಲ್ಲಿ ಹಳಿಬಿಟ್ಟು ಸಾಗುತ್ತಿದೆ. ಬಾಹ್ಯ ತ್ಯಾಜ್ಯಕ್ಕಿಂತ ಮನಸ್ಸಿನಲ್ಲಿ ಅಗಾಧವಾದಷ್ಟು ತ್ಯಾಜ್ಯ ತುಂಬಿಕೊಂಡಿದೆ. ಅನುಭಾವದ ಬೆಳಕಿನ‌ ಕಡೆ ದೃಷ್ಟಿ ಹಾಯಿಸಿದರೆ ತ್ಯಾಜ್ಯ ಸರಿದು ಸುತ್ತಲಿನ ಪರಿಸರ ಶುಚಿಯಾಗುತ್ತದೆ. ವ್ಯವಸ್ಥೆ ಸೋತಿದೆ ಕುಟುಂಬ ವ್ಯವಸ್ಥೆ ದುರ್ಬಲವಾಗಿದೆ. ಅಧ್ಯಾತ್ಮದ ಹಸಿವು ಮತ್ತು ಒಲವು ಮೂಡಿಸಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT