ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಹೆಸರಲ್ಲಿ ಕಾಂಗ್ರೆಸ್ ರಾಜಕಾರಣ: ಶ್ರೀರಾಮುಲು

ದಾರಿಯುದ್ದಕ್ಕೂ ಹೂಮಳೆಗೆರೆದ ಅಭಿಮಾನಿಗಳು, ರೋಡ್‌ ಶೋ ಮೂಲಕ ರಾಮುಲು ಮತಬೇಟೆ
Last Updated 18 ಏಪ್ರಿಲ್ 2019, 13:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರಿಗೆ ನಿಜವಾದ ಗೌರವ ಕೊಟ್ಟಿದ್ದು ಬಿಜೆಪಿ. ಏಳು ದಶಕ ಆಡಳಿತ ನಡೆಸಿದ ಕಾಂಗ್ರೆಸ್‌ ಅಂಬೇಡ್ಕರ್‌ ಅವರನ್ನು ರಾಜಕೀಯವಾಗಿ ಬಳಸಿಕೊಂಡಿತು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ಬಿ. ಶ್ರೀರಾಮುಲು ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದಲ್ಲಿ ಗುರುವಾರ ನಡೆದ ರೋಡ್ ಶೋನಲ್ಲಿ ಮಾತನಾಡಿದ ಅವರು ‘ಪ್ರಧಾನಿ ಅಭ್ಯರ್ಥಿ ಯಾರು ಎಂಬುದೇ ಗೊತ್ತಿಲ್ಲದ ಕಾಂಗ್ರೆಸ್‌ ಘಟಬಂಧನ್‌ ರಚಿಸಿಕೊಂಡಿದೆ. ಅವರಲ್ಲಿ ಎಲ್ಲರಿಗೂ ಪ್ರಧಾನಿಯಾಗವ ಆಸೆಯಿದೆ. ದಿನಕ್ಕೊಬ್ಬರು ಪ್ರಧಾನಿಯಾಗುತ್ತಾರೆಯೇ’ ಎಂದು ಲೇವಡಿ ಮಾಡಿದರು.

‘ವಿಶ್ವದ ಎಲ್ಲ ರಾಷ್ಟ್ರಗಳು ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂದು ಬಯಸುತ್ತಿವೆ. ಆದರೆ, ದೇಶದ ರಾಜಕೀಯ ಪಕ್ಷಗಳು ಮೋದಿಯನ್ನು ಸೋಲಿಸುವುದೇ ನಮ್ಮ ಗುರಿ ಎನ್ನುತ್ತಿವೆ. ಇದರಲ್ಲಿ ಯಾವುದು ಸರಿ ಎನ್ನುವುದನ್ನು ನೀವೇ ನಿರ್ಧರಿಸಿ’ ಎಂದರು.

‘ದೇಶ ಬಲಿಷ್ಠವಾಗಬೇಕಾದರೆ ನರೇಂದ್ರ ಮೋದಿ ಹೇಗೆ ಅಗತ್ಯವಿದೆಯೋ, ಧಾರವಾಡ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಹೊಂದಲು ಪ್ರಹ್ಲಾದ ಜೋಶಿ ಅವರನ್ನು ಮತ್ತೆ ನೀವೆಲ್ಲರೂ ಆಯ್ಕೆ ಮಾಡುವ ಅಗತ್ಯವಿದೆ. ಮೂರು ಬಾರಿ ಸಂಸದರಾಗಿ ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನೀವೆಲ್ಲರೂ ಅವರಿಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

ಮಂಟೂರು ರಸ್ತೆಯ ಅರಳಿಕಟ್ಟಿ ಸಮುದಾಯ ಭವನದ ಬಳಿ ರಾಮುಲು ಬಂದಾಗ ಮಹಿಳೆಯರು ಆರತಿ ಮಾಡಿ ಸ್ವಾಗತಿಸಿದರು. ಅಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶೋ ಆರಂಭಿಸಿದರು. ಕೆ.ಇ.ಬಿ ಸರ್ಕಲ್‌, ಬಾಕಳೆ ಗಲ್ಲಿ, ಗಣಪತಿ ದೇವಸ್ಥಾನ, ಮರಾಠ ಗಲ್ಲಿ, ಗಣೇಶಪೇಟೆ ಮುಖ್ಯ ರಸ್ತೆ ಮೂಲಕ ದುರ್ಗದ ಬೈಲ್‌ ತನಕ ಶೋ ಜರುಗಿತು.

ಚುರುಗುಟ್ಟುವ ಬಿಸಿಲಿಯಲ್ಲಿಯೇ ನಡೆದ ಶೋನಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ದಾರಿಯುದ್ದಕ್ಕೂ ರಾಮುಲು ಅವರಿಗೆ ಹೂವಿನ ಮಳೆಗೆರೆದರು. ಅಭಿಮಾನಿಗಳು ಹೂವಿನ ಹಾರ ಹಾಕಿ ಸಂಭ್ರಮಿಸಿದರು.

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಮುಖಂಡರಾದ ಶಿವು ಮೆಣಸಿನಕಾಯಿ, ಚಂದ್ರಶೇಖರ ಗೋಕಾಕ, ಶಿವಾನಂದ ಮುತ್ತಣ್ಣನವರ, ವೀರಭದ್ರಪ್ಪ ಹಾಲಹರವಿ, ಲಕ್ಷ್ಮಿ ಬಿಜವಾಡ, ಅರುಣ ಕುಮಾರ ಹುದ್ಲಿ, ರಂಗನಾಯಕ ತಪೇಲಾ, ಸತೀಶ ಶೆಜವಾಡಕರ್, ಬಸವರಾಜ ಅಮ್ಮನಬಾವಿ, ಶಂಕ್ರಣ್ಣ ಬಿಜವಾಡ, ರಂಗಾ ಬದ್ದಿ ಇದ್ದರು.

‘ಕಮಿಷನ್‌ ಹಣದಿಂದ ಕುಮಾರಸ್ವಾಮಿ ರಾಜಕಾರಣ’

ಮುಖ್ಯಮಂತ್ರಿ ಕುಮಾರಸ್ವಾಮಿ ಗುತ್ತಿಗೆದಾರರಿಂದ ಪಡೆದ ಕಮಿಷನ್‌ ಹಣದಿಂದ ಮಂಡ್ಯದಲ್ಲಿ ಚುನಾವಣೆ ಎದುರಿಸಿದ್ದಾರೆ. ಅವರಿಗೆ ಮಂಡ್ಯ ಬಿಟ್ಟು ಬೇರೆ ಯಾವ ಕ್ಷೇತ್ರಗಳೂ ಕಾಣುತ್ತಿಲ್ಲ ಎಂದು ರಾಮುಲು ಟೀಕಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ನಮ್ಮ ಭಾಗದ ಅನೇಕ ಕಾಮಗಾರಿ ಮಗಿದು ಎರಡು, ಮೂರು ವರ್ಷಗಳಾದರೂ ಗುತ್ತಿಗೆದಾರರಿಗೆ ಸರ್ಕಾರದಿಂದ ಇನ್ನೂ ಹಣ ಬಂದಿಲ್ಲ. ಆದರೆ, ರೇವಣ್ಣ ಕಾಮಗಾರಿ ಆರಂಭವಾಗುವ ಮೊದಲೇ ಗುತ್ತಿಗೆದಾರರಿಗೆ ಹಣ ನೀಡಿದ್ದಾರೆ. ರಾಜ್ಯದ ಐದು ಜಿಲ್ಲೆಗಳಿಗೆ ಮಾತ್ರ ಸರ್ಕಾರದ ಹಣ ಸೀಮಿತವಾಗಿದೆ’ ಎಂದು ದೂರಿದರು.

‘ಜೆಡಿಎಸ್‌–ಕಾಂಗ್ರೆಸ್‌ ಕಾರ್ಯಕರ್ತರು ತಮ್ಮಷ್ಟಕ್ಕೆ ತಾವೇ ಹೊಡೆದಾಡಿಕೊಳ್ಳುತ್ತಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಸಣ್ಣ ಮಗು ಕೂಡ ಹೇಳುತ್ತಿದೆ. ಈ ಸರ್ಕಾರವನ್ನು ನಾವು ಬೀಳಿಸುವುದಿಲ್ಲ. ಅವರ ಕಿತ್ತಾಟದಿಂದಲೇ ಸರ್ಕಾರ ಉರುಳುತ್ತದೆ’ ಎಂದು ಭವಿಷ್ಯ ನುಡಿದರು.

‘ಗುರುವಾರ ನಡೆದ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಕಾಂಗ್ರೆಸ್‌ ಹಣಹಂಚಿಕೆ ಮಾಡಿದೆ. ತನ್ನ ಹಿಂಬಾಲಕರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದರೆ ಕುಮಾರಸ್ವಾಮಿಗೆ ಏನು ಕಷ್ಟ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT