ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಾಚರಣೆಗೆ ವಾಣಿಜ್ಯನಗರಿ ಧಾರವಾಡ ಸಜ್ಜು

ಹೋಟೆಲ್‌ಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ, ಕೇಕ್‌, ಮದ್ಯಕ್ಕೆ ಹೆಚ್ಚಿದ ಬೇಡಿಕೆ
Last Updated 30 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಲವು ಏಳುಬೀಳುಗಳ 2022ನೇ ವರ್ಷಕ್ಕೆ ವಿದಾಯ ಹೇಳಿ, ನೂತನ ಸಂವತ್ಸರ 2023 ಅನ್ನು ಅದ್ಧೂರಿಯಾಗಿ ಸ್ವಾಗತಿಸಲು ವಾಣಿಜ್ಯ ನಗರಿ ಹುಬ್ಬಳ್ಳಿ ಸಜ್ಜಾಗಿದೆ. ಎರಡು ವರ್ಷಗಳಿಂದ ಮಂಕಾಗಿದ್ದ ವರ್ಷಾಂತ್ಯದ ಸಂಭ್ರಮಾಚರಣೆ ಈ ವರ್ಷ ಕಳೆಗಟ್ಟಲಿದೆ.

ಪಂಚತಾರಾ ಹೋಟೆಲ್‌ಗಳು, ಕ್ಲಬ್‌ಗಳು, ಸಂಘ– ಸಂಸ್ಥೆಗಳು ಹಾಗೂ ಕುಟುಂಬಗಳು ಹೊಸ ವರ್ಷ ಸ್ವಾಗತಿಸಿಕೊಳ್ಳಲು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಿದ್ಧವಾಗಿವೆ. ಇದೇ ನೆಪದಲ್ಲಿ ಡಿ.ಜೆ ಸಂಗೀತ, ನೃತ್ಯ, ಮೋಜು–ಮಸ್ತಿಗೆ ಯುವಜನರು ಕಾತರವಾಗಿದ್ದಾರೆ.

ನವೀನ್‌ ಹೋಟೆಲ್, ಡೆನಿಸನ್ಸ್‌, ಪ್ರೆಸಿಡೆಂಟ್‌, ಕ್ಯುಬಿಕ್, ಕ್ಲಾರ್ಕ್ಸ್‌ ಇನ್, ಹನ್ಸ್, ಓಶಿಯನ್ ಪರ್ಲ್ ಸೇರಿದಂತೆ ಕೆಲ ಹೋಟೆಲ್‌ಗಳು ಸಂಭ್ರಮಾಚರಣೆಗೆ ವಿಶೇಷ ಪ್ಯಾಕೇಜ್ ಘೋಷಿಸಿವೆ.

‘ವರ್ಷಾಂತ್ಯದ ಸಂಭ್ರಮಾಚರಣೆಗಾಗಿ ಡಿ. 31ರಂದುಡಿ.ಜೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾಗವಹಿಸುವ ಜೋಡಿಗೆ ₹3,500 ದರ ನಿಗದಿಪಡಿಸಲಾಗಿದೆ. 100ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಸಿಕೊಂಡಿದ್ದು, 300 ಜೋಡಿ ಸೇರುವ ಸಾಧ್ಯತೆ ಇದೆ’ ಎಂದು ಕ್ಯುಬಿಕ್ ಹೋಟೆಲ್ ವ್ಯವಸ್ಥಾಪಕ ಅಜಿತ್ ಜಿತೂರಿ ಹೇಳಿದರು.

‘ಡೆನಿಸನ್ಸ್ ಹೋಟೆಲ್‌ನಲ್ಲಿ ಗ್ರೂಪ್ ಡ್ಯಾನ್ಸ್‌ ಹಾಗೂ ಡಿ.ಜೆ ಪಾರ್ಟಿ ಆಯೋಜಿಸಲಾಗಿದೆ. ಜೋಡಿಗೆ ಟಿಕೆಟ್ ದರ ₹6 ಸಾವಿರ ಹಾಗೂ 12 ವರ್ಷದೊಳಗಿನ ಮಕ್ಕಳಿಗೆ ₹2 ಸಾವಿರ ನಿಗದಿಪಡಿಸಲಾಗಿದೆ. ಭರ್ಜರಿ ಭೋಜನವೂ ಇರಲಿದೆ’ ಎಂದು ಹೋಟೆಲ್ ವ್ಯವಸ್ಥಾಪಕ ಊರ್ಜಲ್ ತಿಳಿಸಿದರು.

ಕೇಕ್‌ಗೆ ಬೇಡಿಕೆ:

ಕೇಕ್ ಕತ್ತರಿಸಿ ಹೊಸ ವರ್ಷ ಸ್ವಾಗತಿಸುವ ಪರಿಪಾಠ ಇರುವುದರಿಂದ, ಕೇಕ್‌ಗಳಿಗೆ ಮುಂಗಡ ಬುಕ್ಕಿಂಗ್ ಜೋರಾಗಿದೆ.

‘ಈ ಬಾರಿ ಕೇಕ್‌ಗೆ ಬೇಡಿಕೆ ದುಪ್ಪಟ್ಟಾಗಿದೆ.ಮುಂಗಡ ಬುಕ್ಕಿಂಗ್ ಶುರುವಾಗಿದೆ. ಚಾಕಲೇಟ್, ಫೈನಾಪಲ್‌ ಕೇಕ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಒಂದು ಸಾವಿರ ಕೆ.ಜಿ.ಗೂ ಅಧಿಕ ಕೇಕ್‌ ಮಾರಾಟವಾಗುವ ಸಾಧ್ಯತೆ ಇದೆ’ ಎಂದು ಡೋಪೇಜ್ ಬೇಕರಿ ಮಾಲೀಕರುತ್ವಿಕ್ ಸುಬ್ರಹ್ಮಣ್ಯ ಆಶಾಭಾವನೆ ವ್ಯಕ್ತಪಡಿಸಿದರು.

ಮದ್ಯ ಮಾರಾಟ ಹೆಚ್ಚಳದ ನಿರೀಕ್ಷೆ:

ಹೊಸ ವರ್ಷಾಚರಣೆ ಹಾಗೂ ಮದ್ಯಕ್ಕೂ ವಿಶೇಷ ನಂಟು. ಹೀಗಾಗಿ ವರ್ಷಾಂತ್ಯದ ಸಂಭ್ರಮಕ್ಕೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗುವ ಸಾಧ್ಯತೆ ಇದೆ. ಬಾರ್ ಆ್ಯಂಡ್ ರೆಸ್ಟೊರೆಂಟ್‌ಗಳು ಹೆಚ್ಚಿನ ಗ್ರಾಹಕರ ನಿರೀಕ್ಷೆಯಲ್ಲಿವೆ.

‘ಕಳೆದ ವರ್ಷ ಕೋವಿಡ್‌ನಿಂದಾಗಿ ಮದ್ಯ ಮಾರಾಟ ಕುಂಠಿತವಾಗಿತ್ತು. ಕಳೆದ ವರ್ಷ ಜಿಲ್ಲೆಯಲ್ಲಿ ₹2 ಕೋಟಿಗೂ ಅಧಿಕ ಮೌಲ್ಯದ ಮದ್ಯ ಮಾರಾಟವಾಗಿತ್ತು. ಈ ಬಾರಿ ದುಪ್ಪಟ್ಟಾಗುವ ಸಾಧ್ಯತೆ ಇದೆ’ ಎಂದು ಹುಬ್ಬಳ್ಳಿ ಮದ್ಯ ಮಾರಾಟಗಾರರ ಸಂಘದ ಗೌರವಾಧ್ಯಕ್ಷ ಟಿ.ಎಂ. ಮೆಹರವಾಡೆ ಹೇಳಿದರು.

‘ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬಾರ್‌ಗಳು ಡಿ. 31ರಂದುರಾತ್ರಿ 11.30ರವರೆಗೆ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಜ. 1ರಂದು ರಾತ್ರಿ 1 ಗಂಟೆವರೆಗೂ ಕಾರ್ಯನಿರ್ವಹಿಸಲಿವೆ’ ಎಂದು ಹುಬ್ಬಳ್ಳಿ ಬಾರ್‌ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ ಕುಮಾರ ಶೆಟ್ಟಿ ತಿಳಿಸಿದರು.

ಪೊಲೀಸ್ ಬಿಗಿ ಬಂದೋಬಸ್ತ್:
ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಹು–ಧಾ ಪೊಲೀಸ್‌ ಕಮಿಷನರೇಟ್‌ ಮುಂಜಾಗ್ರತಾ ಕ್ರಮವಾಗಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಡಲು ಮುಂದಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ನಿರ್ಧರಿಸಿದೆ.

ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತ, ಕೊಪ್ಪಿಕರ್ ರಸ್ತೆ, ಇಂಡಿ ಪಂಪ್‌ ವೃತ್ತ, ಹೊಸೂರು ವೃತ್ತ, ಶಿರೂರು ಪಾರ್ಕ್‌, ನವನಗರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲು ಯೋಜಿಸಿದೆ.

ಸಂಜೆ 7ರಿಂದ ರಾತ್ರಿ 2ರವರೆಗೆ ಕರ್ತವ್ಯ ನಿರ್ವಹಿಸಲಿರುವ ಸಿಬ್ಬಂದಿ, ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಕರ್ತವ್ಯ ನಿರ್ವಹಿಸಲಿದ್ದಾರೆ. ರಾತ್ರಿ ಅನಗತ್ಯವಾಗಿ ಸಂಚರಿಸುವ ವಾಹನಗಳ ಮೇಲೆ ನಿಗಾ ಇಡಲಿದ್ದಾರೆ. ಧಾರ್ಮಿಕ ಸ್ಥಳಗಳ ಬಳಿ ಪೊಲೀಸ್ ಬಂದೋಬಸ್ತ್‌ ಇರಲಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಸಿಪಿ ಸಾಹಿಲ್‌ ಬಾಗ್ಲಾ, ‘ಅಹಿತಕರ ಘಟನೆಗಳು ಸಂಭವಿಸದಂತೆ ಹೊಸ ವರ್ಷ ಆಚರಿಸಬೇಕು. ಕುಡಿದ ಮತ್ತಲ್ಲಿ ಅಸಭ್ಯವಾಗಿ ವರ್ತಿಸುವವರ, ಮಹಿಳೆಯರನ್ನು ಚುಡಾಯಿಸುವವರ ಮತ್ತು ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಡಿ. 31ರ ರಾತ್ರಿ ನಗರದಲ್ಲಿ ಸಂಚರಿಸುವ ವಾಹನಗಳ ಮೇಲೆ ವಿಶೇಷ ಗಮನ ಇರಿಸಲಾಗುತ್ತದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿಯೇ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಪ್ರಮುಖ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಲಿವೆ’ ಎಂದು ತಿಳಿಸಿದರು.

ಹೋಟೆಲ್‌ಗಳಿಗೆ ಡಿಸಿಪಿ ಎಚ್ಚರಿಕೆ:

‘ಮನರಂಜನೆ ಕಾರ್ಯಕ್ರಮ ಆಯೋಜಿಸುವ ಹೋಟೆಲ್‌ಗಳು ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕು. ಸಂಭ್ರಮಾಚರಣೆ ನೆಪದಲ್ಲಿ ಮಾದಕವಸ್ತುಗಳಾದ ಗಾಂಜಾ, ಅಫೀಮು ತರಹದ ವಸ್ತುಗಳ ಸೇವನೆಗೆ ಅವಕಾಶ ನೀಡಬಾರದು. ಯಾವ ಸಂದರ್ಭದಲ್ಲಾದರೂ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಬಹುದು. ಮನರಂಜನೆಯಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರು ಅಂಕೆ ಮೀರಬಾರದು’ ಎಂದು ಡಿಸಿಪಿ ಸಾಹಿಲ್‌ ಬಾಗ್ಲಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT