ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂಸ್ಟರ್‌ ಡೋಸ್‌ ವಿಚಾರ: ಬೊಮ್ಮಾಯಿ ನಾಳೆ ದೆಹಲಿಗೆ, ಆರೋಗ್ಯ ಸಚಿವರ ಜೊತೆ ಚರ್ಚೆ

Last Updated 1 ಡಿಸೆಂಬರ್ 2021, 4:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿ. 2 (ಗುರುವಾರ) ದೆಹಲಿಗೆ ಭೇಟಿ ನೀಡಲಿದ್ದು, ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಅವರೊಂದಿಗೆ ಚರ್ಚಿಸಲಿದ್ದಾರೆ.

ಬುಧವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು ‘ಬೂಸ್ಟರ್‌ ಡೋಸ್ ನೀಡುವ ಬಗ್ಗೆ ಕೇಂದ್ರದ ಅನಿಸಿಕೆ ಪಡೆಯಲಾಗುವುದು. ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ರಾಜ್ಯ ಕಾರ್ಯಪಡೆಯ ಸಭೆಯಲ್ಲಿ ಕನಿಷ್ಠ ಆರೋಗ್ಯ ಕಾರ್ಯಕರ್ತರಿಗಾದರೂ ಬೂಸ್ಟರ್‌ ಡೋಸ್‌ ನೀಡಬಹುದು ಎನ್ನುವ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ. ಇದರ ಬಗ್ಗೆ ಕೇಂದ್ರ ಸಚಿವರ ಜೊತೆ ಚರ್ಚಿಸುವೆ’ ಎಂದು ತಿಳಿಸಿದರು.

‘ಬೆಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣಕ್ಕೆ ನಿತ್ಯ ಕನಿಷ್ಠ 2,500ಕ್ಕೂ ಹೆಚ್ಚು ಜನ ವಿದೇಶದಿಂದ ಬರುತ್ತಾರೆ. ಅವರೆಲ್ಲರಿಗೂ ಪರೀಕ್ಷೆ ಕಡ್ಡಾಯಗೊಳಿಸಲಾಗಿದ್ದು, ನೆಗೆಟಿವ್‌ ವರದಿ ಬಂದರೂ ಅವರ ಮೇಲೆ ನಿಗಾ ವಹಿಸಲಾಗುವುದು. ರಾಜ್ಯಗಳ ಗಡಿಭಾಗ, ವಿಶೇಷವಾಗಿ ಕೇರಳದಿಂದ ಬಂದವರು ಮೇಲೆ ಗಮನ ಹರಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ಕೋವಿಡ್‌ ಲಸಿಕೆ ಕಡ್ಡಾಯ ಎನ್ನುವ ನಿಯಮ ಮಾಡುವುದಿಲ್ಲ. ಇದರ ಬದಲು ಲಸಿಕಾಕರಣ ಚುರುಕುಗೊಳಿಸಲಾಗುವುದು, ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಹೊಸ ತಾಲ್ಲೂಕುಗಳಿಗೆ ಮೂಲ ಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಹೈಕೋರ್ಟ್‌ ಚಾಟಿ ಬೀಸಿದ ಬಗ್ಗೆ ಕೇಳಲಾದ ಪ್ರಶ್ನೆಗೆ ‘ಕೋವಿಡ್‌ ಕಾರಣದಿಂದಾಗಿ ವಿಳಂಬವಾಗಿದೆ. ಕೆಲ ದಿನಗಳಲ್ಲಿ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಜೂನಿಯರ್‌ ವೈದ್ಯರು ಪ್ರತಿಭಟನೆ ನಡೆಸುತ್ತಿರುವ ವಿಷಯ ಗಮನಕ್ಕೆ ಬಂದಿದ್ದು, ತಕ್ಷಣವೇ ಹಣಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎರಡ್ಮೂರು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.

ಹಲವು ಕಾರ್ಯಕ್ರಮಗಳು: ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿ–ಧಾರವಾಡದಲ್ಲಿ ಬುಧವಾರ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಧಾನ ಪರಿಷತ್‌ ಚುನಾವಣೆ ಬಗ್ಗೆ ಜಿಲ್ಲೆಯ ಪಕ್ಷದ ಶಾಸಕರ ಜೊತೆ ಚರ್ಚಿಸಲಿದ್ದಾರೆ. ಬಳಿಕ ಸಭೆ ನಡೆಯಲಿದೆ. ಆಪ್ತರ ಕುಟುಂಬದವರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT