ಶನಿವಾರ, ಆಗಸ್ಟ್ 20, 2022
21 °C

ಗಾಂಜಾ ಸಾಗಾಟ: ಇಬ್ಬರ ಬಂಧನ, ಆರೋಪಿಗಳಿಂದ ₹97,400 ಮೌಲ್ಯದ ವಸ್ತು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ದೇಶಪಾಂಡೆನಗರದ ದೇಸಾಯಿ ವೃತ್ತದ ಚರ್ಚ್‌ ಬಳಿ ಉಪನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಗದಗ ಜಿಲ್ಲೆಯ ತಿಮ್ಮಾಪೂರದ ಮಾರುತಿ ಹರನಶಿಕಾರಿ (21) ಹಾಗೂ ಚಂದಪ್ಪ ಹರನಶಿಕಾರಿ (25) ಬಂಧಿತರು.

‘ಆರೋಪಿಗಳಿಂದ 5 ಕೆ.ಜಿ 100 ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್ ಸೇರಿ ₹94,700 ಮೌಲ್ಯದ ವಸ್ತು ಹಾಗೂ ₹1 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಪಿ. ಕೃಷ್ಣಕಾಂತ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹಾವೇರಿ ಜಿಲ್ಲೆಯ ಶಿಶುವಿನಾಳ ಗ್ರಾಮದ ವ್ಯಕ್ತಿಯೊಬ್ಬನಿಂದ ಗಾಂಜಾ ಖರೀದಿಸಿದ್ದ ಆರೋಪಿಗಳು, ಹುಬ್ಬಳ್ಳಿ ಮತ್ತು ಗದಗದಲ್ಲಿ ಮಾರಾಟ ಮಾಡಲು ಮುಂದಾಗಿದ್ದರು. ಈ ಕುರಿತು ಸಿಕ್ಕ ಮಾಹಿತಿ ಮೇರೆಗೆ, ಉಪನಗರ ಠಾಣೆ ಇನ್‌ಸ್ಪೆಕ್ಟರ್‌ ಎಸ್‌.ಕೆ. ಹೊಳೆಣ್ಣವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಮಾಲು ಸಮೇತ ಆರೋಪಿಗಳನ್ನು ಬಂಧಿಸಿದೆ’ ಎಂದು ಹೇಳಿದರು.

ಪಿಯುಸಿ ಓದುತ್ತಿದ್ದರು:

‘ಆರೋಪಿ ಮಾರುತಿ ಗದುಗಿನ ಖಾಸಗಿ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿರುವುದಾಗಿ ಹೇಳಿದ್ದಾನೆ. ಮತ್ತೊಬ್ಬ ಕೆಲಸವಿಲ್ಲದೆ ಓಡಾಡಿಕೊಂಡಿದ್ದ. ಆರೋಪಿಗಳ ವಿರುದ್ಧ ಬೇರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಇನ್‌ಸ್ಪೆಕ್ಟರ್ ಹೊಳೆಣ್ಣವರ ಮಾಹಿತಿ ನೀಡಿದರು.

ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪಿಎಸ್‌ಐಗಳಾದ ಸೀತಾರಾಮ್, ಅಶೋಕ ಬಿ.ಎಸ್‌.ಪಿ., ಸಿಬ್ಬಂದಿ ಸುನೀಲ ಪಾಂಡೆ, ಮಲ್ಲಿಕಾರ್ಜುನ ದನಿಗೊಂಡ, ಮಂಜುನಾಥ ಯಕ್ಕಡಿ, ಕರಬಸಪ್ಪ ನೆಲಗುಡ್ಡ, ಬಸವರಾಜ ಸುಣಗಾರ, ಉಮೇಶ ಹೆದ್ದೇರಿ, ರೇಣಪ್ಪ ಸಿಕ್ಕಲಗೇರ, ರವಿ ಹೊಸಮನಿ, ನಾಗರಾಜ ಬೀರಣ್ಣವರ, ಸಂತೋಷ ಅಳಗವಾಡಿ, ಮಾಬುಸಾಬ ಮುಲ್ಲಾ ಹಾಗೂ ಮಂಜು ಕಮತದ ಅವರಿಗೆ ಪೊಲೀಸ್ ಕಮಿಷನರ್ ಆರ್. ದಿಲೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು