ಶುಕ್ರವಾರ, ಜನವರಿ 28, 2022
25 °C
ನಾಗರಿಕ ವೇದಿಕೆಯಿಂದ ಪ್ರತಿಭಟನೆ; ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಸಚಿವರಿಗೆ ಮನವಿ ಸಲ್ಲಿಕೆ

ಹುಬ್ಬಳ್ಳಿ ಚನ್ನಮ್ಮ ಸರ್ಕಲ್ ಮೇಲ್ಸೇತುವೆ ರಸ್ತೆ ಕಾಮಗಾರಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದಲ್ಲಿ ಮೇಲ್ಸೇತುವೆ ರಸ್ತೆ (ಟ್ರಾಫಿಕ್ ಐಲ್ಯಾಂಡ್) ಕಾಮಗಾರಿ ವಿರೋಧಿಸಿ, ನಾಗರಿಕರ ವೇದಿಕೆ ಸದಸ್ಯರು ಗುರುವಾರ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. ಕಾಮಗಾರಿ ವಿರುದ್ಧ ಘೋಷಣೆ ಕೂಗಿದ ಸದಸ್ಯರು, ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು. 

ವೇದಿಕೆ ಅಧ್ಯಕ್ಷ ಡಿ.ಎಂ. ಶಾನಭಾಗ ಮಾತನಾಡಿ, ‘ಯಾವುದೇ ಕಾಮಗಾರಿಯನ್ನು ಆರಂಭಿಸುವುದಕ್ಕೆ ಮುಂಚೆ ಅದರಿಂದಾಗುವ ಅನುಕೂಲಗಳ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಆದರೆ, ಮೇಲ್ಸೇತುವೆ ರಸ್ತೆ ನಿರ್ಮಾಣ ವಿಷಯದಲ್ಲಿ ನಾಗರಿಕರಿಂದ ಸಲಹೆ ಮತ್ತು ಅಹವಾಲು ಸ್ವೀಕರಿಸದೆ ಅವೈಜ್ಞಾನಿಕವಾಗಿ  ಕಾಮಗಾರಿ ಆರಂಭಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮೇಲ್ಸೇತುವೆ ರಸ್ತೆಯ ವಿನ್ಯಾಸ ಹಾಗೂ ಸಂಚಾರ ವ್ಯವಸ್ಥೆ ಕುರಿತು ಭಾರತೀಯ ಆರ್ಕಿಟೆಕ್ಟ್ ಎಂಜಿನಿಯರ್‌ಗಳ ಸಂಸ್ಥೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ  ಹಾಗೂ ಇತರ ಸಂಘಟನೆಗಳಿಂದ ವಿರೋಧ ಹೆಚ್ಚಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು, ಕೆಲ ಬದಲಾವಣೆಗಳನ್ನು ಮಾಡುವುದಾಗಿ ಹೇಳುತ್ತಿದ್ದಾರೆ. ಅದೂ, ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದು ಕೆಲಸ ಆರಂಭವಾದ ಬಳಿಕ. ಇಷ್ಟಕ್ಕೂ ಮೇಲ್ಸೇತುವೆಯ ಅಗತ್ಯವಾದರೂ ಏನಿದೆ’ ಎಂದು ಪ್ರಶ್ನಿಸಿದರು.

‘ಕಾಮಗಾರಿಗೂ ಮುನ್ನ ಉದ್ದೇಶಿತ ಮೇಲ್ಸೇತುವೆ ರಸ್ತೆ ಮಾರ್ಗದ ಸ್ಟೇಷನ್ ರಸ್ತೆ, ಕೊಪ್ಪಿಕರ ರಸ್ತೆ, ದಾಜಿಬಾನ ಪೇಟೆ, ಮೂರುಸಾವಿರ ಮಠ ರಸ್ತೆಯ ಅತಿಕ್ರಮಣವನ್ನು ತೆರವುಗೊಳಿಸಬೇಕು. ಇದಕ್ಕಾಗಿ ಹಿಂದೆಯೇ ಮಾಸ್ಟರ್ ಪ್ಲಾನ್ ಸಿದ್ದವಾಗಿದ್ದರೂ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಇದುವರೆಗೆ ಅನುಷ್ಠಾನಗೊಂಡಿಲ್ಲ. ಇದರಿಂದಾಗಿಯೇ ಮುಕ್ತ ಸಂಚಾರಕ್ಕೆ ತೊಂದರೆಯಾಗಿದೆ. ಮೊದಲು ಮಾಸ್ಟರ್ ಪ್ಲಾನ್ ಅನುಷ್ಠಾವಾಗಲಿ. ಇಲ್ಲದಿದ್ದರೆ, ಮೇಲ್ಸೇತುವೆ ಯೋಜನೆಯೂ ಮತ್ತೊಂದು ಬಿಆರ್‌ಟಿಎಸ್ ಯೋಜನೆಯಂತೆ ವಿಫಲವಾಗಲಿದೆ. ಇಲ್ಲದಿದ್ದರೆ ಸಂಚಾರ ದಟ್ಟಣೆಗೆ ಪರಿಹಾರವಾಗಬೇಕಾದ ಮೇಲ್ಸೇತುವೆಯೇ, ಹಲವುಸಮಸ್ಯೆಗಳನ್ನು ತಂದೊಡ್ಡಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಬಳಿಕ ತಹಶೀಲ್ದಾರ್ ಕಚೇರಿ ಅಧಿಕಾರಿ ಮೂಲಕ ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಸಾರಿಗೆ ಸಚಿವ, ಕರ್ನಾಟಕದ ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ವಿಕ್ರಂ ಶಿರೂರ, ಸಿದ್ದು ತೇಜಿ, ಕುಮಾರ ಎ., ಗೋಪಾಲ ಹಾಗೂ ವೇದಿಕೆಯ ಸದಸ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು