ಹುಬ್ಬಳ್ಳಿ: ಪ್ರಾರ್ಥನಾ ಮಂದಿರ ತೆರವು, ಗೋರಿಗಳ ಸ್ಥಳಾಂತರಕ್ಕೆ ಸಿದ್ಧತೆ
ಹುಬ್ಬಳ್ಳಿ: ಇಲ್ಲಿನ ಬೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಚರಣೆ ಮುಂದುವರಿದಿದ್ದು, ಪ್ರಾರ್ಥನಾ ಮಂದಿರ ಹಾಗೂ ಅಲ್ಲಿರುವ ನಾಲ್ಕು-ಐದು ಅಂಗಡಿಗಳನ್ನು ತೆರವು ಮಾಡಲಾಗಿದೆ.
ದರ್ಗಾ ಆವರಣದಲ್ಲಿ ದೊಡ್ಡ ಗೋರಿ ಸೇರಿದಂತೆ ಮೂರು ಗೋರಿಗಳಿವೆ. ಅವುಗಳನ್ನು ದರ್ಗಾ ಕಟ್ಟಡದ ಹಿಂದುಗಡೆ ಇರುವ ಜಾಗದಲ್ಲಿ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ. ಸ್ಥಳಾಂತರದ ಉಸ್ತುವಾರಿ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ವಹಿಸಿಕೊಂಡಿದ್ದು, ಸಂಜೆ 6ರವರೆಗೆ ಕಾಲಾವಕಾಶ ಪಡೆದಿದೆ.
ಹಜರತ್ ಸೈಯ್ಯದ್ ಮಹ್ಮದ್ ಶಾ ಖಾದ್ರಿ ಅವರ ಗೋರಿ 10*10 ಉದ್ದ-ಅಗಲವಿದ್ದು, ಅವರ ಇಬ್ಬರು ಶಿಷ್ಯಂದಿರ ಗೋರಿ 7*7 ಉದ್ದ-ಅಗಲವಿದೆ. ಇವುಗಳಿಗೆ ಧಕ್ಕೆ ಆಗದ ಹಾಗೆ ಯಥಾವತ್ತಾಗಿ ಸ್ಥಳಾಂತರಿಸಲು ನುರಿತ ಎಂಜಿನಿಯರ್'ಗಳು ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ಅಲ್ತಾಫ್ ಹಳ್ಳೂರ, 'ಗೋರಿಗಳ ಸ್ಥಳಾಂತರಕ್ಕೆ ಯಾವ ತಂತ್ರಜ್ಞಾನ ಬಳಸಬಹುದು ಎಂದು ಪರಿಣಿತರೊಂದಿಗೆ ಚರ್ಚಿಸಿದ್ದು, ಹಿಟಾಚಿ ಸೇರಿದಂತೆ ಬೃಹತ್ ಯಂತ್ರೋಪಕರಣಗಳನ್ನು ತರಿಸಿಕೊಳ್ಳಲಾಗಿದೆ. ಸಂಜೆಯೊಳಗೆ ಗೋರಿಗಳ ಸ್ಥಳಾಂತರ ಕಾರ್ಯ ಪೂರ್ಣಗೊಳಿಸಲು ಯತ್ನಿಸಲಾಗುವುದು' ಎಂದರು.
'ಇಂದು ನಡೆಯುತ್ತಿರುವ ಐತಿಹಾಸಿಕ ದರ್ಗಾ ತೆರವು ಕಾರ್ಯಾಚರಣೆ ಮುಸ್ಲಿಮ್ ಸಮುದಾಯಕ್ಕೆ ಕರಾಳ ದಿನವಾಗಿದೆ. ತೆರವು ಕಾರ್ಯಕ್ಕೆ ಸಂಬಂಧಿಸಿ ಅಧಿಕಾರಿಗಳು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕೆಲವರು ದರ್ಗಾವನ್ನು ಸಂಪೂರ್ಣ ತೆರವು ಮಾಡಲು ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ' ಎಂದು ಆರೋಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.